ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಪೋರೇಟ್ ಸಂಸ್ಥೆಗಳ ಕೈಯಲ್ಲಿ ಧಾರಾವಾಹಿಗಳು ಸಿಲುಕಿಕೊಂಡಿವೆ. ಅವರು ಹೇಳಿದಂತೆ ಈಗ ಕೇಳಬೇಕು. ಇಲ್ಲಿ ನಿರ್ದೇಶಕನಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ, ಕಥೆ- ಸಂಭಾಷಣೆಗಾರರಿಕೆ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಇಲ್ಲ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ಅಭಿಪ್ರಾಯಪಟ್ಟರು.ಮೈಸೂರು ಸಾಹಿತ್ಯ ಸಂಭ್ರಮ 9ನೇ ಆವೃತ್ತಿ - 2025 ಕಾರ್ಯಕ್ರಮದಲ್ಲಿ ಅವರು ಸಾಹಿತ್ಯ- ಸಿನಿಮಾ - ಹಳ್ಳಿ ಹಂಬಲದ ತೆಕ್ಕೆಯಲ್ಲಿ ಕುರಿತು ಅವರು ಮಾತನಾಡಿದರು.
ಧಾರಾವಾಹಿಗಳಿಗೆ ಯಾರೋ ನಿರ್ಧರಿಸುತ್ತಾರೆ. ಇನ್ನಾವುದೋ ಭಾಷೆಯಲ್ಲಿ ನಿರ್ಮಿಸಿ, ನಮ್ಮ ಭಾಷೆಗೆ ತಂದು ತುರುಕುತ್ತಾರೆ. ಧಾರಾವಾಹಿ ಮನೋರಂಜನಾ ಮಾರ್ಗವಾಗಿದೆ. ಕೆಲವರಿಗೆ ಧಾರಾವಾಹಿ ನೋಡದೆ ಹೋದರೆ ಹುಚ್ಚು ಹುಡಿಯುತ್ತದೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದೆ. ಹಿಂದಿನ ಧಾರವಾಹಿಗಳಲ್ಲಿ ಸದಭಿರುಚಿ ಇರುತಿತ್ತು ಎಂದರು.ಸಿನಿಮಾ ಜಗತ್ತಿನ ಕುರಿತು ಮಾತನಾಡಿದ ಅವರು, ಅಮೆರಿಕಾ ಅಮೆರಿಕಾ ಸಿನಿಮಾ ಮೌಂಟ್‌ಎವರೆಸ್ಟ್‌ರೀತಿ ಕುಳಿತುಬಿಟ್ಟಿದೆ. ಅದು ಈಗಲೂ ನನಗೆ ಪ್ರತಿಸ್ಪರ್ಧಿಯಂತಿದೆ. ಒಂದು ರೀತಿಯಲ್ಲಿ ವೈರಿಯೇ ಎನ್ನಲೂ ಬಹುದು. ಸಿನಿಮಾ ರಂಗದಲ್ಲಿ ಹೀಗೆ ಆಗುತ್ತದೆ, ಇದೇ ಆಗುತ್ತದೆ ಎನ್ನುವ ಕಲ್ಪನೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಅಮೆರಿಕಾ ಅಮೆರಿಕಾ ಸಿನಿಮಾ ಉದಾಹರಣೆ ಎಂದರು.
ಸಿನಿಮಾ ಮಾಡಿ 25 ವರ್ಷವಾದರೂ ಈಗಲೂ ಜನರು ಅಮೆರಿಕಾಗೆ ಹೋದರೆ ಚಿತ್ರೀಕರಣವಾಗಿರುವ ಜಾಗವನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ಸಿನಿಮಾದಷ್ಟೆ ಯಶಸ್ಸನ್ನು ‘ಮಾತಾಡು. ಮಾತಾಡು ಮಲ್ಲಿಗೆ’ ನೀಡುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ನಡೆಯಲಿಲ್ಲ. ನನ್ನ ಸಿನಿಮಾಗಳಲ್ಲಿ ಖ್ಯಾತ ಕವಿಗಳ ಹಾಡುಗಳನ್ನು ಅಳವಡಿಸುವಾಗಲೂ ಕೂಡಾ ಕಥೆಯ ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹೀಗಾಗಿಯೇ ‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ‘ಯಾವ ಮೋಹನ ಮುರಳಿ ಕರೆಯಿತೋ, ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ಆ ಬೆಟ್ಟದಲ್ಲಿ..’ ಭಾವಗೀತೆಗಳು ಕಥೆಗೆ ಪೂರಕವಾಗಿ ಇರುವುದರಿಂದ ಬಳಕೆ ಮಾಡಿಕೊಳ್ಳಲಾಯಿತು ಎಂದರು.ಕುವೆಂಪು ಹಾಗೂ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ನನ್ನ ಮೇಲೆ ಹೆಚ್ಚು ಪರಿಣಾಮ ಬೀರಿತು. ಇಬ್ಬರದೂ ಬೇರೆ-ಬೇರೆ ನಿಲುವಾದರೂ, ಉದ್ದೇಶ ಒಂದೇ ಆಗಿತ್ತು. ಟ್ಯಾಗೋರ್ ಅವರು ಪ್ರಪಂಚ ಪರ್ಯಾಟನೆ ಮಾಡಿ ಕೃತಿಗಳನ್ನು ರಚನೆ ಮಾಡಿದರು, ಗೀತಾಂಜಲಿಯನ್ನು ಬರೆದರು, ಅದನ್ನು ಇಂಗ್ಲಿಷ್ ಗೂ ತಾವೇ ಅನುವಾದ ಮಾಡಿದರು. ಕುವೆಂಪು ಅವರು ಕುಪ್ಪಳಿ ಬಿಟ್ಟರೆ ಮೈಸೂರು, ಬಳಿಕ ಮೈಸೂರಿನಿಂದ ಮತ್ತೆ ಕುಪ್ಪಳಿ. ಆದರೂ ಅವರು ಜಗತ್ತನ್ನು ದರ್ಶನ ಮಾಡಿಸಿದ ರೀತಿ. ಜಗತ್ತನ್ನು ಕಂಡ ರೀತಿಯನ್ನು ನಾವು ವರ್ಣಿಸಲು ಆಗುವುದಿಲ್ಲ ಎಂದರು.
ವಿಮರ್ಶಕ ಡಾ.ಸಿ. ನಾಗಣ್ಣ ಗೋಷ್ಠಿಯನ್ನು ನಿರ್ವಹಿಸಿದರು.