ಸಾರಾಂಶ
ಕೃಷ್ಣಮೋಹನ ತಲೆಂಗಳ
ಮಂಡ್ಯ : ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ನಡುವೆ ನಿಮಗೊಂದು ಅಚ್ಚರಿ ಕಾದಿದೆ. ಮಳಿಗೆಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಡಿಜಿಟಲ್ ರೂಪಾಂತರ ಹೊಂದಿದ ಕನ್ನಡ ಶಾಸನಗಳ ಕಣಜ ನಿಬ್ಬೆರಗಾಗಿಸುತ್ತವೆ!
ಸಮ್ಮೇಳನದಲ್ಲಿಪುಸ್ತಕ ಪ್ರದರ್ಶನದ ಎ ವಿಭಾಗದಲ್ಲಿ 49, 50ನೇ ಮಳಿಗೆಯಲ್ಲಿ ದಿ ಮಿಥಿಕ್ ಸೊಸೈಟಿ ಆಯೋಜಿಸಿದ ಪ್ರದರ್ಶನದಲ್ಲಿ ಪ್ರಾಚೀನ ಕನ್ನಡ ಲಿಪಿಗಳ ಮೊಟ್ಟ ಮೊದಲ ಡಿಜಿಟಲ್ ಕಣಜ ‘ಅಕ್ಷರಭಂಡಾರ’ ಸಾಫ್ಟ್‌ವೇರ್ ಅನುಭವ ಲಭ್ಯ. ಪ್ರಾತ್ಯಕ್ಷಿಕೆ ಮೂಲಕ ಪ್ರಾಚೀನ ಕನ್ನಡದ ಸೊಗಡನ್ನು ಆನಂದಿಸಬಹುದು.
ಕನ್ನಡಿಗರು ಹಾಗೂ ಬ್ರಿಟಿಷರ ಸಹಯೋಗದಲ್ಲಿ1909ರಲ್ಲಿ ಬೆಂಗಳೂರಿನಲ್ಲಿ ದಿ ಮಿಥಿಕ್ ಸೊಸೈಟಿ ಆರಂಭವಾಯಿತು. ನೃಪತುಂಗ ಸರ್ಕಲ್ ಬಳಿ ಕೆಆರ್ ಸರ್ಕಲ್ ಸಮೀಪ ಕಚೇರಿ ಇದೆ. ಇದೊಂದು ಸರ್ಕಾರೇತರ ಸಂಘಟನೆ. ಪ್ರಾಚೀನ ಲಿಪಿಗಳ ಅಧ್ಯಯನ ಉದ್ದೇಶಕ್ಕೆ. ಸಂಸ್ಥೆ ಕಳೆದ ಸುಮಾರು ಸುಮಾರು ಐದು ವರ್ಷಗಳಿಂದ ರಾಜ್ಯದ ಆಯ್ದ ಜಿಲ್ಲೆಗಳ ಶಾಸನಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಜೋಡಿಸಿ, ಸಾಫ್ಟ್ ವೇರ್ ಸಹಾಯದಿಂದ ಜನರಿಗೆ ಶಾಸನ ಲಿಪಿಗಳ ತುಲನಾತ್ಮಕ ಅಧ್ಯಯನಕ್ಕೆ ನರವಾಗುತ್ತಿದೆ. ಭಾರತ ಮಾತ್ರವಲ್ಲ, ವಿಶ್ವದಲ್ಲೇ ಇಂತಹ ಪ್ರಯತ್ನ ಪ್ರಥಮ ಎನ್ನುತ್ತಾರೆ ಈ ತಂಡದ ನೇತೃತ್ವ ವಹಿಸಿರುವ ಸ್ವತಃ ಟೆಕಿ ಪಿ.ಎಲ್.ಉದಯಕುಮಾರ್.
ಅಕ್ಷರ ಭಂಡಾರ ಕುರಿತು ಮಾಹಿತಿ ನೀಡಿರುವ ಸಂಶೋಧಕ ಶಶಿಕುಮಾರ್ ನಾಯಕ್, ಮಿಥಿಕ್ ಸೊಸೈಟಿಯ 3ಡಿ ಸಂರಕ್ಷಣಾ ಯೋಜನಾ ತಂಡ ಪ್ರಸ್ತುತ ಬೆಂಗಳೂರು, ರಾಮನಗರ ಮತ್ತಿತರ ಜಿಲ್ಲಾ ವ್ಯಾಪ್ತಿಯ ಶಾಸನಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡುತ್ತಿದೆ. ಇದಕ್ಕೋಸ್ಕರ ವಿಶೇಷ ಸ್ಕ್ಯಾನರ್ ಬಳಸಲಾಗುತ್ತಿದೆ. ಇದು, 0.05 ಎಂಎಂ ಸೂಕ್ಷ್ಮ ಗಾತ್ರ ಅಕ್ಷರಗಳನ್ನೂ ಸ್ಕ್ಯಾನ್ ಮಾಡಿ 3ಡಿ ಚಿತ್ರ ರೂಪಿಸಿ ಅಧ್ಯಯನಕ್ಕೆ ನೆರವಾಗುತ್ತದೆ ಎನ್ನುತ್ತಾರೆ.
ಕ್ರಿ.ಶ.500ರಿಂದ ತೊಡಗಿ ಕ್ರಿ.ಶ.1800ರ ವರೆಗಿನ ಆಯಾ ಕಾಲಗಳ ಶಾಸನದ ವರ್ಣಮಾಲೆಗಳು ಸಾಫ್ಟ್ ವೇರ್ ನಲ್ಲಿ ಸಂಗ್ರಹವಾಗಿದೆ. ಒತ್ತಕ್ಷರ, ಸಂಯುಕ್ತಾಕ್ಷರಗಳನ್ನೂ ಕಾಣಬಹುದು. ಒಂದೇ ಕಾಲದ ಬೇರೆ ಬೇರೆ ರೂಪಗಳನ್ನೂ ಕಾಣಬಹುದು. ಯಾವುದೇ ಶಾಸನದ ಅಕ್ಷರವನ್ನು ಸಾಫ್ಟ್ ವೇರ್ ಬಳಸಿ ಯಾವ ಕಾಲಮಾನದ ಅಕ್ಷರವೆಂದು ಪತ್ತೆ ಹಚ್ಚಲು ಸಾಧ್ಯ. ನಮ್ಮ ಹೆಸರನ್ನು ಆಯಾ ಕಾಲದ ಶಾಸನ ಲಿಪಿಯಲ್ಲಿ ಬೆರಳಚ್ಚಿಸಿ ಖುಷಿ ಪಡಬಹುದು. ಆ ಮೂಲಕ ಶಾಸನ ಪ್ರೀತಿ ಬೆಳೆಸಬಹುದು.
ಮಾತ್ರವಲ್ಲ ಆಯಾ ಊರುಗಳ ಶಾಸನಗಳ ವಿವರಗಳು ಮ್ಯಾಪ್ ಸಹಾಯದಿಂದ ಲೊಕೇಶನ್ ಸಹಿತ ದೊರಕುತ್ತದೆ.
ಜಿಲ್ಲಾವಾರು ಶಾಸನಗಳು, ದೇಗುಲಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳ ಮಾಹಿತಿಯನ್ನೂ ಈ ತಂಡ ವ್ಯವಸ್ಥಿತವಾಗಿ ಜೋಡಿಸುತ್ತಿದೆ. ಹಲ್ಮಿಡಿ ಶಾಸನ, ಅಶೋಕನ ಕಾಲದ ಶಾಸನಗಳೂ ಇವರ ಸಂಗ್ರಹದಲ್ಲಿದೆ. ಸಂಗ್ರಹ ಕಾರ್ಯ ಈಗ ಆರಂಭಿಕ ಹಂತಲ್ಲಿದ್ದು ಇನ್ನೂ ಸಾಕಷ್ಟು ಸಂಶೋಧನೆ ಹಾಗೂ ಸಂಗ್ರಹ ಬಾಕಿ ಇದೆ.
ಪ್ರಥಮ ಬಾರಿಗೆ ಮಂಡ್ಯ ಸಮ್ಮೇಳನದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳಿಗೆ ಈ ಪ್ರಯತ್ನ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಅನುಷಾ ಮೋರ್ಚಿನ್ ಹಾಗೂ ಡಾ.ಮಧಸೂಧನ್ ಎಂ.ಎನ್.ಸಾಥ್ ನೀಡಿದ್ದಾರೆ. ಸಾಫ್ಟ್ ವೇರ್ ಡೆವಲಪರ್ ಕಾರ್ತಿಕ್ ಆದಿತ್ಯ ತಮ್ಮ ಬಿಡುವಿನ ವೇಳೆಯಲ್ಲಿ ತಾಂತ್ರಿಕ ನೆರವು ನೀಡಿದ್ದಾರೆ.
ಶುಕ್ರವಾರ ಈ ಮಳಿಗೆಗೆ ‘ಕನ್ನಡಪ್ರಭ’ ಭೇಟಿ ನೀಡಿದಾಗ ಕಿಕ್ಕಿರಿದ ಮಕ್ಕಳು ಶಾಸನಗಳ ಮಾಹಿತಿ ಪಡೆಯುತ್ತಿರುವುದು ಕಂಡುಬಂತು. ನೆಟ್ವರ್ಕ್ ಸಮಸ್ಯೆಯಿಂದ ಪ್ರಾತ್ಯಕ್ಷಿಕೆಗೆ ಸ್ವಲ್ಪ ಸಮಸ್ಯೆ ಆಗಿತ್ತು.
ಮಳಿಗೆಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಅಕ್ಷರ ಭಂಡಾರದ ಸಾಫ್ಟ್ ವೇರ್ ತೆರೆದುಕೊಂಡು ಶಾಸನಗಳ ವಿರಾಟ್ ಸ್ವರೂಪ ದರ್ಶನವಾಗುತ್ತದೆ.5ರಿಂದ 18ನೇ ಶತಮಾನದ ಅವಧಿಯ ಸುಮಾರು 600-800 ಶಾಸನ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ. ಪ್ರತಿ ಊರಿನಲ್ಲೂ ಶಾಸನಗಳಿರುತ್ತವೆ. ಅದರಲ್ಲಿ ಊರಿನ ಇತಿಹಾವಿರುತ್ತದೆ. ಆದರೆ ಶಾಸನ ಓದಬಾರದು ಎಂಬ ಅಜ್ಞಾನರಲ್ಲಿ ಇರುವುದು ಶೋಚನೀಯ.30 ಸಾವಿರದಷ್ಟು ವೆಬ್ ಪುಟಗಳನ್ನು ನಮ್ಮ ಸಂಗ್ರಹ ಹೊಂದಿದೆ. ಮಕ್ಕಳು ತಮ್ಮ ಹೆಸರುಗಳನ್ನು ಶತಮಾನಗಳ ಹಿಂದಿನ ಲಿಪಿಯಲ್ಲಿ ನೋಡಿ ರೋಮಾಂಚಿತರಾಗುತ್ತಾರೆ.
-ಪಿ.ಎಲ್. ಉದಯಕುಮಾರ್, ತಂಡದ ಮುಖ್ಯಸ್ಥರು.