ಮೈಷುಗರ್ ಶಾಲೆ ಗುತ್ತಿಗೆ ಪ್ರಕ್ರಿಯೆ ರದ್ದು: ಶಾಸಕ ಪಿ.ರವಿಕುಮಾರ್

| Published : Jul 06 2025, 01:48 AM IST

ಮೈಷುಗರ್ ಶಾಲೆ ಗುತ್ತಿಗೆ ಪ್ರಕ್ರಿಯೆ ರದ್ದು: ಶಾಸಕ ಪಿ.ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ವಿವಾದದ ಸ್ವರೂಪ ಪಡೆದಿದ್ದ ಮೈಷುಗರ್ ಪ್ರೌಢಶಾಲೆ ಖಾಸಗಿ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಗೊಳಿಸಿ ಶಾಸಕ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಾದದ ಸ್ವರೂಪ ಪಡೆದಿದ್ದ ಮೈಷುಗರ್ ಪ್ರೌಢಶಾಲೆ ಖಾಸಗಿ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಗೊಳಿಸಿ ಶಾಸಕ ಪಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಮೈಷುಗರ್ ಶಾಲೆ ವಿಷಯ ಕುರಿತಂತೆ ಶಾಸಕ ಪಿ.ರವಿಕುಮಾರ್ ಅವರು ಮೈಷುಗರ್ ಕಾರ್ಖಾನೆ ಮಾಜಿ ಅಧ್ಯಕ್ಷರು, ರೈತ ಸಂಘದ ಪ್ರತಿನಿಧಿಗಳು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಇತರೆ ಮುಖಂಡರ ಸಭೆ ಕರೆದಿದ್ದರು.

ಸಭೆಯಲ್ಲಿ ಮೈಷುಗರ್ ಪ್ರೌಢಶಾಲೆ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಶಾಲೆ. ಇದನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಅಧಿಕಾರ ಕಾರ್ಖಾನೆ ಅಧ್ಯಕ್ಷರಿಗೆ ಇಲ್ಲ. ಆದರೂ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ. ಒಮ್ಮೆ ಖಾಸಗಿಯವರಿಗೆ ಗುತ್ತಿಗೆ ನೀಡಿದಲ್ಲಿ ಮತ್ತೆ ಆ ಆಸ್ತಿ ವಾಪಸ್ ಪಡೆದಂತಹ ಯಾವುದೇ ನಿದರ್ಶನಗಳಿಲ್ಲ. ಕಾರ್ಖಾನೆ ಆಸ್ತಿ ಖಾಸಗಿಯವರ ಪಾಲಾಗುವುದಕ್ಕೆ ಎಂದಿಗೂ ಅವಕಾಶ ನೀಡಬಾರದು ಎಂದು ಸಭೆಯಲ್ಲಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷರು ಯಾರೊಂದಿಗೂ ಚರ್ಚಿಸದೆ ಏಕಪಕ್ಷೀಯವಾಗಿ ಶಾಲೆಯನ್ನು ಗುತ್ತಿಗೆ ನೀಡುವುದಕ್ಕೆ ಟೆಂಡರ್ ಕರೆದಿದ್ದೇಕೆ. ಇದರ ಹಿಂದಿರುವ ಹುನ್ನಾರವೇನು?, ಜನಾಭಿಪ್ರಾಯವನ್ನೇ ಸಂಗ್ರಹಿಸದೆ ಟೆಂಡರ್ ಕರೆದು ವಿವಾದ ಸೃಷ್ಟಿಸಿದರು. ಶಾಲೆಯ ಹಾಜರಾತಿ ಕೊರತೆಯ ಕಾರಣವೊಡ್ಡಿ ಖಾಸಗಿ ಗುತ್ತಿಗೆ ನೀಡಲು ಮುಂದಾಗಿದ್ದಾರೆ. ವಾಸ್ತವದಲ್ಲಿ ಶಾಲೆಯಲ್ಲಿ ೮೭ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಮಂಜೂರು ಮಾಡಿದೆ. ಇಬ್ಬರು ಮಕ್ಕಳಿರುವ ಸರ್ಕಾರಿ ಶಾಲೆಯನ್ನೇ ನಡೆಸುತ್ತಿರುವಾಗ ೮೭ ಮಕ್ಕಳಿದ್ದರೂ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಮುಂದಾಗಿರುವುದೇಕೆ ಎಂದು ಪ್ರಶ್ನಿಸಿದರು.

ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಇರುವುದು ಶಾಲೆ ನಡೆಸುವುದಕ್ಕೆ, ಸಂಬಳ ಕೊಡುವುದಕ್ಕೆ, ಕಾರ್ಖಾನೆ ಚಟುವಟಿಕೆಗಳಿಗೆ ಹಣ ಬಳಸಿಕೊಳ್ಳುವುದಕ್ಕಲ್ಲ. ರೈತರು ಸಾವನ್ನಪ್ಪಿದರೆ, ಅವರ ಅನಾರೋಗ್ಯದಿಂದ ಬಳಲುತ್ತಿದ್ದರೆ ಅದಕ್ಕೆ ನೆರವಾಗುವುದಕ್ಕಾಗಿ ಪ್ರತಿ ಟನ್‌ಗೆ ೪ ರು.ನಂತೆ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ. ಹಾಗಾಗಿ ಟ್ರಸ್ಟ್ ಹಣವನ್ನು ಮುಂದೆ ಶಾಲೆಗೆ ಬಿಡುಗಡೆ ಮಾಡುವುದು ಬೇಡ. ಬೇರೆ ಮೂಲದಿಂದ ಹಣ ತಂದು ಶಾಲೆಯನ್ನು ನಡೆಸಲಿ ಎಂಬ ಮಾತುಗಳೂ ಸಭೆಯಲ್ಲಿ ಕೇಳಿಬಂದವು.

ಸಂಸದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಲೆಯ ಬೆಳವಣಿಗೆಗೆ ೫ ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಆ ಹಣವನ್ನು ಬಳಸಿಕೊಂಡು ಶಾಲೆಗೆ ಹೊಸ ರೂಪ ನೀಡುವ ಕೆಲಸ ಮಾಡಬೇಕಿದೆ. ಒಂದು ಕಾರ್ಖಾನೆಯಿಂದ ಒಂದು ಶಾಲೆ ನಡೆಸಲು ಸಾಧ್ಯವಾಗುವುದಿಲ್ಲವೇ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡದಂತೆ ಶಾಲೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಆಲೋಚನೆ ನಡೆಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು.

ಕೇವಲ ಮೈಷುಗರ್ ಪ್ರೌಢಶಾಲೆ ಮಾತ್ರವಲ್ಲ, ಸಮುದಾಯ ಭವನಗಳನ್ನೂ ಖಾಸಗಿಯವರಿಗೆ ಗುತ್ತಿಗೆ ನೀಡಬಾರದು. ಅವುಗಳನ್ನೂ ಕೂಡ ರದ್ದುಪಡಿಸಬೇಕು. ಕಾರ್ಖಾನೆ ವ್ಯಾಪ್ತಿಯ ಮೂರು ಸಮುದಾಯ ಭವನಗಳನ್ನು ನವೀಕರಣಗೊಳಿಸಿ ಬಾಡಿಗೆಗೆ ನೀಡಿದರೆ ಅದರಿಂದ ಆದಾಯ ಸೃಷ್ಟಿಸಿಕೊಳ್ಳಬಹುದು. ಯಾವುದನ್ನೂ ಖಾಸಗಿಯವರಿಗೆ ನೀಡದೆ ಎಲ್ಲವೂ ಕಾರ್ಖಾನೆ ವ್ಯಾಪ್ತಿಯೊಳಗೆ ಸರ್ಕಾರದ ನೆರವಿನೊಂದಿಗೆ ಮುನ್ನಡೆಸಬೇಕೆಂಬ ಮಾತುಗಳನ್ನು ಸಭೆಯ ಮುಂದಿಟ್ಟರು.

ಸಭೆಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷರಾದ ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ, ರೈತ ಮುಖಂಡರಾದ ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೀಲಾರ ಕೃಷ್ಣ, ಕಬ್ಬು ಬೆಳೆಗಾರರ ಒಕ್ಕೂಟದ ಸಾತನೂರು ವೇಣುಗೋಪಾಲ್, ನಗರಸಭೆ ಸದಸ್ಯರಾದ ಹೆಚ್.ಎಸ್.ಮಂಜು, ಕುಮಾರ, ಪೂರ್ಣಿಮಾ, ಮುಖಂಡರಾದ ಶಿವನಂಜು, ಜಿ.ಎ.ರಮೇಶ್, ಹನಕೆರೆ ಶಶಿಕುಮಾರ್, ಗಿರೀಶ ಇತರರಿದ್ದರು.ಗುತ್ತಿಗೆ ರದ್ದುಪಡಿಸಲು ಸಚಿವರ ಸೂಚನೆ: ಪಿ.ರವಿಕುಮಾರ್

- ಶಾಲೆಗೆ ಎಚ್‌ಡಿಕೆ ೨೫ ಕೋಟಿ ರು. ಅನುದಾನ ನೀಡಿದರೆ ಸ್ವಾಗತ

- ಅಭಿವೃದ್ಧಿ ವಿಚಾರದಲ್ಲಿ ಯಾರ ಬಳಿ ಹೋಗುವುದಕ್ಕೂ ನಾನು ಸಿದ್ಧ

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕಾರ್ಖಾನೆ ಅಧ್ಯಕ್ಷರಿಗೆ ಸೂಚಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಖಾಸಗಿಯವರಿಗೆ ಗುತ್ತಿಗೆ ನೀಡಲು ಅಧ್ಯಕ್ಷರು ನಿರ್ಧರಿಸಿ ಪ್ರಕ್ರಿಯೆ ಅರಂಭಿಸಿದ್ದರು. ಆ ನಂತರದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕರು ಶಾಲೆಯನ್ನು ಗುತ್ತಿಗೆ ನೀಡುವುದಕ್ಕೆ ವಿರುದ್ಧವಿರುವುದು ಕಂಡುಬಂದಿರುವ ಕಾರಣ ಗುತ್ತಿಗೆ ಪ್ರಕ್ರಿಯೆಯನ್ನು ಇಲ್ಲಿಗೇ ಕೈಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಾರ್ಖಾನೆ ಆಸ್ತಿಯನ್ನು ಸುಮ್ಮನೆ ಖಾಲಿ ಬಿಡುವುದರಿಂದ ಪ್ರಯೋಜನವಿಲ್ಲ. ಪಾರಂಪರಿಕ ಎಂಬ ಹೆಸರಿನಲ್ಲಿ ಪಾಳು ಬಿಡುವುದೂ ಸರಿಯಲ್ಲ. ಆದಾಯ ಸೃಷ್ಟಿಸಿಕೊಳ್ಳಬೇಕಾದರೆ ಖಾಸಗಿಯವರ ಜೊತೆ ಕೈಜೋಡಿಸುವುದು ಇಂದಿನ ವಾಸ್ತವ ಸಂಗತಿ. ಬೆಂಗಳೂರಿನಲ್ಲಿರುವ ಕಾರ್ಖಾನೆ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಆದಾಯ ಬರುವಂತೆ ಮಾಡಬಹುದು. ಮಂಡ್ಯದಲ್ಲಿ ಎಂ.ಸಿ.ರಸ್ತೆ ಆಸುಪಾಸಿನಲ್ಲಿರುವ ಕಾರ್ಖಾನೆ ಜಾಗದಲ್ಲಿ ಮಾಲ್ ನಿರ್ಮಿಸಿ ಆದಾಯ ಮೂಲ ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ಈ ಬೆಳವಣಿಗೆ ಕಾಣಬೇಕಾದರೆ ಖಾಸಗಿಯವರೊಂದಿಗೆ ಶೇ.೫೦:೫೦ ಅನುಪಾತದಲ್ಲಿ ಕೈಜೋಡಿಸುವುದು ಅನಿವಾರ್ಯ. ಪಾಳುಬಿದ್ದಿರುವ ಮೈಷುಗರ್ ಈಜು ಕೇಂದ್ರವನ್ನು ಖಾಸಗಿಯವರ ನಿರ್ವಹಣೆಗೆ ನೀಡುವಾಗಲೂ ವಿರೋಧ ವ್ಯಕ್ತವಾಗಿದ್ದರಿಂದ ನಾನೂ ಸುಮ್ಮನಾದೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಲೆಗೆ ೨೫ ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸಿಎಸ್‌ಆರ್ ಫಂಡ್‌ನ ವ್ಯಾಪ್ತಿ ಅವರಿಗೆ ದೊಡ್ಡದಾಗಿರುವುದರಿಂದ ಹೆಚ್ಚು ಹಣವನ್ನು ದೊರಕಿಸಿಕೊಡುವ ಸಾಮರ್ಥ್ಯ ಅವರಿಗಿದೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾರ ಬಳಿ ಹೋಗುವುದಕ್ಕೂ ಸಿದ್ಧನಿದ್ದೇನೆ. ಅವರು ಹಣ ನೀಡಿದಲ್ಲಿ ಶಾಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಬಹುದು ಎಂದರುಮೈಷುಗರ್ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದಕ್ಕೆ ನನ್ನ ವಿರೋಧವಿದೆ. ಈ ವಿಷಯವಾಗಿ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ. ಅಧ್ಯಕ್ಷರು ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ. ಶಾಲೆ-ಸಮುದಾಯ ಭವನಗಳು ಯಾವುದನ್ನೂ ಖಾಸಗಿ ಗುತ್ತಿಗೆ ನೀಡಬಾರದು.

- ಸಿದ್ದರಾಮೇಗೌಡ, ಮಾಜಿ ಅಧ್ಯಕ್ಷರು, ಮೈಷುಗರ್ಮೈಷುಗರ್ ಕಾರ್ಖಾನೆ ಖಾಸಗೀಕರಣ ತಪ್ಪಿಸಿದ ಮಾದರಿಯಲ್ಲೇ ಮೈಷುಗರ್ ಶಾಲೆಯನ್ನು ಖಾಸಗಿ ಗುತ್ತಿಗೆ ನೀಡುವುದರಿಂದ ತಪ್ಪಿಸೋಣ. ಶಾಲೆಯನ್ನು ಯಥಾಸ್ಥಿತಿಯಲ್ಲಿ ಉಳಿಸದೆ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಯನ್ನು ತಂದು ಉನ್ನತೀಕರಿಸಬೇಕು. ಆಗ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿ ಶಾಲೆ ಬೆಳವಣಿಗೆ ಕಾಣಲಿದೆ.

- ಸುನಂದಾ ಜಯರಾಂ, ರೈತ ಮುಖಂಡರುಯಾರ ಅಭಿಪ್ರಾಯವನ್ನೂ ಕೇಳದೆ ಖಾಸಗಿಯವರಿಗೆ ಗುತ್ತಿಗೆ ನೀಡುವ ತೀರ್ಮಾನ ಮಾಡಿದ್ದೇಕೆ. ಇವತ್ತು ಮಾಡುತ್ತಿರುವ ಕೆಲಸವನ್ನು ಟೆಂಡರ್ ಕರೆಯುವುದಕ್ಕೆ ಮೊದಲೇ ಮಾಡಬಹುದಿತ್ತು. ಕಾರ್ಖಾನೆ ಆಸ್ತಿಯನ್ನು ಇಷ್ಟಬಂದಂತೆ ಮಾಡಬಹುದೇ. ಇದಕ್ಕೆಲ್ಲಾ ಕಡಿವಾಣ ಹಾಕಿ ಶಾಲೆಯನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದೆಂಬ ಬಗ್ಗೆ ಚಿಂತಿಸಲಿ.

- ಕೆ.ಬೋರಯ್ಯ, ರೈತ ಮುಖಂಡರುಹಾಜರಾತಿ ಕೊರತೆ ಮೈಷುಗರ್ ಶಾಲೆಯಲ್ಲಿ ಮಾತ್ರವಲ್ಲ. ಜಿಲ್ಲೆಯ ೧೬೫ ಶಾಲೆಗಳಲ್ಲೂ ಇದೆ. ಅವೆಲ್ಲವನ್ನೂ ಮುಚ್ಚಲಾಗಿದೆಯೇ. ಶಿಕ್ಷಣ ಇಲಾಖೆ ಸಂಪ್ರದಾಯದಂತೆ ನೋಟೀಸ್ ಜಾರಿಗೊಳಿಸಿದೆ. ಶಾಲೆಗೆ ಹೆಚ್ಚುವರಿಯಾಗಿ ನಾಲ್ವರು ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಿಸಿದೆ. ಶಾಲೆ ಮುನ್ನಡೆಸುವುದಕ್ಕೆ ಯಾವ ತೊಂದರೆಯೂ ಇಲ್ಲ.

- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಸಂಘಜಿಲ್ಲಾಸ್ಪತ್ರೆ, ತಾಲೂಕು ಕಚೇರಿಯನ್ನು ನಡೆಸಲಾಗುವುದಿಲ್ಲ ಎಂಬು ಖಾಸಗಿ ಅವರಿಗೆ ವಹಿಸುವುದಕ್ಕೆ ಸಾಧ್ಯವೇ. ಅದೇ ರೀತಿ ಮೈಷುಗರ್ ಶಾಲೆಯನ್ನೂ ಗುತ್ತಿಗೆಗೆ ವಹಿಸಬಾರದು. ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸಿನ ಮೂಲಗಳನ್ನು ಸೃಷ್ಟಿಸಿಕೊಂಡು ಶಾಲೆಯನ್ನು ನಡೆಸುವತ್ತ ಚಿಂತಿಸಬೇಕು.

- ಅಣ್ಣಯ್ಯ, ರೈತ ಮುಖಂಡರು