ಸಾರಾಂಶ
ಬೆಂಗಳೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡಿಸಿದ ಕೆಂಪೇಗೌಡರು ನಾಡಪ್ರಭು ಎಂದೇ ಪ್ರಸಿದ್ಧರು. ನಮ್ಮ ರಾಜ್ಯದ ಇತರ ನಗರಗಳ ಅಭಿವೃದ್ಧಿಗೆ ಮಾದರಿಯಾಗಿದೆ ಬೆಂಗಳೂರು. ಕರ್ನಾಟಕದ ಗ್ರಾಮಗ್ರಾಮಗಳಿಂದ ದೇಶವಿದೇಶಗಳಿಂದ ಉದ್ಯಮಿಗಳನ್ನು ಉದ್ಯೋಗಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಮೂಲಕ ನಿಜಕ್ಕೂ ಬೆಂಗಳೂರು ಮಾದರಿ ನಗರವಾಗಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಬೆಂಗಳೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡಿಸಿದ ಕೆಂಪೇಗೌಡರು ನಾಡಪ್ರಭು ಎಂದೇ ಪ್ರಸಿದ್ಧರು. ನಮ್ಮ ರಾಜ್ಯದ ಇತರ ನಗರಗಳ ಅಭಿವೃದ್ಧಿಗೆ ಮಾದರಿಯಾಗಿದೆ ಬೆಂಗಳೂರು. ಕರ್ನಾಟಕದ ಗ್ರಾಮಗ್ರಾಮಗಳಿಂದ ದೇಶವಿದೇಶಗಳಿಂದ ಉದ್ಯಮಿಗಳನ್ನು ಉದ್ಯೋಗಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಮೂಲಕ ನಿಜಕ್ಕೂ ಬೆಂಗಳೂರು ಮಾದರಿ ನಗರವಾಗಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದ್ದಾರೆ.ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜಕ್ಕಾಗಿ ನಾವೇನಾದರೂ ಮಾಡಬೇಕು ಎಂಬುದಕ್ಕೆ ಕೆಂಪೇಗೌಡರು ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತ ಶೈಲಿ ನಮಗೆಲ್ಲರಿಗೂ ಮಾದರಿಯಾಗಲಿ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಮುಖ್ಯಅತಿಥಿಗಳಾಗಿದ್ದರು.ತಾಲೂಕು ಮಟ್ಟದ ಶ್ರೀ ನಾಡಪ್ರಭು ಕೆಂಪೇಗೌಡ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಮರ್ಥ ಚಂದ್ರಗೌಡ ನಾಗನಗೌಡ್ರ ಪ್ರಥಮ, ಕೆಪಿಎಸ್ ಪ್ರೌಢಶಾಲೆ ಮಿಜಾರು ಇಲ್ಲಿನ ಕ್ಷಮಿತಾ ದ್ವಿತೀಯ, ಮೂಡುಬಿದಿರೆ ಜೈನ ಪ್ರೌಢಶಾಲೆಯ ಆಕಾಂಕ್ಷ ಎಚ್. ಆಚಾರ್ಯ ತೃತೀಯ ಹಾಗೂ ಪ್ರಾಂತ್ಯ ಸರ್ಕಾರಿ ಪ್ರೌಢಶಾಲೆಯ ಸಂಗಮೇಶ ಶಿವಪ್ಪ ಗೂಳಿ ಸಮಾಧಾನಕರ ಬಹುಮಾನ ಪಡೆದಿದ್ದು, ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.