ಮಕ್ಕಳ ಕೊಂದು ಪೊಲೀಸರಿಗೆ ತಾಯಿ ಕರೆ!

| Published : Apr 11 2024, 01:46 AM IST / Updated: Apr 11 2024, 06:34 AM IST

MURDER in up

ಸಾರಾಂಶ

ಯುಗಾದಿ ಹಬ್ಬದೂಟ ಮಾಡಿಸಿ ಮಕ್ಕಳಿಬ್ಬರನ್ನು ಮಲಗಿಸಿದ್ದ ತಾಯಿ, ರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾಳೆ.

  ಬೆಂಗಳೂರು:  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ದಿನವೇ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಪೊಲೀಸರಿಗೆ ತಾಯಿಯೊಬ್ಬಳು ಕರೆ ಮಾಡಿ ತಿಳಿಸಿರುವ ಘಟನೆ ಜಾಲಹಳ್ಳಿ ಸಮೀಪ ನಡೆದಿದೆ.

ಬೋವಿ ಕಾಲೋನಿಯ ನಿವಾಸಿ ಲಕ್ಷ್ಮಿ (6) ಹಾಗೂ ಗೌತಮ್ (8) ಹತ್ಯೆಯಾದ ದುರ್ದೈವಿ. ಈ ಕೃತ್ಯ ಎಸಗಿದ ತಾಯಿ ಗಂಗಾದೇವಿಯನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸರಗೊಂಡು ಮಂಗಳವಾರ ರಾತ್ರಿ ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಬಳಿಕ ಪೊಲೀಸರಿಗೆ ಗಂಗಾದೇವಿ ಕರೆ ಮಾಡಿದ್ದಳು. ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪತಿ ಮೇಲೆ ಪೋಕ್ಸೋ ಕೇಸ್:

ಹತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶ ಮೂಲದ ಗಂಗಾದೇವಿ ಹಾಗೂ ಬಿಬಿಎಂಪಿ ಹೊರಗುತ್ತಿಗೆ ಪೌರಕಾರ್ಮಿಕ ನರೇಶ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದು. ಜಾಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದರು. ಮದುವೆ ಬಳಿಕ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಸದಾ ಜಗಳವಾಗುತ್ತಿತ್ತು. ಕೊನೆಗೆ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಹೆತ್ತ ಮಗಳ ಜೊತೆಯೇ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ನರೇಶ್ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಯಿತು. ಆ ಪ್ರಕರಣದಲ್ಲಿ ನರೇಶ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕಳುಹಿಸಿದ್ದರು. ಪತಿ ಜೈಲು ಸೇರಿದ ಬಳಿಕ ಮತ್ತಷ್ಟು ಖಿನ್ನತೆಗೆ ಒಳಗಾದ ಗಂಗಾದೇವಿ, ಕೊನೆಗೆ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.

ಯುಗಾದಿ ದಿನವಾದ ಮಂಗಳವಾರ ರಾತ್ರಿ ಮಕ್ಕಳಿಗೆ ಹಬ್ಬದೂಟ ಮಾಡಿಸಿ ಆಕೆ ಮಲಗಿಸಿದ್ದಳು. ನಂತರ ರಾತ್ರಿ 1 ಗಂಟೆ ಸುಮಾರಿಗೆ ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಗಂಗಾದೇವಿ, ಅಂತಿಮ ಕ್ಷಣದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಕೈ ಬಿಟ್ಟಿದ್ದಾಳೆ. ಬಳಿಕ ತಾನೇ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಕರೆ ಮಾಡಿ ಮನೆಯಲ್ಲಿ ಗಲಾಟೆಯಾಗಿದೆ ತಕ್ಷಣವೇ ಬನ್ನಿ ಎಂದಿದ್ದಾಳೆ. ಈ ಮಾಹಿತಿ ಮೇರೆಗೆ ಆಕೆಯ ಮನೆಗೆ ಆ ಪ್ರದೇಶದ ಹೊಯ್ಸಳ ವಾಹನದಲ್ಲಿ ಗಸ್ತು ಸಿಬ್ಬಂದಿ ತೆರಳಿದ್ದಾರೆ. ಆಗ ತಾನೇ ಮಕ್ಕಳನ್ನು ಕೊಂದಿದ್ದಾಗಿ ಗಂಗಾದೇವಿ ಹೇಳಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಜ್ಜಿ ಹೋದ ಬಳಿಕ ಮೊಮ್ಮಕ್ಕಳ ಹತ್ಯೆ

ಪತಿಯಿಂದ ಪ್ರತ್ಯೇಕವಾದ ಬಳಿಕ ತನ್ನ ತಾಯಿ ಜತೆ ಗಂಗಾದೇವಿ ವಾಸವಾಗಿದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ, ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಳು. ಕೌಟುಂಬಿಕ ಕಲಹ ಹಾಗೂ ಆರ್ಥಿಕ ಸಮಸ್ಯೆಯಿಂದ ಜರ್ಝತಳಾಗಿ ಗಂಗಾದೇವಿ ಖಿನ್ನತೆಗೆ ಒಳಗಾಗಿದ್ದಳು. ಇದೇ ನೋವಿನಲ್ಲೇ ಆಕೆ ಮಕ್ಕಳ ಕೊಲೆಗೆ ನಿರ್ಧರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಂತೆಯೇ ಕೆಲಸದ ನಿಮಿತ್ತ ತಮ್ಮೂರಿಗೆ ಸೋಮವಾರ ಗಂಗಾದೇವಿ ತಾಯಿ ತೆರಳಿದ್ದರು. ತನ್ನ ತಾಯಿ ತೆರಳಿದ ಬಳಿಕ ಆಕೆ, ಮಕ್ಕಳ ಹತ್ಯೆಗೆ ಮಾಡಿದ್ದಾಳೆ.  ಅಜ್ಜಿ ಮನೆಯಲ್ಲಿದ್ದರೆ ಮೊಮ್ಮಕ್ಕಳು ಜೀವ ಉಳಿಯುತ್ತಿತ್ತು ಎನ್ನಲಾಗಿದೆ.