ಮಂಗ್ಳೂರಲ್ಲಿ ಮೆರಿಟೈಮ್‌ ವಿವಿ ಸ್ಥಾಪನೆಗೆ ಸಂಸದ ಬ್ರಿಜೇಶ್ ಚೌಟ ಮನವಿ

| Published : Jul 26 2025, 02:00 AM IST

ಮಂಗ್ಳೂರಲ್ಲಿ ಮೆರಿಟೈಮ್‌ ವಿವಿ ಸ್ಥಾಪನೆಗೆ ಸಂಸದ ಬ್ರಿಜೇಶ್ ಚೌಟ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ಯುನಿವರ್ಸಿಟಿ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬುಧವಾರ ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಕರ್ನಾಟಕ ವಾಣಿಜ್ಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ಯುನಿವರ್ಸಿಟಿ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬುಧವಾರ ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಮಂಗಳೂರಿನಲ್ಲಿ ಸುಸಜ್ಜಿತ ಮೆರಿಟೈಮ್‌ ವಿಶ್ವವಿದ್ಯಾಲಯ ಸ್ಥಾಪಿಸುವ ವಿಚಾರವಾಗಿ ದೆಹಲಿಯಲ್ಲಿ ಮಂಗಳವಾರ ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಅವರನ್ನು ಭೇಟಿ ಮಾಡಿದ್ದ ಸಂಸದರು ಈ ನಿಟ್ಟಿನಲ್ಲಿ ತಮ್ಮ ಗಂಭೀರ ಪ್ರಯತ್ನ ಮುಂದುವರಿಸಿದ್ದಾರೆ. ಅದರಂತೆ ಬುಧವಾರ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ವಿವಿ ಸ್ಥಾಪಿಸುವ ಅಗತ್ಯತೆ ಹಾಗೂ ಅವಕಾಶಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.ಕರ್ನಾಟಕದ 2ನೇ ಪ್ರಮುಖ ನಗರವಾಗಿರುವ ಮಂಗಳೂರು ವಿಶಾಲ ಕಡಲ ತೀರವನ್ನು ಹೊಂದಿದ್ದು, ಇಲ್ಲಿ ಮೆರಿಟೈಮ್ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಕಡಲ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಉತ್ತೇಜನ ದೊರಕಲಿದೆ. ಶ್ರೀಮಂತ ಕಡಲ ಪರಂಪರೆ ಹೊಂದಿರುವ ಮಂಗಳೂರಿನ ಭೌಗೋಳಿಕ ಅನುಕೂಲಗಳು, ಐತಿಹಾಸಿಕ ಮಹತ್ವ, ಪ್ರಮುಖ ಬಂದರುಗಳು ಮತ್ತು ವಿಶ್ವದರ್ಜೆ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಕಾರಣಕ್ಕೆ ಈ ಕಡಲನಗರಿಯಲ್ಲಿ ಮೆರಿಟೈಮ್‌ ವಿವಿ ಸ್ಥಾಪನೆ ಮಾಡುವುದಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಸಚಿವರಿಗೆ ಕ್ಯಾ.ಚೌಟ ಅವರು ಮನದಟ್ಟು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.