ರೈತರ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು- ರೈತರ ಹಿತ ಕಾಯಲು ಬದ್ಧ

| Published : Nov 17 2024, 01:16 AM IST

ರೈತರ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು- ರೈತರ ಹಿತ ಕಾಯಲು ಬದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಸೇರ್ಪಡೆಗೊಳ್ಳುತ್ತಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ರೈತರ ಹಿತಾಸಕ್ತಿಗೆ ಬದ್ಧನಾಗಿರುವುದಾಗಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಬ್ಯಾಡಗಿ: ರೈತರ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಸೇರ್ಪಡೆಗೊಳ್ಳುತ್ತಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ರೈತರ ಹಿತಾಸಕ್ತಿಗೆ ಬದ್ಧನಾಗಿರುವುದಾಗಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ನಡೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಯಾವುದೇ ಒತ್ತಡಕ್ಕೂ ಮಣಿಯುವ ಮಾತೇ ಇಲ್ಲ. ಈ ವಿಷಯ ರಾಜ್ಯದೆಲ್ಲೆಡೆ ಭುಗಿಲೆದ್ದಿದೆ, ವಕ್ಫ್‌ ಹೆಸರು ಸೇರಿಸಲು ಆದೇಶಿಸಿದವರೆ ಅದನ್ನು ವಾಪಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅದಾಗ್ಯೂ ರೈತರಿಗೆ ಮೋಸವಾದರೆ ವಿಧಾನಸೌಧದ ಒಳಗೂ ಮತ್ತು ಹೊರಗೂ ಹೋರಾಟಕ್ಕೆ ಸಿದ್ಧನಾಗಿದ್ದೇನೆ ಎಂದರು.

ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ: ವಕ್ಫ್‌ ಬೋರ್ಡ್‌ ಸಂಬಂಧಪಟ್ಟಂತೆ ಎದ್ದಿರುವ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಡಿ. 9ರಂದು ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯದ ಕುರಿತು ಮಾತನಾಡಲಿದ್ದೇನೆ ಎಂದರು.

ರೈತರು ಎಲ್ಲರೂ ನಮ್ಮವರೇ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರ, ರೈತ ಕುಲವೆಂದರೆ ಎಲ್ಲರೂ ಒಂದೇ, ಆದರೆ ಗೋವಿನಜೋಳದ ಸಮಸ್ಯೆ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದೆ. ಆದರೆ ಕಬ್ಬು ಮತ್ತು ಭತ್ತ ಬೆಳೆಯುವ ರೈತರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿದ್ದಾರೆ. ಹೀಗಾಗಿ ಅವುಗಳ ವಿಷಯ ಹೆಚ್ಚು ಸದ್ದು ಮಾಡುತ್ತವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಮೆಣಸಿನಕಾಯಿ ವಿಮೆ ವ್ಯಾಪ್ತಿಗೆ: ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬ್ಯಾಡಗಿ ಮೆಣಸಿನಕಾಯಿ ತಳಿ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಆದರೆ ಬ್ಯಾಡಗಿ ತಳಿ ನಶಿಸುತ್ತಿದೆ. ಈಗಿರುವ ಹಸಿ ಮೆಣಸಿನಕಾಯಿಗೆ ಇರುವಂತಹ ಬೆಳೆವಿಮೆಯನ್ನು ಒಣ ಮೆಣಸಿನಕಾಯಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಅವರು, ಈ ಕುರಿತು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಜತೆ ಚರ್ಚಿಸಿದ್ದೇನೆ ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ರುದ್ರಗೌಡ ಕಾಡನಗೌಡ್ರ, ಮಾಲತೇಶ ಪೂಜಾರ ಇದ್ದರು.