ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಧರ್ಮ, ಧಾರ್ಮಿಕತೆ, ಮಠಗಳು ದೇಶದ ಆತ್ಮವಿದ್ದಂತೆ ಎಂದು ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ತಿಳಿಸಿದರು.ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಭಾನುವಾರ ನಡೆದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಸಿಗಬೇಕು. ಇದಕ್ಕಾಗಿ ಸರ್ಕಾರಗಳು ಹಾಗೂ ಮಠಗಳು ಜೊತೆಯಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು.
ಸುತ್ತೂರು ಮಠದ ಗುರು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರೀ ಮಠವು ಸಮಾಜ ಸೇವೆಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಪ್ರಾಚೀನ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿರುವುದಲ್ಲದೇ, ಆಧುನಿಕ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಇಂತಹ ಮಾದರಿ ಕೆಲಸವನ್ನು ಸರ್ಕಾರದ ಜೊತೆಗೂಡಿ ಮಠಮಾನ್ಯಗಳು ಮಾಡಿದರೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ ಎಂದರು.12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಮಾಡಲು ಶ್ರಮಿಸಿದರು. ಲಿಂಗ ತಾರತಮ್ಯ ಹೋಗಲಾಡಿಸಲು, ಸ್ತ್ರೀ ಸಮಾನತೆ ದೊರಕಿಸಲು, ಎಲ್ಲರಿಗೂ ಸಮಾನ ಅವಕಾಶ ನೀಡುವ ಆಲೋಚನೆಗಳನ್ನು ಸಮಾಜದ ಮುಂದೆ ಪ್ರತಿಪಾದಿಸಿದರು. ಕರ್ನಾಟಕದ ನೆಲದಲ್ಲಿ ಮಠಗಳು, ಶರಣರು ಸಮಾಜ ಸುಧಾರಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗಲೂ ಜನರ ಅನೇಕ ಸಮಸ್ಯೆಗಳನ್ನು ಸುತ್ತೂರು ಮಠ ಪರಿಹಾರ ಒದಗಿಸುತ್ತಿದೆ ಎಂದು ಅವರು ತಿಳಿಸಿದರು.
ಯೋಗದ ಬಗ್ಗೆ ಮೂಗು ಮುರಿದ ಅನೇಕ ದೇಶಗಳೇ ಅದನ್ನು ಈಗ ಅಳವಡಿಸಿಕೊಂಡಿವೆ. ಇಂದು ವಿಶ್ವದಲ್ಲಿ ಮುಕ್ಕಾಲು ಭಾಗ ಜನರು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ದೇಶದ ಪ್ರಾಚೀನ ಪರಂಪರೆ ಹಾಗೂ ಆಧ್ಯಾತ್ಮಿಕತೆಯೂ ವೈಜ್ಞಾನಿಕ ತಳಹದಿಯಲ್ಲಿ ರೂಪುಗೊಂಡಿದೆ ಎಂದು ಅವರು ಹೇಳಿದರು.ವಿಶ್ವದಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ದೇಶಗಳಲ್ಲಿ ಧರ್ಮ, ಪರಂಪರೆ, ಆಧ್ಯಾತ್ಮಿಕತೆಯಲ್ಲಿ ನಂಬಿಕೆ ಇಟ್ಟಿರುವ ದೇಶ ನಮ್ಮದು. ಬೇರೆ ದೇಶಗಳಲ್ಲಿ ಧರ್ಮದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದ್ದರೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ನಮ್ಮ ಜನ್ಮಭೂಮಿಯಲ್ಲಿ ಇಂದಿಗೂ ದೇವರ ಮೇಲೆ ನಂಬಿಕೆಯಿದ್ದು, ಸರ್ವ ಧರ್ಮ ಸಮಭಾವ ಹೊಂದಿದ್ದಾರೆ. ನಮ್ಮಲ್ಲಿ ಧರ್ಮವೇ ಶ್ರೇಷ್ಠ ಎಂದು ಅವರು ತಿಳಿಸಿದರು.
ಮುದ್ದೇನಹಳ್ಳಿ ಸತ್ಯಸಾಯಿ ಮಂದಿರದ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಸುತ್ತೂರು ಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ರಾಜೇಂದ್ರ ಶ್ರೀಗಳು ಮಹಾನ್ ತ್ಯಾಗಿಗಳಾಗಿದ್ದು, ಸೇವೆಯ ಪರಂಪರೆ ಹುಟ್ಟು ಹಾಕಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮಾಜದ ಎಲ್ಲರಿಗೂ ಸೇವೆ ನೀಡುವ ಉದ್ದೇಶದಿಂದ ಸಂಸ್ಥೆಯೂ ಕೆಲಸ ಮಾಡುತ್ತಿದೆ. ಸರ್ವರಿಗೂ ಶಿಕ್ಷಣ, ಆಹಾರ, ಆರೋಗ್ಯ ನೀಡಬೇಕಾದರೆ ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.ಶಾಂತಿ ಸ್ಥಾಪಿಸಿದ ಮಠ
ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಇಂದು ದೇಶ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಲು ಸಾಧ್ಯವಾಗಿಲ್ಲ. ಆದರೆ, ಸಾವಿರ ವರ್ಷಗಳ ಹಿಂದೆಯೇ ರಾಜ ರಾಜರುಗಳ ನಡುವಿನ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಿದ ಕೀರ್ತಿ ಸುತ್ತೂರು ಮಠಕ್ಕೆ ಸಲ್ಲುತ್ತದೆ ಎಂದು ಸ್ಮರಿಸಿದರು.ರಾಜೇಂದ್ರ ಶ್ರೀಗಳು ತಮ್ಮ ಇಡೀ ಬದುಕನ್ನೇ ಸಮಾಜಕ್ಕೆ, ಸೇವೆಗೆ ಸಮರ್ಪಿಸಿದವರು. ಶ್ರೀಗಳ ಹೃದಯ ಬೆಣ್ಣೆಗಿಂತಲೂ ಮೃದುವಾಗಿತ್ತು. ಸತ್ಪುರುಷರ ಹೃದಯ ಅವರದು. ಅವರ ಬದುಕು ತ್ಯಾಗ ಮತ್ತು ಸೇವೆಯ ಸಂಗಮ. ಅಂತಹ ವಿಶೇಷ ಗುಣ ಅವರಲ್ಲಿತ್ತು. ಅವರು ಈ ಭಾಗದಲ್ಲಿ ಮಾತ್ರವಲ್ಲ ಹಲವೆಡೆ ಮನೆ ಮನೆಯ ದೀಪವಾಗಿ ಜೀವಂತವಾಗಿ ಬೆಳೆಗುತ್ತಿದ್ದಾರೆ. ಸೇವೆ, ಶಿಕ್ಷಣದ ಮಹಾನ್ ವೃಕ್ಷ ಸ್ಥಾಪಿಸಿ ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಬಬಿತಾ ವಿಜಯಶಂಕರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಇದ್ದರು. ಜೆಎಸ್‌ಎಸ್ ಲಲಿತಾಕಲಾ ವೃಂದದವರು ಪ್ರಾರ್ಥಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ಸೋಮಶೇಖರ್ ಸ್ವಾಗತಿಸಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ವಂದಿಸಿದರು. ಡಾ.ಎಂ.ಎನ್. ನಂದೀಶ್ ಹಂಚೆ ನಿರೂಪಿಸಿದರು.----
ಕೋಟ್...ಆಧುನಿಕ ಕಾಲದಲ್ಲಿ ನೂತನ ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಿದ್ದರೂ, ನಮ್ಮ ಸಂಸ್ಕೃತಿ ಪರಂಪರೆಗೆ ಮೊದಲು ಆದ್ಯತೆ ನೀಡಬೇಕು. ನಮ್ಮತನವನ್ನು ಎಂದಿಗೂ ನಾವು ಬಿಟ್ಟು ಕೊಡಬಾರದು.
- ಪಿ.ಎಸ್. ಶ್ರೀಧರನ್ ಪಿಳ್ಳೈ, ಗೋವಾದ ರಾಜ್ಯಪಾಲರು----
ಶರಣರು ರಚಿಸಿರುವ ವಚನಗಳಲ್ಲಿ ಜೀವನದ ಸಾರವೇ ಅಡಗಿದೆ. ಸಾಮಾನ್ಯರೂ ಅರ್ಥ ಮಾಡಿಕೊಳ್ಳಬಹುದಾದ ತತ್ವ ವಚನದಲ್ಲಿ ಇವೆ. ಹೀಗಾಗಿ, ವಚನ ಸಾಹಿತ್ಯವು ದೇಶದ ಎಲ್ಲಾ ಭಾಗದಲ್ಲೂ ದೊರೆಯುವಂತೆ ಆಗಬೇಕು. ಇದಕ್ಕಾಗಿ ಬಹುಭಾಷೆಗೆ ವಚನ ಸಾಹಿತ್ಯವನ್ನು ಅನುವಾದಿಸಬೇಕು.- ಸದ್ಗುರು ಶ್ರೀ ಮಧುಸೂದನ ಸಾಯಿ, ಮುದ್ದೇನಹಳ್ಳಿ ಸತ್ಯಸಾಯಿ ಮಂದಿರ