ಸಾರಾಂಶ
ಹಾನಗಲ್ಲ: ಮಮತೆಯಿಂದ ಹೇಳಿದ ಸಂಗತಿಗಳನ್ನು ಮಕ್ಕಳು ಕಷ್ಟವಿಲ್ಲದೆ ಕಲಿತು ಸಂಸ್ಕಾರ, ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಾಸವೂ ಸಾಧ್ಯ ಎಂಬ ಸತ್ಯಕ್ಕೆ ಸಾಕ್ಷಿಯಾದ ತಿಳವಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ನಾದಮಯ ಸಂಸ್ಕಾರ ಶಿಬಿರ ಯಶ ಕಂಡಿದೆ.ಹಾನಗಲ್ಲ ತಾಲೂಕಿನ ತಿಳವಳ್ಳಿಯಲ್ಲಿ ಹೂವಮ್ಮ ಚಂಚಿ ಪ್ರತಿಷ್ಠಾನದ ಸಹಯೋಗದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ 15ನೇ ರಾಜ್ಯ ಮಟ್ಟದ ನಾದಮಯ ಸಂಸ್ಕಾರ ಶಿಬಿರ ನಡೆಸುತ್ತಿದೆ. 2010ರಿಂದ ಈ ವರೆಗೆ 15 ಇಂತಹ ಶಿಬಿರಗಳನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾದ ಈ ಸಂಸ್ಥೆ, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ತಿಳವಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡ ಮಕ್ಕಳಿಗೆ ಸಂತಸದ ಕಲಿಕೆಗೆ ಅವಕಾಶವಾಗಿದೆ. ಈವರೆಗೆ 1300 ಮಕ್ಕಳಿಗೆ ಇಂತಹ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಧಾರವಾಡದಲ್ಲಿ ಶಿಕ್ಷಕರಾಗಿದ್ದ ಡಾ.ಕೆ.ಗಣಪತಿ ಭಟ್ ಅವರು ಶಿಕ್ಷಕ ವೃತ್ತಿಗೆ ಶರಣು ಹೊಡೆದು, ಸಾಮಾಜಿಕ ಹಿತಕ್ಕಾಗಿ ಒಡ್ಡಿಕೊಳ್ಳುವ ಗಟ್ಟಿ ನಿರ್ಧಾರಿಂದ ಹೊಸ ಚಿಂತನೆಗೆ ಸಾಕ್ಷಿಯಾಗಿದ್ದಾರೆ. ಇಲ್ಲಿ ಸಂಗೀತ ಆಧರಿಸಿಯೇ ಬಹುತೇಕ ಕಲಿಕೆ ಇದೆ. ಪ್ರಮಾಣ ಪತ್ರ, ಪರೀಕ್ಷಾ ಕೇಂದ್ರಿತ ಶಿಕ್ಷಣ ಇಲ್ಲಿ ಇಲ್ಲ. ಪ್ರತಿಭೆಯನ್ನು ಬೆಳಗಿಸುವ ಸಂಸ್ಕಾರ ಇಲ್ಲಿದೆ. ಮಕ್ಕಳ ಕತೃತ್ವ ಶಕ್ತಿಯನ್ನು ಬೆಳೆಸುವ ಸಂಕಲ್ಪ ಈ ಶಿಬಿರಲ್ಲಿದೆ. ಜಾತಿ ಮತ ಧರ್ಮದ ಕಟ್ಟಳೆಯಿಲ್ಲದೆ ಪಾಲ್ಗೊಂಡ ಎಲ್ಲರಿಗೂ ಇಲ್ಲಿ ಯೋಗ, ಗೋಸೇವೆ, ಸುಭಾಷಿತ, ಸ್ತೋತ್ರ, ಸಂಗೀತ, ಭರತನಾಟ್ಯ, ಸಂಸ್ಕೃತ ಸಂಭಾಷಣೆ, ವೇದಗಣಿತ, ಅಮರಕೋಶ, ಭಗವದ್ಗೀತೆ, ಭಜನೆ, ಕರಕುಶಲ, ಚಿತ್ರಕಲೆ, ಪಂಚಾAಗ ಪರಿಚಯ, ನೀತಿ ಕಥೆ, ದೇಶಿ ಕ್ರೀಡೆ ಮುಂತಾದ ವಿಷಯಗಳನ್ನು ಪಠ್ಯವೆಂಬ ಪುಸ್ತಕದ ಹೊರೆ ಇಲ್ಲದೆ, ಸಿಲ್ಯಾಬಸ್ ಬರೆಸಿ ಭಯ ಹುಟ್ಟಿಸದೆ ಎಲ್ಲವನ್ನೂ ಇಲ್ಲಿ ಅರುಹುತ್ತಿದ್ದಾರೆ. ಇವೆಲ್ಲವನ್ನೂ ಬಹುತೇಕ ಸಂಗೀತದೊಂದಿಗೆ ಕಲಿಕೆಗೆ ಅವಕಾಶವಾಗಿದ್ದು ಇಲ್ಲಿನ ವಿಶೇಷ.ಈ ಶಿಬಿರದಲ್ಲಿ ಮಕ್ಕಳ ಪಾಲಕರೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ಶುದ್ಧ ಕುಂಕುಮ, ಪಂಚಗವ್ಯ ಪ್ರಾತ್ಯಕ್ಷಿಕೆ ನಡೆಯುತ್ತದೆ. ಇಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಔಪಚಾರಿಕ ಅಲ್ಲದ, ಮಕ್ಕಳ ಮನಸ್ಸಿಗೆ ಆಗಾಧ ಶಕ್ತಿ ತುಂಬುವ ಈ ಶಿಬಿರದಲ್ಲಿ ನಾಳೆಗಾಗಿ ನಮ್ಮ ನಡೆ ನುಡಿ ಆಚಾರ ವಿಚಾರಗಳನ್ನು ತಿದ್ದುವ ಕಾರ್ಯ ನಡೆಯುತ್ತಿದೆ. ಬೌದ್ಧಿಕ ಶಕ್ತಿಯನ್ನು ವಿಸ್ತರಿಸುವ ಸಂಕಲ್ಪ ಇಲ್ಲಿದೆ. ಶುದ್ಧ ಆಹಾರ ಜ್ಞಾನವನ್ನು ನೀಡಲಾಗುತ್ತಿದೆ. ಮೊಬೈಲ್ ಇಂಟರನೆಟ್‌ಗಳನ್ನು ಸದುಪಯೋಗ ಮಾಡಿಕೊಳ್ಳುವ ಬಗೆಯನ್ನು ಮಕ್ಕಳಿಗೆ ತಿಳಿಸಲಾಗುತ್ತಿದೆ.ಬೆಳಗಿನಿಂದ ರಾತ್ರಿ ಮಲಗುವವರೆಗೆ ಒಂದು ಕ್ಷಣವನ್ನು ವ್ಯರ್ಥ ಮಾಡದೇ ಸಮಯ ಪಾಲನೆಯ ಜೊತೆಗೆ ಮಾಡಬೇಕಾದ ಕಾರ್ಯಗಳತ್ತ ಚಿತ್ತ ಹಾಕಿ, ನಿತ್ಯ ನಿರಂತರವಾಗಿ ಶುದ್ಧ ಸರಳತೆಯ ಮೂಲಕ ತಮ್ಮನ್ನು ತಾವೇ ಅರಿಯುವ ಒಂದು ಸಂಸ್ಕಾರ ಶಿಬಿರ ಇದಾಗಿದೆ. ಹತ್ತು ದಿನಗಳ ಈ ಶಿಬಿರ ಮಕ್ಕಳ ಮನಸ್ಸಿನಿಂದ ಹೊರಗುಳಿಯಲು ಸಾಧ್ಯವೇ ಇಲ್ಲ. ಈ ದಿನಮಾನಗಳಲ್ಲಿ ಇಂತಹ ಶಿಕ್ಷಣ ಅವಶ್ಯ ಎಂಬುದು ಅಪ್ಪಟ ಸತ್ಯ. ಸಂಗೀತ ರಸ ಮಾಧುರ್ಯ ಎಂಬ ವಿಷಯದಲ್ಲಿ ಪಿಎಚ್‌ಡಿ ಪ್ರಬಂಧ ಮಂಡಿಸಿದ ಡಾ. ಕೆ.ಗಣಪತಿ ಭಟ್ ಅವರ ಮಾರ್ಗದರ್ಶನಲ್ಲಿ ಬಹುತೇಕ ಶಿಬಿರಗಳು ಕುಮಟಾ ತಾಲೂಕಿನ ಕತಗಾಲದಲ್ಲಿಯೇ ನಡೆದಿವೆ. ಇದನ್ನು ಹೊರತುಪಡಿಸಿ ಧಾರವಾಡ ಸಲಕಿನಕೊಪ್ಪ, ಹಳಿಯಾಳದ ಮುರ್ಕವಾಡ, ತಡಸದ ಗಾಯತ್ರಿ ತಪೋಭೂಮಿಯಲ್ಲಿ ನಡೆದಿದ್ದು, 15 ನೇ ರಾಜ್ಯ ಮಟ್ಟದ ಶಿಬಿರ ಮೇ 16 ರಿಂದ ತಿಳವಳ್ಳಿಯಲ್ಲಿ ನಡೆಯುತ್ತಿದ್ದು, ನುರಿತ ಮಾರ್ಗದರ್ಶಕರಾದ ಸುವರ್ಣಾ ಪ್ರಕಾಶ ದೇಸಾಯಿ, ರತ್ನಾ ಭಗಿನಿ, ರಾಧಾ ಜಾಧವ, ಪುಟ್ಟರಾಜ ಚಂಚಿ, ಶೈಲಾ ಬಿರಾದಾರ, ಮನೋಹರ ಶಿವಣಿಗಿ, ವೈಷ್ಣವಿ ಹಾನಗಲ್ಲ, ಪರಶುರಾಮ ಜಾಧವ, ಕೆ.ಎನ್.ಮಂಜು, ದತ್ತಾತ್ರಯ ಭಟ್, ಎಚ್.ಎನ್.ಅಂಬಿಗ, ಕೃಷ್ಣ ಲಿಂಗೇರಿ, ಭೇರೂಲಾಲ ಜೈನ ಅವರನ್ನೊಳಗೊಂಡ ತಂಡದ ಮಾರ್ಗದರ್ಶನ ಶಿಬಿರದಲ್ಲಿದೆ. ಮಕ್ಕಳಿಗೆ ಇಂತಹ ಅರ್ಥಪೂರ್ಣ ಉತ್ತಮ ಸಂಸ್ಕಾರ ನೀಡುವ ಶಿಬಿರಗಳು ನಿತ್ಯ ನಿರಂತರ ಪ್ರತಿ ತಾಲೂಕು ಹೋಬಳಿಗಳಲ್ಲಿ ನಡೆಯಬೇಕು ಎಂಬ ಹಂಬಲ ಪಾಲಕ ಪೋಷಕರದ್ದಾಗಿದೆ.ಕೋಟ್ :ನನ್ನ ಶಿಕ್ಷಕ ವೃತ್ತಿಯನ್ನು ಬಿಟ್ಟು ಕೊಟ್ಟು ಸಮಾಜಕ್ಕಾಗಿ ಒಂದಷ್ಟು ಸೇವೆ ಮಾಡಲು ಕಳೆದ 15 ವರ್ಷಗಳಿಂದ ನನ್ನ ಪ್ರಯತ್ನದಲ್ಲಿದ್ದೇನೆ. ಸಮಾಜದ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಇದೆ. ಎಲ್ಲೆಡೆ ಇಂತಹ ಶಿಬಿರ ಆಯೋಜಿಸಲು ಬೇಡಿಕೆ ಇದೆ. ಇರುವಷ್ಟು ಕಾಲ ಈ ಕೆಲಸವನ್ನು ಪ್ರಾಂಜಲ ಮನಸ್ಸಿನಿಂದ ಮಾಡುವ ಸಂಕಲ್ಪ ನನ್ನದು. . . . . . . . ಡಾ.ಕೆ.ಗಣಪತಿ ಭಟ್, ಶಿಬಿರ ಸಂಯೋಜಕರು, ಕತಗಾಲ