ಸಾರಾಂಶ
.ಕನ್ನಡಪ್ರಭ ವಾರ್ತೆ ಕೋಲಾರ
ಶ್ರೀನಿವಾಸಪುರ ಪಟ್ಟಣದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೬೯ ಹಾದು ಹೋಗಿದೆ,ಈ ರಸ್ತೆ ಹೇಗಿದೆಯೆಂದರೆ ಇತ್ತ ಗುಣಮಟ್ಟದ ರಸ್ತೆಯೂ ಅಲ್ಲ, ಅಗಲೀಕರಣವೂ ಆಗಿಲ್ಲ, ರಾಷ್ಟ್ರೀಯ ಹೆದ್ದಾರಿ ಎನ್ನಲು ನಾಚಿಕೆಯಾಗುವಂತೆ ರಸ್ತೆ ಅಭಿವೃದ್ಧಿಯಾಗದೇ ತೀರಾ ಹದಗೆಟ್ಟಿದೆ.ತಾಲೂಕು ಕೇಂದ್ರವಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಪಟ್ಟಣ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಇಲ್ಲಿನ ಜನರ ನಂಬಿದ್ದರು, ಆದರೆ ಕನಿಷ್ಠ ಗುಣಮಟ್ಟದ ರಸ್ತೆ ಮಾಡುವಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ವಿಫಲವಾಗಿದೆ ಎಂದು ಜನರು ವಿಷಾಧ ವ್ಯಕ್ತಪಡಿಸುತ್ತಾರೆ.
ರಸ್ತೆಗಳ ಅಭಿವೃದ್ಧಿಯಿಂದ ಪಟ್ಟಣ ಅಭಿವೃದ್ಧಿ:ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾದದ್ದು ರಸ್ತೆ. ಇದನ್ನು ಅಭಿವೃದ್ಧಿಪಡಿಸಿದರೆ ಪಟ್ಟಣ ತಾನಾಗಿಯೇ ಅಭಿವೃದ್ಧಿಯಾಗುತ್ತದೆ. ರಸ್ತೆ ಹಾಗೂ ಸಾರ್ವಜನಿಕ ಸಾರಿಗೆ ಅನುಕೂಲವಾಗಿರುವಂಥಹ ಪಟ್ಟಣದಲ್ಲಿ ವಸತಿಗೆ ಯೋಗ್ಯ ಎಂದು ಜನತೆ ನೆಲೆಸುತ್ತಾರೆ, ಜನಸಂಧಣಿ ಹೆಚ್ಚಾದ ಪ್ರದೇಶದಲ್ಲಿ ವ್ಯಾಪಾರ, ವ್ಯವಹಾರ ನಡೆಸಬಹುದು ಎಂಬ ನಂಬಿಕೆ ಏರ್ಪಟ್ಟು ವಾಣಿಜ್ಯ ಸಂಸ್ಥೆಗಳು, ಕೈಗಾರಿಕ ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡುತ್ತವೆ, ಆದರೆ ತಗ್ಗು,ಗುಂಡಿ ಬಿದ್ದು ಹಾಳಾಗಿರುವ ಈ ಹೆದ್ದಾರಿ ರಸ್ತೆಯಿಂದ ಯಾವುದೇ ಅಭಿವೃದ್ಧಿಗೆ ಪೂರಕವಾಗದೇ ಪಟ್ಟಣ ಕೂಡ ಆರ್ಥಿಕವಾಗಿ ಹಿಂದುಳಿದಿದೆ. ಇಲ್ಲಿನ ಮಾವಿನ ಬೆಳೆಯು ಪ್ರಪಂಚಕ್ಕೆ ಹೆಸರುವಾಸಿ, ಮಾವಿನ ಸುಗ್ಗಿಯ ಸಮಯದಲ್ಲಿ ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಲಾರಿಗಳಂತಹ ಭಾರೀ ವಾಹನಗಳು ಬರುತ್ತವೆ. ರಾಜಧಾನಿ ಬೆಂಗಳೂರಿನಿಂದ ಕೇವಲ ನೂರು ಕಿಮೀ ದೂರದಲ್ಲಿ ಪಟ್ಟಣವಿದೆ, ಇಂತಹ ಪಟ್ಟಣದಲ್ಲಿ ಸರಿಯಾದ ರಸ್ತೆಯೇ ಇಲ್ಲ, ಇಲ್ಲಿ ಆಳುವಂತಹ ಜನಪ್ರತಿನಿಧಿಗಳಿಗೆ ಇದ್ಯಾವುದರ ಅರಿವೇ ಇಲ್ಲದಿರುವುದು ದುರಂತವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಊರು ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ ಹೊರತು ರಸ್ತೆ ಅಭಿವೃದ್ಧಿ ಬಗ್ಗೆ ಕೊಂಚವೂ ಗಮನಹರಿಸದಿರುವುದು ಶ್ರೀನಿವಾಸಪುರ ಪಟ್ಟಣದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀನಿವಾಸಪುರದಿಂದ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ೬೯ ಸಂಪೂರ್ಣವಾಗಿ ಹಳ್ಳಕೊಳ್ಳಗಳಿಂದ ತುಂಬಿ ಹೋಗಿದೆ, ಇತ್ತೀಚೆಗೆ ಬಿದ್ದ ಸಣ್ಣ ಮಳೆ ರಸ್ತೆಯನ್ನು ಇನ್ನಷ್ಟು ಹಾಳು ಮಾಡಿದೆ, ಈಗ ರಸ್ತೆಯಲ್ಲಿ ಬಿದ್ದಿರುವ ಹಳ್ಳಕೊಳ್ಳಗಳನ್ನು ಮುಚ್ಚಲು ತೋರಿಕೆಗೆ ಹೆದ್ದಾರಿ ಇಲಾಖೆಯಿಂದ ಪ್ಯಾಚ್ ವರ್ಕ್ ಕೆಲಸ ಆರಂಭವಾಗಿದೆ, ಆದರೆ ಇಲಾಖೆ ಸಿಬ್ಬಂದಿ ರಸ್ತೆಯಲ್ಲಿ ಬಿದ್ದ ಹಳ್ಳಕೊಳ್ಳಕ್ಕೆ ಜಲ್ಲಿ ತುಂಬಿಸಿ ಮೂರ್ನಾಲ್ಕು ದಿನವಾದರೂ ಜಲ್ಲಿ ಮೇಲೆ ಡಾಂಬರು ಹಾಕಿಲ್ಲ, ಅಲ್ಲಿ ಓಡಾಡುವ ವಾಹನ ಸವಾರರಿಗೆ, ಪಾದಚಾರಿಗಳಿಗೆ ಜಲ್ಲಿಕಲ್ಲು ಸಿಡಿದರೆ ಹೊಣೆಯಾರು ಎಂಬುದು ಜನತೆಯ ಪ್ರಶ್ನೆಯಾಗಿದೆ.