ನರೇಗಾ ಅಕ್ರಮ: 31 ಜನ ಪಿಡಿಒ, 1 ಎಡಿ ಅಮಾನತು

| Published : Jan 20 2024, 02:04 AM IST / Updated: Jan 20 2024, 02:22 PM IST

ಸಾರಾಂಶ

ದೇವದುರ್ಗ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಭಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಜನ ಪಿಡಿಒ, ಒಬ್ಬ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಿ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ತುಕಾರಾಂ ಪಾಂಡ್ವೆ ಆದೇಶ ಹೊರಡಿಸಿದ್ದಾರೆ.

ರಾಯಚೂರು: ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಭಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಜನ ಪಿಡಿಒ, ಒಬ್ಬ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಿ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ತುಕಾರಾಂ ಪಾಂಡ್ವೆ ಆದೇಶ ಹೊರಡಿಸಿದ್ದಾರೆ.

ದೇವದುರ್ಗ ತಾಲೂಕಿನ ವ್ಯಾಪ್ತಿಯ 33 ಗ್ರಾಪಂಗಳಲ್ಲಿ 2020ರಿಂದ 2023ರವರೆಗೆ ಜಾರಿಗೊಂಡಂತಹ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಅನುಷ್ಠಾನದಲ್ಲಿ ಸುಮಾರು ಮೊತ್ತಕ್ಕಿಂತ ಹೆಚ್ಚುವರಿ ಹಣ ಪಾವತಿ, ಕಡತಗಳ ನಿರ್ವಹಣೆ ಮಾಡದೇ ವಂಚನೆ, ನಿಯಮಗಳನ್ನು ಮೀರಿ ವಿವಿಧ ಏಜೆನ್ಸಿಗಳಿಗೆ ಲಕ್ಷಾಂತರ ರು. ಪಾವತಿ ಮಾಡಿರುವುದು, ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡದೇ ಮೋಸ ಮಾಡಿರುವುದು, ಸುಳ್ಳು ಬಿಲ್‌ಗಳನ್ನು ಸೃಷ್ಟಿಸಿ ಹೀಗೆ ಸುಮಾರ 252 ಕೋಟಿ ರು.ಗೂ ಹೆಚ್ಚಿನ ಅನುದಾನ ಅವ್ಯವಹಾರದ ಆರೋಪದಡಿ ತಾಲೂಕು ಪಂಚಾಯಿತಿ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಹಾಗೂ ಸಹಾಯಕ ನಿರ್ದೇಶಕ ಬಸಣ್ಣ ಅವರ ವಿರುದ್ಧ ದೇವದುರ್ಗ ಠಾಣೆಯಲ್ಲಿ ನ.25ರಂದು ದೂರು ದಾಖಲಾಗಿತ್ತು.

ನರೇಗಾದಡಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ಎಸಗಿರುವುದರ ಕುರಿತು ರಾಜ್ಯ ಮಟ್ಟದ ವಿಶೇಷ ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ವರದಿ ಸಲ್ಲಿಸಿದ್ದು, ವರದಿಯನ್ನಾಧರಿಸಿ ಸಿಇಒ ರಾಹುಲ್‌ ಸೂಚನೆ ಮೇರೆಗೆ ತಾಪಂ ಹಾಲಿ ಸಹಾಯಕ ನಿರ್ದೇಶಕ ಅಣ್ಣಾರಾವ್‌ ನೀಡಿದ ದೂರಿನ ಮೇರೆಗೆ ದೇವದುರ್ಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ನರೇಗಾ ಅಕ್ರಮದ ವಿರುದ್ಧ ಕೇವಲ ಗ್ರಾಪಂ ಪಿಡಿಒ ಅವರನ್ನೇ ಟಾರ್ಗೆಟ್‌ ಮಾಡಲಾಗಿದೆ ಎಂದು ಆರೋಪಿಸಿ ಪಿಡಿಒ ಸಂಘದವರು ಹೋರಾಟ ಸಹ ಮಾಡಿದ್ದರು.

ಇದರ ನಡುವೆಯೂ 31 ಜನ ಪಿಡಿಒ ಹಾಗೂ ಒಬ್ಬ ಸಹಾಯಕ ನಿರ್ದೇಶಕ ಸೇರಿ ಒಟ್ಟು 31 ಜನರ ಅಮಾನತಿಗೆ ಕ್ರಮವಹಿಸಲಾಗಿದೆ. ಇದರಲ್ಲಿ 27 ಜನರ ವಿರುದ್ಧ ನೇರವಾಗಿ ಅಮಾನತು ಮಾಡಲಾಗಿದೆ.

ಈಗಾಗಲೇ ಅಮಾನತುಗೊಂಡವರು ರಾಯಚೂರು ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 4 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಲ್ಲಿ 2 ಕಲಬುರಗಿ ಜಿಲ್ಲೆಯಲ್ಲಿ 1 ವಿಜಯಪುರ, 1 ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಅಮಾನತುಗೊಳಿಸಲು ಅಲ್ಲಿನ ಮೇಲಾಧಿಕಾರಿಗೆ ಜಿಪಂ ಸಿಇಒ ಶಿಫಾರಸು ಮಾಡಿದ್ದಾರೆ.

ಕ್ರಿಮಿನಲ್‌ ಕೇಸ್‌ಗೆ ಸೂಚನೆ: ಅಕ್ರಮಕ್ಕೆ ಸಂಬಂಧಿಸಿದಂತೆ 31 ಜನರ ವಿರುದ್ಧ ಕ್ರಿಮಿನಲ್‌ ದಾವೆ ಹೂಡುವಂತೆ ಸಿಇಒ ರಾಹುಲ್‌ ಅವರು ದೇವದುರ್ಗ ತಾಪಂ ಇಒ ಅವರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ 31 ಜನರ ವಿರುದ್ಧ ಅಮಾನತು ಕ್ರಮಕೈಗೊಂಡಿದ್ದಾರೆ.

ಕಾಮಗಾರಿ ನಿರ್ವಹಿಸದೇ ಅನುಷ್ಠಾನಕ್ಕಿಂತ ಹೆಚ್ಚುವರಿಯಾಗಿ 11.64 ಕೋಟಿ ರು. ಪಾವತಿ, ಅನುಷ್ಠಾನಗೊಂಡ ಕಾಮಗಾರಿಗಳಿಗೆ 32.51 ಕೋಟಿ ರು. ಸಂಬಂಧಿಸಿದ ದಾಖಲೆಗಳನ್ನು ವಿಶೇಷ ಸಾಮಾಜಿಕ ಪರಿಶೋಧನೆಗೆ ಒದಗಿಸಿಲ್ಲ. 

ಒಟ್ಟು 33 ಗ್ರಾಪಂಗಳಲ್ಲಿ 32 ಗ್ರಾಪಂಗಳಿಗೆ ಸಂಬಂಧಿಸಿದಂತೆ 6700 ಪ್ರಕರಣಗಳಿಂದ 102.32 ಕೋಟಿ ರು. ಸಾಮಾಗ್ರಿ ಖರೀದಿಗೆ ಪಾವತಿಸಿರುವುದು ಸೇರಿದಂತೆ ಇನ್ನಿತರ ಅವ್ಯವಹಾರಗಳ ಕಂಡುಬಂದಿರುತ್ತದೆ. 

ಈ ಬಗ್ಗೆ ಜಿಪಂ ಸಿಇಒ ಅವರಿಗೆ ಬರೆದ ಪತ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಿವರಿಸಿದ್ದಾರೆ.