ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ವಿವಿಧ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 2 ತಿಂಗಳ ಹಿಂದೆ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಕಾರ್ಯಕ್ರಮ ಶನಿವಾರ ರಾತ್ರಿ ಸಂಪನ್ನಗೊಂಡಿತ್ತು.

ಗೌರಿ ಗಣೇಶ ವಿಸರ್ಜನೋತ್ಸವ ಪ್ರಯುಕ್ತ ಶನಿವಾರ ಬೆಳಗ್ಗೆಯಿಂದ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ, ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಅರ್ಚಕರು ನೆರವೇರಿಸಿದರು. ಮಧ್ಯಾಹ್ನದ ನಂತರ ಗೌರಿ ಗಣೇಶ ಮೂರ್ತಿಯನ್ನು ವಾಹನದಲ್ಲಿ ಅಲಂಕರಿಸಿದ ಮಂಟಪದಲ್ಲಿ ಕೂರಿಸಿ ಗೌರಿ ಗಣೇಶ ಮೂರ್ತಿ ವಿಸರ್ಜನೋತ್ಸವದ ಶೋಭಯಾತ್ರೆಗೆ ಚಾಲನೆ ನೀಡಲಾಯಿತು. ಪಟ್ಟಣದ ಮುಖ್ಯರಸ್ತೆ, ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಶೋಭಯಾತ್ರೆ ನಡೆಯಿತು.

ಕಣ್ಮನ ಸೆಳೆದ ಶೋಭಯಾತ್ರೆ:

ಆಕರ್ಷಕ ಮತ್ತು ರಂಗುರಂಗಿನ ಮೆರವಣಿಗೆ ಸಂದರ್ಭ ವಾದ್ಯಗೋಷ್ಠಿ, ದುಷ್ಟಶಕ್ತಿಯ ಸಂಹಾರ ಬಿಂಬಿಸುವ ಟ್ಯಾಬ್ಲೋ ಪ್ರದರ್ಶನ, ಗೊಂಬೆ ಕುಣಿತ, ನಾಸಿಕ್ ಡೋಲು ಮುಂತಾದ ಕಣ್ಮನ ಸೆಳೆಯುವಂತಹ ಪ್ರದರ್ಶನಗಳೊಂದಿಗೆ ಮೆರವಣಿಗೆ ಸಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ರಾತ್ರಿ 10 ಗಂಟೆಗೆ ಕಾಜೂರು ಹೊಳೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅದ್ದೂರಿ ಗಣೇಶೋತ್ಸವ ಸಂಪನ್ನಗೊಂಡಿತ್ತು.

ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ನೇತೃತ್ವದಲ್ಲಿ ಪೊಲೀಸರು ಮೆರವಣಿಗೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದರು. ಗೌರಿ ಗಣೇಶ ವಿಸರ್ಜನೋತ್ಸವ ಅಂಗವಾಗಿ ದೇವಸ್ಥಾನ ಸಮಿತಿ ವತಿಯಿಂದ ಶನಿವಾರ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ವಿಸರ್ಜನೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಧು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕ ಪ್ರಮುಖರು ಪಾಲ್ಗೊಂಡಿದ್ದರು.