ಸಿಎಂ ಪತ್ನಿಗೆ ಮುಡಾದಿಂದ ನೀಡಿದ್ದ 14 ನಿವೇಶನಗಳ ಸ್ಥಳ ಮಹಜರು - ದೂರುದಾರನ ಸಮ್ಮುಖ ಲೋಕಾ ಪೊಲೀಸರಿಂದ ಪರಿಶೀಲನೆ

| Published : Oct 05 2024, 12:44 PM IST

Siddaramaiah
ಸಿಎಂ ಪತ್ನಿಗೆ ಮುಡಾದಿಂದ ನೀಡಿದ್ದ 14 ನಿವೇಶನಗಳ ಸ್ಥಳ ಮಹಜರು - ದೂರುದಾರನ ಸಮ್ಮುಖ ಲೋಕಾ ಪೊಲೀಸರಿಂದ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸೈಟು ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ಮುಂದುವರಿದಿದೆ.

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸೈಟು ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ಮುಂದುವರಿದಿದೆ. ಲೋಕಾಯುಕ್ತ ಪೊಲೀಸರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ನೀಡಲಾಗಿದ್ದ 14 ನಿವೇಶನಗಳ ಸ್ಥಳ ಮಹಜರು ನಡೆಸಿದರು.

ಅ.1ರಂದು ವಿವಾದಿತ ಕೆಸರೆ ಗ್ರಾಮದ ಸರ್ವೇ ನಂ.464 ರ 3.16 ಎಕರೆ ಭೂಮಿಯಲ್ಲಿ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿತ್ತು. ಇದೀಗ ಈ ಭೂಮಿಗೆ ಬದಲಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ವಿಜಯನಗರ 3 ಮತ್ತು 4ನೇ ಹಂತದಲ್ಲಿ ನೀಡಲಾಗಿದ್ದ 14 ನಿವೇಶನಗಳು ಇರುವ ಸ್ಥಳಗಳಿಗೆ ತೆರಳಿದ ಅಧಿಕಾರಿಗಳು ಸ್ಥಳ ಮಹಜರು ನಡೆಸಿದರು.

ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ಅಧಿಕಾರಿಗಳು, ದೂರುದಾರ ಸ್ನೇಹಮಯಿ ಕೃಷ್ಣ ಅವರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆದಿದ್ದು, ಮುಡಾ ಅಧಿಕಾರಿಗಳು ನಿವೇಶನ ಸಂಬಂಧ ಅಗತ್ಯ ದಾಖಲೆಗಳನ್ನು ನೀಡಿದರು.