ಸಾರಾಂಶ
ಪ್ರಕರಣ ದಾಖಲಿಸಿದ ಪುರ ಠಾಣೆ ಪೊಲೀಸರು ವೃತ್ತ ನಿರೀಕ್ಷಕ ರವಿಕಿರಣ್ ಹಾಗೂ ಪಿಎಸ್‌ಐ ಹರೀಶ್ ನೇತೃತ್ವದಲ್ಲಿ ತನಿಖೆ ನಡೆಸಿ ಅಪರಾಧಿಗಳನ್ನು ಬೆಂಗಳೂರಿನ ಲಕ್ಕಸಂದ್ರದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕಳೆದ ಕೆಲ ದಿನಗಳ ಹಿಂದೆ ನಗರದ ಬಿ.ಎಂ.ರಸ್ತೆಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಹಣ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪುರ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.ಮೊಹಮ್ಮದ್ ಸೂಫಿಯಾನ್, ಉಮ್ರಾನ್ ಪಾಷಾ, ಮೊಹಮ್ಮದ್ ಅಫ್ರಾನ್, ಸೈಯದ್ ಶೋಯೇಬ್ ಬಂಧಿತರು. ಇವರೆಲ್ಲರೂ ಬೆಂಗಳೂರಿನ ಲಕ್ಕಸಂದ್ರದ ನಿವಾಸಿಗಳಾಗಿದ್ದಾರೆ. ನ.೭ರಂದು ಬೆಳಗಿನ ಜಾವ ನಗರದ ಬಿ.ಎಂ.ರಸ್ತೆಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಆಗಮಿಸಿದ್ದ ಇಬ್ಬರು ಆಗಂತುಕರು ಮಲಗಿದ್ದ ಶಹನ್ವಾಜ್ ನನ್ನು ಎಬ್ಬಿಸಿ, ಕಾರ್ಡ್ ಸ್ಕ್ಯಾನ್ ಮಾಡುತ್ತೇವೆ, ೫ ಸಾವಿರ ರು. ನೀಡುವಂತೆ ಕೇಳಿದ್ದಾರೆ. ಈ ವೇಳೆ ಶಹನ್ವಾಜ್ ಸ್ಕ್ಯಾನರ್ ಹಾಗೂ ಹಣ ತೆಗೆಯುವ ವೇಳೆ ಒಬ್ಬ ಆಗುಂತಕ ಹಿಂದಿನಿಂದ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಇದೇ ವೇಳೆ ಮತ್ತೊಬ್ಬ ಚಾಕುವಿನಿಂದ ಶಹನ್ವಾಜ್‌ನನ್ನು ಇರಿದು ಆತನ ಬಳಿ ಇದ್ದ ೨೨ ಸಾವಿರ ರು. ಹಣ ಕಿತ್ತುಕೊಂಡಿದ್ದಾನೆ. ಮತ್ತೊಬ್ಬ ಸಿಬ್ಬಂದಿ ಬಿಡಿಸಲು ಹೋದಾಗ ಚಾಕು ತೋರಿಸಿ ಬೆದರಿಸಿದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು.
ಈ ದರೋಡೆ ಕೃತ್ಯ ಬಂಕ್‌ನಲ್ಲಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿದ ಪುರ ಠಾಣೆ ಪೊಲೀಸರು ವೃತ್ತ ನಿರೀಕ್ಷಕ ರವಿಕಿರಣ್ ಹಾಗೂ ಪಿಎಸ್‌ಐ ಹರೀಶ್ ನೇತೃತ್ವದಲ್ಲಿ ತನಿಖೆ ನಡೆಸಿ ಅಪರಾಧಿಗಳನ್ನು ಬೆಂಗಳೂರಿನ ಲಕ್ಕಸಂದ್ರದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು, ಚಾಕು ಹಾಗೂ ೧೯೦೦ ರು.ಗಳನ್ನು ವಶಕ್ಕೆ ಪಡೆದಿದ್ದಾರೆ. ‘ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ರಾತ್ರಿ ವೇಳೆ ಜಾಗರೂಕರಾಗಿ ಕೆಲಸ ಮಾಡಬೇಕು. ಅಪರಿಚಿತರು ಬಂದಾಗ ಎಚ್ಚರಿಕೆಯಿಂದ ವ್ಯವಹರಿಸಬೇಕು. ಪೆಟ್ರೋಲ್ ಬಂಕ್ ಮಾಲೀಕರು ಸಹ ಸಿಬ್ಬಂದಿ ಸುರಕ್ಷತೆ ಬಗ್ಗೆ ಕ್ರಮವಹಿಸಬೇಕು.’-ರವಿಕಿರಣ್, ನಗರ ವೃತ್ತ ನಿರೀಕ್ಷಕ