ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತುಮಕೂರು ವಿಶ್ವವಿದ್ಯಾನಿಲಯವು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಇಲ್ಲಿನ ಅಧಿಕಾರಿಗಳು ಮತ್ತು ಅಧ್ಯಾಪಕರು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿ ಉತ್ತಮ ಹೆಸರು ತರುವ ಮೂಲಕ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ತುಮಕೂರು ವಿವಿಯ ವಾಣಿಜ್ಯ ನಿಕಾಯದ ಡೀನ್ ಪ್ರೊ.ಬಿ. ಶೇಖರ್ ತಿಳಿಸಿದರು.ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಕಾರ್ಯಾಗಾರಗಳು, ಸೆಮಿನಾರ್‌ಗಳು, ಶೈಕ್ಷಣಿಕ ಹಬ್ಬಗಳನ್ನು ಏರ್ಪಡಿಸಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪೂರಕವಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ನೀತಿ ನಿಯಮಗಳನ್ನು ಕಾರ್ಯಗತಗೊಳಿಸುವಲ್ಲಿ ತುಮಕೂರು ವಿವಿ ಮುಂಚೂಣಿಯಲ್ಲಿದ್ದು ಇತರೆ ವಿವಿಗಳಿಗಿಂತ ವಿಭಿನ್ನವಾಗಿದೆ. ವಿದ್ಯಾರ್ಥಿಗಳನ್ನು ಆಧುನಿಕ ಜಗತ್ತಿಗೆ ಅವಶ್ಯಕತೆಯಿರುವ ಎಲ್ಲಾ ಕೌಶಲ್ಯಗಳನ್ನು ವಾಣಿಜ್ಯ ಶಿಕ್ಷಣ ಕಲಿಸುತ್ತದೆ. ಈ ಮೂಲಕ ವಿದ್ಯಾಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಕಾಣಲು ಅನುಕೂಲವಾಗಿದೆ ಎಂದರು.
ವಾಣಿಜ್ಯ ಶಿಕ್ಷಣ ಉದ್ಯೋಗ ಸ್ನೇಹಿ, ಶಿಕ್ಷಣವಾಗಿದ್ದು ವಿದ್ಯಾರ್ಥಿಗಳಿಗೆ ಜೀವನ ಭದ್ರತೆ, ಸಂವಹನದ ಕಶಲ್ಯ, ನಾಯಕತ್ವಗುಣ, ಸಮೂಹ ಮತ್ತು ವ್ಯಕ್ತಿಗಳ ನಿರ್ವಹಣೆ ಹಾಗೂ ಕೌಶಲ್ಯಗಳನ್ನು ವಾಣಿಜ್ಯ ಶಿಕ್ಷಣ ಕಲಿಸುತ್ತದೆ. ವಾಣಿಜ್ಯ ಶಿಕ್ಷಣವು ಕಾರ್ಪೊರೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನವೀಕರಿಸಿದ ಪಠ್ಯಕ್ರಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸೃಜನಶೀಲತೆಯನ್ನು ಹೆಚ್ಚಿಸುತ್ತಿದೆ ಎಂದ ಅವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಐಎಎಸ್ ಮತ್ತು ಕೆಎಎಸ್ ನಂತಹ ದೊಡ್ಡ ಹುದ್ದೆಗೆ ಹೋಗಬೇಕೆಂದು ಹಾರೈಸಿದರು.ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಜೀವನಕ್ಕೆ ಶಿಕ್ಷಣ ಹೇಗೆ ಮುಖ್ಯವೋ ಅದರ ಜೊತೆಗೆ ಒಳ್ಳೆಯ ಮೌಲ್ಯಗಳು ವ್ಯಕ್ತಿತ್ವಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಭಾರತವು ವೈವಿದ್ಯಮಯ ಸಂಸ್ಕೃತಿ ಒಳಗೊಂಡಿದ್ದು ಸಂವಿಧಾನದಿಂದ ನಮ್ಮ ದೇಶದಲ್ಲಿ ಉತ್ತಮ ಆಡಳಿತ ನಡೆಸಲು ಅನುಕೂಲವಾಗಿದೆ ಎಂದರು.
ಸಿಂಡಿಕೇಟ್ ಮಾಜಿ ಸದಸ್ಯ ರಾಜು ಮಾತನಾಡಿ, ತಿಪಟೂರು ಸ್ನಾತಕೋತ್ತರ ಕೇಂದ್ರವನ್ನು ಒಂದು ಮಾದರಿ ಕೇಂದ್ರವನ್ನಾಗಿ ರೂಪಿಸಲು ಅತ್ಯಂತ ಶ್ರಮ ವಹಿಸಲಾಗುವುದು. ವಿದ್ಯಾರ್ಥಿಗಳು ತಂದೆ ತಾಯಿಗಳ ಕನಸನ್ನು ನನಸು ಮಾಡಬೇಕೆಂದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಸರಸಾ, ಅನುಪ್ರಸಾದ್, ನಾಗರಾಜ್, ಪ್ರೊ. ವೆಂಕಟಾಚಲಯ್ಯ, ಡಾ. ದೇವರಾಜಪ್ಪ, ಶಶಿಕುಮಾರ್, ಕಾವ್ಯಾ ಸೇರಿದಂತೆ ಎಲ್ಲಾ ಸ್ನಾತಕೋತ್ತರ ಕೇಂದ್ರದ ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.