ಸಾರಾಂಶ
ಕೊಡಗಿನ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಟರ್ಫ್ ಮೈದಾನದಲ್ಲಿ ರಾಷ್ಟ್ರಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿ ನಡೆಯುತ್ತಿದೆ. ಗುರುವಾರ ಲೀಗ್ ಪಂದ್ಯಾವಳಿಯಲ್ಲಿ ಐದು ಪಂದ್ಯಗಳು ನಡೆದು, ಕೇರಳ ಮತ್ತು ಗುಜರಾತ್ ತಂಡ ಮುನ್ನಡೆ ಸಾಧಿಸಿವೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಟೂರ್ನಿಯು ಲೀಗ್ ಪಂದ್ಯಾವಳಿಯಲ್ಲಿ ಗುರುವಾರ 5 ಪಂದ್ಯಗಳು ನಡೆದು, ಕೇರಳ ಮತ್ತು ಗುಜರಾತ್ ತಂಡ ಮುನ್ನಡೆ ಸಾಧಿಸಿದೆ. ಬಿಹಾರ ಮತ್ತು ಆಂಧ್ರಪ್ರದೇಶ ನಡುವೆ ನಡೆದ ಮೊದಲ ಪಂದ್ಯದಲ್ಲಿ 2-1 ಗೋಲುಗಳಿಂದ ಬಿಹಾರ ಜಯಗಳಿಸಿತು. ಬಿಹಾರದ ಪರ ತುಳಸಿ, ಪ್ರವಲಿಕ ಗೋಲು ಗಳಿಸುವಲ್ಲಿ ಯಶಸ್ವಿಯಾದರೆ, ಆಂಧ್ರಪ್ರದೇಶ ತಂಡದ ಕುಶಿಕುಮಾರಿ ಗೋಲು ಗಳಿಸಿದರು. ಗುಜರಾತ್- ಕೇರಳ ನಡುವಿನ ಪಂದ್ಯದಲ್ಲಿ ಕೇರಳ 2- 1 ಗೋಲುಗಳಿಂದ ಜಯಗಳಿಸಿತು. ಕೇರಳದ ಪರ ಶನುಷಾ, ಅಖಿಲ ಗೋಲು ಗಳಿಸಿದರೆ, ಗುಜರಾತ್ ಪರ ಕೋಮಲ ಗೋಲು ಗಳಿಸಿದರು.
ನಂತರ ಮಧ್ಯಾಹ್ನ 2.30ಕ್ಕೆ ಜಾರ್ಖಂಡ್ ಮತ್ತು ರಾಜಸ್ಥಾನ ತಂಡಗಳ ನಡುವೆ ಪಂದ್ಯ ಆರಂಭಗೊಂಡು ಜಾರ್ಖಂಡ್ ತಂಡ 5-0 ಗೋಲುಗಳಿಂದ ಜಯಗಳಿಸಿತು. ಲೀಗ್ ಪಂದ್ಯದಲ್ಲಿ ಗುಜರಾತ್ ಮತ್ತು ಆಂಧ್ರಪ್ರದೇಶ ನಡುವೆ ನಡೆದು ಗುಜರಾತ್ ತಂಡವು ಆಂಧ್ರಪ್ರದೇಶ ವಿರುದ್ಧ 3- 0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿದರು.ಕೇರಳ ಮತ್ತು ಬಿಹಾರ ನಡುವೆ ಲೀಗ್ ಪಂದ್ಯದಲ್ಲಿ ಕೇರಳ ತಂಡ ಬಿಹಾರ ವಿರುದ್ಧ 1-0 ಗೋಲುಗಳಿಂದ ಲೀಗ್ ಹಂತದಲ್ಲಿ ಗೆಲುವು ಸಾಧಿಸಿದೆ. ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಯ ತೀರ್ಪುಗಾರರಾದ ಡ್ಯಾನಿ ದೇವಯ್ಯ, ಡ್ಯಾನಿ ಈರಪ್ಪ, ಬಿ.ಎಂ.ನಾಣಯ್ಯ, ಅರುಣ್ , ಪಂದ್ಯಾಟಗಳ ತಾಂತ್ರಿಕ ಸಮಿತಿ ಮುಖ್ಯಸ್ಥರಾದ ನಂದ ವಿವಿಧ ಶಾಲೆಯ ದೈಹಿಕ ಶಿಕ್ಷಕರು ಕಾರ್ಯನಿರ್ವಹಿಸಿದರು. ಮಧ್ಯಾಹ್ನದ ನಂತರ ತುಂತುರುಮಳೆ, ಮೋಡ ಮುಸುಕಿದ ವಾತಾವರಣದ ನಡುವೆಯೇ ಪಂದ್ಯಾಟಗಳು ಮುಂದುವರೆಯಿತು.