ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಯಾವುದೇ ಜಾತಿ ಜನಾಂಗದ ಆಚರಣೆಗಳು ಅವರ ಸಂಪ್ರದಾಯಗಳನ್ನು ಬಿಂಬಿಸುವಂತಿರಬೇಕು. ಮನುಷ್ಯ ಮನುಷ್ಯರಲ್ಲಿ ಉತ್ತಮ ಸಂಬಂಧಗಳ ಉದ್ದೀಪನದ ಜೊತೆಗೆ ದೇಶಭಕ್ತಿ ಹಾಗೂ ದೇಶ ಪ್ರೇಮ ಮೊಳಗಿಸಲು ಇಂತಹ ಆಚರಣೆಗಳು ಕಾರಣೀಭೂತವಾಗುತ್ತವೆ ಎಂದು ಮಲಯಾಳಿ ಸಮಾಜದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೂ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.ಭಾನುವಾರ ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಕಾನ್‌ಬೈಲ್ ಹಿಂದು ಮಲಯಾಳಿ ಸಮಾಜದಿಂದ 3ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ಸ್ಥಳೀಯ ಕಾನ್‌ಬೈಲ್ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲಾ ಸಮಾಜದವರು ತಮ್ಮ ತಮ್ಮ ಸಮಾಜದ ಸಂಘಟನೆಗಾಗಿ ಆಚಾರ ವಿಚಾರ ಸಂಸ್ಕೃತಿಗಳನ್ನು ಬೆಳೆಸುತ್ತಾ ಸಾಗಿಸುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿಗೆ ಪೂರಕವಾಗುತ್ತಿದ್ದು ಪ್ರತಿ ಸಮಾಜದ ಬೆಳವಣಿಗೆಗೆ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತಿದೆ. ಇದೇ ರೀತಿಯ ಒಗ್ಗಟನ್ನು ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. ಹಬ್ಬ ಹರಿದಿನಗಳಲ್ಲಿ ಆಯಾ ಸಮಾಜದವರು ತಮ್ಮ ಸಾಂಪ್ರಾದಾಯಕ ಉಡುಗೆ ತೊಡುಗೆಗಳನ್ನು ಧರಿಸಿ ಆಚರಣೆಯಲ್ಲಿ ಪಾಲ್ಗೊಂಡಾಗ ಆಚರಣೆಗೆ ಮಹತ್ವತೆ ನೀಡುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹಬ್ಬ ಹರಿದಿನಗಳು, ಜಾತ್ರೆಗಳು ಸಮಾಜ ಬಾಂಧವರನ್ನು ಬೆಸೆಯಲು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಪರಸ್ಪರ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲೂ ಕೂಡ ಸಹಾಯಕವಾಗುತ್ತದೆ ಎಂದು ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಿಂದಿನಗಳಲ್ಲಿ ಕೊಡವ ಸಮುದಾಯದವರು ವಿರಾಜಪೇಟೆ ಸಮೀಪದ ಕಾಕೋಟುಪರಂಬುವಿನಲ್ಲಿ ವಾರ್ಷಿಕ ಹಬ್ಬ ನಡೆದಾಗ ವಧುವರ ಪರಿಚಯ ಸಂಬಂಧಗಳನ್ನು ಬೆಸೆಯಲು ಒಂದು ರೀತಿಯ ವೇದಿಕೆಯಾಗಿತ್ತು ಎಂದು ಅವರು ನೆನಪಿಸಿಕೊಂಡರು. ನಾಕೂರು ಶಿರಂಗಾಲ ಗ್ರಾಪಂ ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ, ಓಣಂ ಆಚರಣೆ ಹಿಂದೂ ಧರ್ಮೀಯ ಎಲ್ಲರನ್ನು ಒಂದೆಡೆ ಸೇರಿಸುವ ಹಾಗೂ ಸಾಮರಸ್ಯ ಉಂಟುಮಾಡುವ ಆಚರಣೆಯಾಗಿದೆ ಎಂದರು. ಪಟ್ಟಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಮಾಜ ಅಥವಾ ಜನಾಂಗಗಳು ಈ ರೀತಿಯ ಒಗ್ಗೂಡುವಿಕೆ ಕಾಣುವುದು ದುರ್ಬಲವಾಗಿದೆ. ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಪ್ರತಿಯೊಬ್ಬರೂ ಮುಳುಗಿ ಹೋಗಿದ್ದು, ಈ ರೀತಿಯ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ಮಾದರಿ ಎಂದು ಅವರು ಬಣ್ಣಿಸಿದರು. ಹಿಂದೂ ಮಲೆಯಾಳಿ ಸಮಾಜದ ಸಲಹೆಗಾರ ಟಿ.ಆರ್.ವಾಸುದೇವನ್ ಮಾತನಾಡಿ, ಓಣಂ ಆಚರಣೆಯ ಮೂಲಕ ಮಲೆಯಾಳಿ ಭಾಷಿಗರು ಒಂದೆಡೆ ಸೇರಿ ನಮ್ಮ ಆಚಾರ, ವಿಚಾರಗಳು, ಕಲೆ - ಸಂಸ್ಕೃತಿಗಳನ್ನು ಬಿಂಬಿಸುವ ಕೆಲಸವಾಗಬೇಕು ಎಂದರು. ಹಾಗೆಯೇ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಸಂದರ್ಭದಲ್ಲಿ ಸ್ಥಳೀಯವಾಗಿ ಸಂಬಂಧಗಳನ್ನು ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ವಾಸುದೇವ್ ಜನಾಂಗ ಭಾಂದವರಲ್ಲಿ ಮನವಿ ಮಾಡಿದರು. ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಕೆ.ಬಿ.ರಾಜ, ಗ್ರಾ.ಪಂ. ಸದಸ್ಯರಾದ ಪ್ರೇಮ, ರಾಧಮಣಿ, ಅರುಣಕುಮಾರಿ, ಸೀತೆ, ಪಿಡಿಒ ಅಸ್ಮಾ, ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಮೂರ್ತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಬಾಲಕೃಷ್ಣ ರೈ, ಸೋಮವಾರಪೇಟೆ ತಾಲೂಕು ಹಿಂದೂ ಮಲೆಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಪಿ.ಎಂ.ಬಿಜು, ಸ್ಯಾಮ್ಸನ್, ಕಾಫಿ ಬೆಳೆಗಾರರಾದ ನೀಲಮ್ಮ ಪೆಮ್ಮಯ್ಯ, ಅಡಿಕೇರಿ ಧರ್ಮಪ್ಪ, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಯಶೋಧ, ನಾಕೂರು ಶಿರಂಗಾಲ ಕೊಡವ ಕೂಟದ ಅಧ್ಯಕ್ಷ ಯಶು ತಮ್ಮಯ್ಯ, ಗೌಡ ಸಮಾಜದ ಅಧ್ಯಕ್ಷ ಎಂ.ಎಂ.ಕಾರ್ಯಪ್ಪ, ಬೆಳ್ಳರಿಕಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಬೋಪಯ್ಯ, ಮಳೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಬಿ.ಗಣೇಶ್, ಕಾನ್ ಬೈಲ್ ರಾಮಮಂದಿರ ಅಧ್ಯಕ್ಷ ಬಿ.ಜಿ.ನರೇಂದ್ರ, ವಿ.ಕೆ.ಗಂಗಾಧರ್ ಇದ್ದರು.ಇದೇ ಸಂದರ್ಭ ಮಲೆಯಾಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಬಳಿಕ ಸಮಾಜದ ಮಕ್ಕಳಿಗೆ ನೃತ್ಯ ಸ್ಪರ್ಧೆ ಹಾಗೂ ಮಹಿಳೆಯರಿಗೆ ಪೂಕಳಂ ಬಿಡಿಸುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಕಾನ್‌ಬೈಲ್ ಹಿಂದು ಮಲಯಾಳಿ ಕಾರ್ಯದರ್ಶಿ ಶಂಕರನಾರಾಯಣ ಸ್ವಾಗತಿಸಿ ವಂದಿಸಿದರು.ಕೆ.ಎಂ.ವಿನೀಶ್ ನಿರೂಪಿಸಿದರು.ಸಭಾಕಾರ್ಯಕ್ರಮಕ್ಕೂ ಮುನ್ನಾ ಬೆಳಗ್ಗೆ 9 ಗಂ. ಕಲ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಿಂದ ಕೇರಳದ ಚಂಡೆಯೊಂದಿಗೆ ಹಮ್ಮಿಕೊಂಡಿದ್ದ ಓಣಂ ಮೆರವಣಿಗೆಯನ್ನು ಸಮಾಜದ ಅಧ್ಯಕ್ಷ ಕೆ.ಬಿ.ರಾಜ. ಹಾಗೂ ಗ್ರಾಪಂ ಸದಸ್ಯೆ ರಾಧಾಮಣಿ ಉದ್ಘಾಟಿಸಿದರು.ಕಲ್ಲೂರಿನಿಂದ ಹೊರಟ ಮೆರವಣಿಗೆ ಕಾನ್‌ಬೈಲು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಸಮಾಪ್ತಿಗೊಂಡಿತು.ಮೆರವಣಿಗೆಯಲ್ಲಿ ಮಲೆಯಾಳಿ ಸಮಾಜದ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಜ್ಜೆ ಇಟ್ಟರು.ಮಾವೇಲಿ ಛದ್ಮವೇಷಧಾರಿಯಾಗಿ ಕೇರಳದ ಮಟ್ಟಾನೂರಿನ ಅಭಿ ಗಮನ ಸೆಳೆದರು. ಕಾರ್ಯಕ್ರಮಕ್ಕೂ ಮುನ್ನಾ ಶಾಲಾ ಕೊಠಡಿಯಲ್ಲಿ ಸಮಾಜದ ಮಹಿಳೆಯರು ಹಾಗೂ ಮಕ್ಕಳು ಶ್ರದ್ಧಾಭಕ್ತಿಯಿಂದ ಬಿಡಿಸಿದ್ದ ಪೂಕಳಂ ನೋಡುಗರ ಗಮನ ಸೆಳೆಯಿತು. ಕೇರಳದ ರಾಧಾಕೃಷ್ಣನ್ ತಂಡದವರು ಸಿದ್ದಪಡಿಸಿದ್ದ ಓಣಂ ಸದ್ಯ ನೆರೆದಿದ್ದ ಸಮಸ್ತರ ಬಾಯಿ ರುಚಿ ಇಮ್ಮಡಿ ಗೊಳಿಸಿತು.