ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ

| Published : Aug 10 2024, 01:33 AM IST

ಸಾರಾಂಶ

ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಾಗರಪಂಚಮಿ ಹಬ್ಬದ ಹಿನ್ನೆಲೆ ನಾಗಪ್ಪನ ಕಟ್ಟೆಯಲ್ಲಿ ನಾಗಪ್ಪನಿಗೆ ಹಾಲೆರೆಯುತ್ತಿರುವ ಮಹಿಳೆಯರು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾಗರಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಗರದ ವಿವಿಧ ದೇವಸ್ಥಾನಗಳ ನಾಗರ ಕಟ್ಟೆಗಳಲ್ಲಿ ನಾಗರ ಕಲ್ಲಿಗೆ ಹಾಲೆರೆದು ಮಹಿಳೆಯರು ವಿಶೇಷ ಭಕ್ತಿ ಸಲ್ಲಿಸಿದರು. ಹಲವೆಡೆ ವಿಶೇಷ ಪೂಜೆ ಪುನಸ್ಕಾರ ನಡೆಯಿತು.

ಹಬ್ಬಕ್ಕಾಗಿ ಅಕ್ಕ-ತಂಗಿಯರನ್ನು ತವರಿಗೆ ಕರೆಯಿಸಿಕೊಂಡು ಸಂಭ್ರಮ ಉಲ್ಲಾಸದ ಮಧ್ಯೆ ಹಬ್ಬ ಆಚರಿಸಿದರು. ಈ ಹಬ್ಬಕ್ಕೆ ವಿಶೇಷವಾಗಿ ತಯಾರಿಸಲಾದ ನೈವೇದ್ಯ, ಎಳ್ಳುಂಡಿ, ಸಜ್ಜೆ, ಗೋಧಿ, ಶೇಂಗಾದುಂಡಿ, ತಂಬಿಟ್ಟು, ಎಳ್ಳು ಸೇರಿ ವಿವಿಧ ಬಗೆಯ ಕಾಳುಗಳನ್ನಿಟ್ಟು ಕುಟುಂಬ ಹಾಗೂ ತಮ್ಮ ಆತ್ಮೀಯರ ಹೆಸರು ಹೇಳಿ ಹಾಲೆರೆದರು.

ಈ ಋತುವಿನಲ್ಲಿ ಹಾವುಗಳು ತಮ್ಮ ಗೂಡು ಬಿಟ್ಟು ಹೊರ ಬರುತ್ತವೆ ಎಂದು ಹೇಳಲಾಗುತ್ತದೆ. ಶ್ರಾವಣ ತಿಂಗಳನ್ನು ಶಿವನ ಆರಾಧನೆಗೆ ಸಮರ್ಪಿಸಲಾಗಿದೆ. ಹಾವುಗಳು ಎಂದರೆ ಶಿವನಿಗೆ ಪ್ರಿಯವಾದ ಪ್ರಾಣಿ ಎನ್ನುವ ನಂಬಿಕೆಯಿದೆ. ಹಾವನ್ನು ಆರಾಧಿಸುವುದರಿಂದ ಶಿವನಿಗೆ ಸಂತುಷ್ಟವಾಗುತ್ತದೆ ಎನ್ನಲಾಗುವುದು. ಹಾಗಾಗಿಯೇ ನಾಗರ ಪಂಚಮಿಯನ್ನು ವಿಶೇಷ ಆಚರಣೆಯ ಮೂಲಕ ಆರಾಧಿಸಲಾಗುವುದು.

ನಾಗರ ಪಂಚಮಿಯ ದಿನ ಹಲವು ಕೆಲಸಗಳಿಗೆ ನಿಷೇಧವಿದೆ. ಈ ದಿನ ಏನನ್ನೂ ಹಚ್ಚಬಾರದು, ಕತ್ತರಿಸಬಾರದು. ಎಣ್ಣೆಯಲ್ಲಿ ಯಾವ ಪದಾರ್ಥವನ್ನು ಕರಿಯುವಂತಿಲ್ಲ. ಕರಿದ ಖಾದ್ಯ ನಿಷಿದ್ಧ, ಹಾಗೆಯೇ ಭೂಮಿಯನ್ನು ಅಗಿಯಬಾರದು ಎಂಬ ನಿಯಮವೂ ಕೆಲವೆಡೆ ಆಚರಣೆಯಲ್ಲಿದೆ.

ನಾಗರ ಪಂಚಮಿಯ ದಿನ ಭಾವ ಪೂರ್ಣವಾಗಿ ನಾಗಪೂಜೆ ಮಾಡುವ ಸ್ತ್ರೀಯರಿಗೆ ಶಕ್ತಿ ತತ್ವ ಪ್ರಾಪ್ತವಾಗುತ್ತದೆ. ಹಾಗೆಯೇ ಯಾವ ಸ್ತ್ರೀಯರು ನಾಗನನ್ನು ಸಹೋದರನೆಂಬ ಭಾವದಿಂದ ಪೂಜಿಸುತ್ತಾರೆಯೋ, ಅವರ ಸಹೋದರರ ಆಯುಷ್ಯವು ವೃದ್ಧಿಯಾಗುತ್ತದೆ. ಒಟ್ಟಾರೆಯಾಗಿ ನಾಗಪಂಚಮಿ ಹಬ್ಬವು ತನ್ನದೇ ಆದ ವೈಶಿಷ್ಟ್ಯತೆಗಳೊಂದಿಗೆ ವಿಭಿನ್ನ ಸಂಪ್ರದಾಯದ ಆಚರಣೆಯು ಮೂಲಕ ಭಕ್ತಿ ಭಾವದಿಂದ ಪೂಜಿಸಲಾಗತ್ತದೆ ಎಂದು ಜೋತಿಷಿ ರಾಮಭಟ್ ಜೋಶಿ ತಿಳಿಸಿದ್ದಾರೆ.