ಬೆಂಗಳೂರು : ಪಟಾಕಿ ಸಿಡಿತದಿಂದ 80ಕ್ಕೂ ಹೆಚ್ಚು ಜನರಿಗೆ ಗಾಯ : ಮಕ್ಕಳ ಕಣ್ಣಿಗೆ ಹೆಚ್ಚು ಹಾನಿ

| Published : Nov 02 2024, 01:38 AM IST / Updated: Nov 02 2024, 11:45 AM IST

ಬೆಂಗಳೂರು : ಪಟಾಕಿ ಸಿಡಿತದಿಂದ 80ಕ್ಕೂ ಹೆಚ್ಚು ಜನರಿಗೆ ಗಾಯ : ಮಕ್ಕಳ ಕಣ್ಣಿಗೆ ಹೆಚ್ಚು ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗಿರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಶುಕ್ರವಾರ ರಾತ್ರಿವರೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ 80ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ.

 ಬೆಂಗಳೂರು : ನಗರದಲ್ಲಿ ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗಿರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಶುಕ್ರವಾರ ರಾತ್ರಿವರೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ 80ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ.

ದೀಪಾವಳಿ ಹಬ್ಬದ ಮೊದಲ ಎರಡು ದಿನಗಳಲ್ಲೇ 80ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದೂ, ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ಇದೆ. ಗಾಯಗೊಂಡವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಮಕ್ಕಳು ಪಟಾಕಿ ಸಿಡಿಸುವಾಗ ಪಾಲಕರು ವಿಶೇಷ ಗಮನ ಹರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ಸಂಖ್ಯೆ: ನಗರದ ನಾರಾಯಣ ನೇತ್ರಾಲಯದಲ್ಲಿ 23, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 22, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 15, ಅಗರ್ವಾಲ್‌ ಕಣ್ಣಿನ ಆಸ್ಪತ್ರೆಯಲ್ಲಿ 15, ಶೇಖರ್‌ ಕಣ್ಣಿನ ಆಸ್ಪತ್ರೆಯಲ್ಲಿ 4 ರೋಗಿಗಳು ಸೇರಿ ನಗರದ ವಿವಿಧ ಆಸ್ಪತ್ರೆಗಳಲ್ಲಿ 80ಕ್ಕೂ ಅಧಿಕ ಜನ ಚಿಕಿತ್ಸೆ ಪಡೆದಿದ್ದಾರೆ. ನಾರಾಯಣ ನೇತ್ರಾಲಯದ 4 ಶಾಖೆಗಳಲ್ಲಿ ಒಟ್ಟು 23 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 19 ಮಕ್ಕಳಿದ್ದಾರೆ. ಪಟಾಕಿ ಸಿಡಿಸುವಾಗ ಗಾಯಗೊಂಡವರು 12 ಜನರಿದ್ದರೆ, ತಮ್ಮ ಪಾಡಿಗೆ ತಾವು ಹೋಗುವಾಗ ಅಥವಾ ಬೇರೆಯವರು ಸಿಡಿಸುವಾಗ ನೋಡುತ್ತಾ ನಿಂತಾಗ ಪಟಾಕಿ ಸಿಡಿದು 11 ಜನ ಗಾಯಗೊಂಡಿದ್ದಾರೆ.

ಲಘು ಪ್ರಮಾಣದ ಗಾಯಗಳಿಂದ ಹಿಡಿದು ದೃಷ್ಟಿ ದೋಷ ಸಾಧ್ಯತೆ ಇರುವ ತೀವ್ರ ಸ್ವರೂಪದ ಗಾಯಗಳಾಗಿರುವ ರೋಗಿಗಳೂ ಇದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತೀವ್ರತರದ ಗಾಯಗಳಿರುವವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಅಂತವರ ದೃಷ್ಟಿ ದೋಷದ ಪ್ರಮಾಣವನ್ನು ಅವರು ಚೇತರಿಸಿಕೊಂಡ ನಂತರವೇ ಗೊತ್ತಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.