ಮುಡಾ ನಿವೇಶನ ವಿವಾದ ಕುರಿತು ತನಿಖೆ ಚುರುಕು

| Published : Jul 07 2024, 01:17 AM IST / Updated: Jul 07 2024, 07:27 AM IST

ಸಾರಾಂಶ

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಲ್ಲಿ ನಡೆದಿರುವ 50:50 ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ಚುರುಕುಗೊಂಡಿದೆ.

 ಮೈಸೂರು :  ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಲ್ಲಿ ನಡೆದಿರುವ 50:50 ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ಚುರುಕುಗೊಂಡಿದೆ.

ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಆಯುಕ್ತ, ಹಿರಿಯ ಐಎಎಸ್ ಅಧಿಕಾರಿ ಆರ್‌. ವೆಂಕಟಾಚಲಪತಿ ಮತ್ತು ನಗರ ಯೋಜನೆ ವಿಭಾಗದ ನಿರ್ದೇಶಕ ಎಂ.ಸಿ.ಶಶಿಕುಮಾರ್‌, ಜಂಟಿ ನಿರ್ದೇಶಕ ಶಾಂತಲಾ ನೇತೃತ್ವದ ತಂಡ ಈಗಾಗಲೇ ಮೈಸೂರಿಗೆ ಆಗಮಿಸಿದ್ದು, ಹಗರಣದ ತನಿಖೆ ಆರಂಭಿಸಿದೆ. ಮುಡಾ ಕಚೇರಿಯಲ್ಲಿ ತನಿಖೆ ಆರಂಭಿಸಿರುವ ತಂಡ, ವಿಶೇಷ ಭೂ ಸ್ವಾಧಿನಾಧಿಕಾರಿಯಿಂದ ಅಗತ್ಯ ಮಾಹಿತಿ ಕಲೆ ಹಾಕಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಕಳೆದ ಒಂದು ವರ್ಷಗಳ ಹಿಂದಿನ ಕಡತಗಳನ್ನೂ ಪರಿಶೀಲನೆ ಮಾಡುತ್ತಿದೆ. 50:50 ಅನುಪಾತದ ಸೈಟ್ ಹಂಚಿಕೆಯಲ್ಲಿ ನಡೆದಿರುವ ಅಕ್ರಮ, ಮುಡಾ ಆದೇಶ ಪ್ರತಿಗಳು, ಮೂಲ ವಾರಸುದಾರರು, ಜಿಪಿಎ ಪಡೆದವರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಡಾ ನೂತನ ಆಯುಕ್ತ ರಘುನಂದನ್, ತನಿಖಾಧಿಕಾರಿಗಳು ಕೆಲವು ದಾಖಲಾತಿಗಳ ಫೈಲ್‌ಗಳನ್ನು ಕೇಳಿದ್ದು, ದಾಖಲಾತಿಗಳನ್ನು ನೀಡುತ್ತಿದ್ದೇವೆ. ತನಿಖೆ ಮುಗಿಯುವವರೆಗೂ ಯಾವುದೇ ಸಭೆ ನಡೆಸದಂತೆ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ, ಯಾವುದೇ ಸಭೆ ಮತ್ತು ನಿರ್ಣಯ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅಕ್ರಮವಾಗಿ ಮುಡಾ ಸೈಟ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖಾ ತಂಡ ರಚಿಸಿದೆ. ನಾಲ್ಕು ವಾರಗಳಲ್ಲಿ ತನಿಖಾ ವರದಿ ನೀಡುವಂತೆ ತಂಡಕ್ಕೆ ನಿರ್ದೇಶನ ನೀಡಿದೆ.