ಸಾರಾಂಶ
ಮಧ್ಯಪ್ರದೇಶ, ಉಜ್ಜಯಿನಿ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಧಾರ್ಮಿಕ ಪ್ರವಾಸದಲ್ಲಿರುವ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮಂಗಳವಾರ ಗುಜರಾತ್ ಭರೂಚ್‌ನಲ್ಲಿ ನಡೆದ ಅರಿಹಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪೀಠಾರೋಹಣ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು.
ಮೂಡುಬಿದಿರೆ: ಮಧ್ಯಪ್ರದೇಶ, ಉಜ್ಜಯಿನಿ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಧಾರ್ಮಿಕ ಪ್ರವಾಸದಲ್ಲಿರುವ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮಂಗಳವಾರ ಗುಜರಾತ್ ಭರೂಚ್‌ನಲ್ಲಿ ನಡೆದ ಅರಿಹಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪೀಠಾರೋಹಣ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು.
ಗುಜರಾತ್‌ಗೂ ಮೂಡುಬಿದಿರೆಗೂ ಇರುವ ಧಾರ್ಮಿಕ ಸಂಬಂಧವನ್ನು ಉಲ್ಲೇಖಿಸಿದ ಭಟ್ಟಾರಕರು, ಗುಜರಾತ್‌ನ ಗಿರಿನಾರ ಸಿದ್ಧ ಕ್ಷೇತ್ರದಲ್ಲಿ ಲಿಪಿಬದ್ಧ ಗೊಂಡ ಏಕೈಕ ಜೈನ ಆಗಮ ಷಟ್ ಖಂಡ ಆಗಮವು ಜೈನ ಕಾಶಿ ಮೂಡುಬಿದಿರೆಯಲ್ಲಿ ಸುರಕ್ಷಿತವಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳಿಂದ ಕ್ಷೇತ್ರದ ಸಂಬಂಧ ಇದೆ ಎಂದರು.ಭಟ್ಟಾರಕ ಪೀಠಗಳು ಧರ್ಮ ಜಾಗೃತಿ, ಪ್ರಾಚೀನ ಕ್ಷೇತ್ರ ಗಳ ಜೀರ್ಣೋದ್ಧಾರ, ಧರ್ಮ ಸಾಮರಸ್ಯ, ಶಾಂತಿ ಸೌಹಾರ್ದ ಕಾಪಾಡುವ ಕೆಲಸ ಮುಂದುವರಿಸಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.ಮಂಗಳವಾರ ಬೆಳಗ್ಗೆ 5.30ರಿಂದ 9ರ ವರೆಗೆ ಭಗವಾನ್ ಮುನಿ ಸುವ್ರತ ಸ್ವಾಮಿ ಬಸದಿಯಲ್ಲಿ ಸರ್ವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಟ್ಟಾಭಿಷೇಕದ ವಿಧಿ ವಿಧಾನಗಳು ಜರುಗಿದವು.
ಮೂಡುಬಿದಿರೆ, ಶ್ರವಣ ಬೆಳಗೊಳ, ಅರಹಂತಗಿ ಸ್ವಾಮೀಜಿ, ತಮಿಳುನಾಡು ಸಿದ್ಧಾಂತ ಕೀರ್ತಿ, ಮಂಡ್ಯ ಕಂಬದಹಳ್ಳಿ ಭಟ್ಟಾರಕರ ಉಪಸ್ಥಿತಿಯಲ್ಲಿ ಅಭಿಷೇಕ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆದವು.ಎಲ್ಲ ಭಟ್ಟಾರಕ ಸ್ವಾಮೀಜಿಗಳು ನೂತನ ಸ್ವಾಮೀಜಿಗೆ ಶಾಸ್ತ್ರ ಶಾಲು, ಜಪಸರ ಸ್ಮರಣಿಕೆ ನೀಡಿ ಗೌರವಾರ್ಪಣೆಗೈದರು. ರಾಜಸ್ಥಾನ ಕೋಟಾದ ಉದ್ಯಮಿಗಳಾದ ಲೋಕೇಶ್ ಜೈನ್, ಕೋಟಾ ರಾಜಸ್ಥಾನ, ಬಕುಲ್ ಶಾ, ನಿರಂಜನ್ ಶಾ ಬರುಚ್, ದಿಲೀಪ್ ರಾಹ ಮೊದಲಾದವರು ಉಪಸ್ಥಿತರಿದ್ದರು.