ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಒಂದು ಗುರಿ, ಸಾಮಾಜಿಕ ನ್ಯಾಯದ ಪ್ರಜ್ಞೆ ಇಲ್ಲದ ಸಂಶೋಧನೆಗಳು ಬೂಸಾ ಆಗುತ್ತವೆ ಎಂದು ಜಾನಪದ ವಿದ್ವಾಂಸ ಹಾಗೂ ಲೇಖಕ ಪ್ರೊ. ಮೊಗಳ್ಳಿ ಗಣೇಶ್ ಅಭಿಪ್ರಾಯಪಟ್ಟರು.ಮೈಸೂರು ವಿವಿ ಜಾನಪದ ಅಧ್ಯಯನ ವಿಭಾಗ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘದ ವತಿಯಿಂದ ಇ.ಎಂ.ಎಂ.ಆರ್.ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ತಮ್ಮ ದಲಿತ ಜಾನಪದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇವಲ ಅಲಂಕಾರಿಕವಾಗಿ ಸಂಶೋಧನೆ ನಡೆಸಿದರೆ ಪ್ರಯೋಜನವಿಲ್ಲ. ದೇಶದಲ್ಲಿ ಬಹುಸಂಖ್ಯಾತರು ಕೆಳ ಜಾತಿಯವರೇ ಇದ್ದಾರೆ. ನಾವು ಇಷ್ಟಾದರೂ ದಲಿತ ಜಾಗೃತಿಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕನ್ನಡ ವಿವಿಯಲ್ಲಿ ನಾನು ಎಲ್ಲಾ ತರಗತಿಯಲ್ಲಿ ಈ ವಿಷಯದ ಕುರಿತು ಮಾತನಾಡುತ್ತೇನೆ. ನಾನು ನೆಪ ಮಾತ್ರಕ್ಕೆ ಜಾನಪದ ಪ್ರಾಧ್ಯಾಪಕನಷ್ಟೆ. ಆದರೆ ನಾನು ಇಡೀ ವಿಶ್ವವಿದ್ಯಾನಿಲಯಕ್ಕೆ ಪ್ರಾಧ್ಯಾಪಕ. ಏಕೆಂದರೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ನನ್ನ ಪಾಠ ಕೇಳಲು ಬರುತ್ತಾರೆ ಎಂದರು.ಪೂರ್ವಗ್ರಹ ಪೀಡಿತ ತನದಿಂದ ಆಚೆ ಬರುವುದಕ್ಕಾಗಿ ಅನೇಕ ವಿದ್ಯಾರ್ಥಿಗಳು ಆಸಕ್ತಿಯಿಂದ ನನ್ನ ತರಗತಿಗೆ ಬರುತ್ತಾರೆ. ಅಂಬೇಡ್ಕರ್ದೃಷ್ಟಿಕೋನದಿಂದ ಅಧ್ಯಯನ ಮಾಡಿದರೆ ಅಸ್ಪೃಶ್ಯತೆಗೆ ಅವಕಾಶವೇ ಇರುವುದಿಲ್ಲ. ನಾವು ಅಸ್ಪೃಶ್ಯತೆ ಎಂಬುದನ್ನು ಕೆಲವರು ಸಂಸ್ಕೃತಿ ಎನ್ನುತ್ತಾರೆ. ಉದಾಹರಣೆಗೆ ಬೆತ್ತಲೆ ಸೇವೆ ಅಸ್ಪೃಶ್ಯತೆ ಎಂದರೆ, ಅದು ನಮ್ಮ ಸಂಸ್ಕೃತಿ ಎಂದು ಕೆಲವರು ಹೇಳುತ್ತಾರೆ ಎಂದರು.ಯಾರು ಜಾತಿ ವ್ಯವಸ್ಥೆಯನ್ನು ಆರಾಧಿಸುತ್ತಾರೋ ಅವರೇ ಬಂಧಿತರು. ವಿಮೋಚನೆ ಆಗಬೇಕಿರುವುದು ನಮ್ಮನ್ನು ಬಂಧಿಸಿರುವವರು. ಆ ವಿಷಯದಲ್ಲಿ ನಾವು ಕನಿಕರಪಡಬೇಕು ಎಂದು ಅವರು ಹೇಳಿದರು.ಕನ್ನಡ ವಿವಿ ಸೇರಲು ಚಂದ್ರಶೇಖರ ಕಂಬಾರರನ್ನು ಭೇಟಿಯಾದಾಗ, ನಾನು ಕರೆದಾಗ ನೀನು ಬರಲಿಲ್ಲ. ಬಂದವರಿಗೆಲ್ಲಾ ಮೃಷ್ಟಾನ್ನಬೋಜನ ನೀಡಿದ್ದೇನೆ. ಅಲ್ಪಸ್ವಲ್ಪ ಉಳಿದಿದೆ. ಅದನ್ನೇ ಸ್ವೀಕರಿಸು ಎಂದು ಯಾವುದಾದರೂ ವಿಭಾಗದಲ್ಲಿ ಕೆಲಸ ಮಾಡು ಎಂದು ಸೂಚಿಸಿದರು. ನಾನು ಜಾನಪದ ಅಧ್ಯಯನ ವಿಭಾಗ ಆಯ್ಕೆ ಮಾಡಿಕೊಂಡೆ ಎಂದು ತಮ್ಮ ಹಳೆಯ ದಿನಗಳನ್ನು ಸ್ಮರಿಸಿದರು.ಕುವೆಂಪು ಅವರು ಕಟ್ಟಿದ ಈ ವಿವಿಯಲ್ಲಿ ನಾನು ತುಂಬಾ ಕಲಿತಿದ್ದೇನೆ. ಈ ಕ್ಷಣಕ್ಕೂ ಕೂಡ ಕಲಿಯಲು ಬಾಕಿ ಏನಿದೆ ಎಂಬ ಕುತೂಹಲ ಮತ್ತು ಬಯಕೆ ಇದೆ. ಕಾಳೇಗೌಡ ನಾಗವಾರರು ತಮ್ಮ ಭಾಷಣದಲ್ಲಿ ಸುಮಾರು ಅರ್ಧ ಶತಮಾನದ ಪರಿಚಯ ಮಾಡಿಕೊಟ್ಟಿದ್ದಾರೆ ಎಂದರು.ಈ ದೇಶದಲ್ಲಿ ತನ್ನ ಸ್ವಜಾತಿ ಕೊಂದುಕೊಂಡು ಜಾತ್ಯಾತೀತವಾದ ಒಂದು ಪ್ರಕ್ರಿಯೆ ನಡೆಸುವುದು ಕಷ್ಟ. ಅದನ್ನು ನಾಗವಾರರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಕೃತಿ ಬಿಡುಗಡೆಗೊಳಿಸಿದರು. ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಅಧ್ಯಕ್ಷತೆವಹಿಸಿದ್ದರು. ಸಿಂಡಿಕೇಟ್ ಸದಸ್ಯ ಡಾ. ನಟರಾಜ್ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು. ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ದಲಿತ ವಿದ್ಯಾರ್ಥಿ ಒಕ್ಕೂಟದ ಪುನೀತ್ ಆಲನಹಳ್ಳಿ, ಜಾಪನದ ವಿಭಾಗದ ಉಪನ್ಯಾಸಕ ಡಾ.ಎಚ್.ಪಿ. ಮಂಜು ಇದ್ದರು.