ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಇದೇನೋ ರಸ್ತೆಯೋ? ಕೆಸರ ಗದ್ದೆಯೋ? ಎನ್ನುವ ಸ್ಥಿತಿ ಪಟ್ಟಣದ ಇಂಚಲ ರಸ್ತೆಯಿಂದ ನಾಗನೂರ ಕ್ರಾಸ್ ಹತ್ತಿರ ಸೇರುವ ಮುರಕೀಭಾಂವಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚಾರ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಬೈಲಹೊಂಗಲ ಪಟ್ಟಣದಿಂದ ಸುಮಾರು 5 ಕಿಮೀ ಅಂತರವಿರುವ ಈ ರಸ್ತೆಯ ಸ್ಥಿತಿ ಅಯ್ಯೋಮಯವಾಗಿದೆ. ತೀವ್ರ ಸ್ವರೂಪ ಕೆಟ್ಟಿದ್ದರಿಂದ ಈ ಮಾರ್ಗದಲ್ಲಿ ಅಪಾಯಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಗೋಳು ಕೇಳುವವರು ಯಾರು ಎನ್ನುವಂತಾಗಿದೆ.ರಸ್ತೆಯುದ್ದಕ್ಕೂ ಆಳುದ್ದ ತಗ್ಗು, ದಿನ್ನೆ ಆವೃತವಾಗಿದ್ದರಿಂದ ವಾಹನ ಸವಾರರು, ನಾಗರಿಕರು ನರಕಯಾತನೆ ಅನುಭವಿಸುವಂತಾಗಿದೆ. ರೈತಾಪಿ ವರ್ಗದ ಜನರು ಹೆಚ್ಚಾಗಿ ಈ ಮಾರ್ಗ ಬಳಸುವದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ತೆರಳಲು, ದವಸ ಧಾನ್ಯಗಳನ್ನು ತರುವುದು ತುಂಬಾ ಕಠಿಣವಾಗಿದೆ. ಬೈಕ್ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಸಾಗಬೇಕಾಗಿದೆ. ಆಕಸ್ಮಾತ ಆಯ ತಪ್ಪಿ ಬಿದ್ದರೆ ಗಾಯಗೊಂಡು ಆಸ್ಪತ್ರಗೆ ದಾಖಲಾಗಿ ಲಕ್ಷಾಂತರ ರುಪಾಯಿ ಸುರಿಯುವಂತಾಗಿದೆ ಎಂದು ನಾಗರಿಕರು ಜನಪ್ರತಿನಿಧಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಒಂದು ಕಡೆ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಸಂಭ್ರಮದಲ್ಲಿ ತೊಡಗಿ ಜನರ ಕಣ್ಣಿಗೆ ಮಣ್ಣೆರಚಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ಸರ್ಕಾರ ಜಾರಿ ಮಾಡಿದ ಶಕ್ತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಸುಮಾರು ₹500 ಕೋಟಿ ಮಹಿಳೆಯರು ಪ್ರಯಾಣ ಅನವರತ ಸಾಧನೆಗಳ ಮಹಾ ಕನಸ್ಸು ಎಂದು ಬಿಗುತ್ತಿದ್ದು ಮತ್ತೊಂದೆಡೆ ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು ವಿಪರ್ಯಾಸ.
ಜನರಿಗೆ ಅವಶ್ಯವಾಗಿ ಮೂಲ ಸೌಲಭ್ಯಗಳಲ್ಲಿ ಬೇಕಾದ ರಸ್ತೆಗಳನ್ನು ದುರಸ್ತೆ ಮಾಡದೇ ಇರುವುದು ದುರಂತ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ತೀರಾ ಹದಗೆಟ್ಟ ಇಂಥಹ ರಸ್ತೆಗಳನ್ನು ದುರಸ್ತಿ ಕಾಮಗಾರಿ ಕೈಗೊಂಡು ನಾಗರಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೋ ಕಾದು ನೋಡಬೇಕಾಗಿದೆ.ಮುರಕೀಭಾಂವಿ ರಸ್ತೆಯು ನಾಗನೂರು ಕ್ರಾಸ್‌ವರೆಗೆ ಹದಗೆಟ್ಟಿದ್ದು, ನಾಗರಿಕರು ನಮ್ಮ ಗಮನಕ್ಕೆ ತಂದಿದ್ದು, ಈ ರಸ್ತೆಯು ಜಿ.ಪಂದಿಂದ ಲೋಕೋಪಯೋಗಿ ಇಲಾಖೆಗೆ ಕಳೆದೆರಡು ವರ್ಷಗಳ ಹಿಂದೆ ಹಸ್ತಾಂತರ ಮಾಡಲಾಗಿದೆ. ಸಮಸ್ಯೆ ಕುರಿತು ಶಾಸಕರ ಗಮನಕ್ಕೆ ತಂದು ಅನುದಾನಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುವದು. ಅನುದಾನ ಬಂದ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವದು.
-ಅನಿಲ್.ಎಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬೈಲಹೊಂಗಲ
ಮುರಕೀಭಾಂವಿ ರಸ್ತೆಯು ನಾಗನೂರ ಕ್ರಾಸ್‌ವರೆಗೆ ಸಂಪೂರ್ಣವಾಗಿ ಹದಗೆಟ್ಟು ರಸ್ತೆ ತುಂಬೆಲ್ಲ ತಗ್ಗು-ದಿನ್ನೆಗಳಾಗಿ ಮಳೆಗಾಲದಲ್ಲಿ ಹೊಂಡಗಳ ಸಾಮ್ರಾಜ್ಯವಾಗಿದೆ. ದಿನನಿತ್ಯ ರೈತಾಪಿ ವರ್ಗ ತಮ್ಮ ಜಮೀನುಗಳಿಗೆ ತೆರಳಲು ಹರ ಸಾಹಸ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಶಾಸಕರು ಇತ್ತ ಕಡೆ ಗಮನ ಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು.-ಈಶ್ವರ ಶಿಲ್ಲೇದಾರ, ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ.