ಪ್ರಸ್ತುತ ಕನ್ನಡದ ಸ್ಥಿತಿಗತಿ ಬಗ್ಗೆ ಚಿಂತನೆ ಅಗತ್ಯ: ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಹೆಗಡೆ

| Published : Mar 24 2024, 01:33 AM IST

ಪ್ರಸ್ತುತ ಕನ್ನಡದ ಸ್ಥಿತಿಗತಿ ಬಗ್ಗೆ ಚಿಂತನೆ ಅಗತ್ಯ: ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗಳಿಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬುದನ್ನು ಸರ್ಕಾರ ಪರ್ಯಾಲೋಚಿಸಬೇಕು. ಸರ್ಕಾರಿ ‘ಕನ್ನಡ ಮಾಧ್ಯಮ’ ಶಾಲೆಗಳಿಗೆ ಕಾಯಕಲ್ಪ ಮಾಡುತ್ತೇವೆ ಎಂಬ ಒಂದು ‘ಗ್ಯಾರಂಟಿ’ಯನ್ನು ಸರ್ಕಾರದಿಂದ ನಿರೀಕ್ಷಿಸಬಹುದೇ? ಎಂದು ಭುವನೇಶ್ವರಿ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೃತಕ ಬುದ್ಧಿಮತ್ತೆಯತ್ತ ಸಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡದ ಸ್ಥಿತಿಗತಿ ಏನು ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದು ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.

ಮಂಗಳೂರಿನ ಪುರಭವನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ದ.ಕ.ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು. ಕನ್ನಡವನ್ನು ಬಳಸುವ ಮಾಧ್ಯಮಗಳು ಇಂದು ಹೆಚ್ಚಾಗಿವೆ. ಆದರೆ ಇಲ್ಲಿ ಬಳಕೆಯಾಗುವ ಕನ್ನಡದ ಸ್ವರೂಪವೇನು ಎಂಬುದು ಚಿಂತನಾರ್ಹ. ಯಾವುದೇ ಭಾಷೆಯ ಕಲಿಕೆ ಆರಂಭವಾಗುವುದೇ ಕೇಳುವುದರಿಂದ. ಎಂಎಫ್‌ನ ಆರ್‌ಜೆಗಳ, ಸೆಲೆಬ್ರಿಟಿಗಳ, ಪಂಚಿಂಗ್‌ ಕನ್ನಡಗಳೇ ನಮ್ಮ ಕನ್ನಡ ಆಗಿಬಿಟ್ಟಿದೆ. ಇದೇ ಕನ್ನಡ ಬ‍ಳಸಿ ಬರವಣಿಗೆಯನ್ನೂ ಹಾಳುಮಾಡಿ ಬಿಟ್ಟಿದ್ದೇವೆ. ಅಪ್ಪಟ ಕನ್ನಡದಲ್ಲಿ ಬರೆದ ಲೇಖನಕ್ಕಿಂತ ಇಂಗ್ಲಿಷ್‌, ಒಂದಷ್ಟು ಎಸ್ಸೆಮ್ಮೆಸ್‌ ಭಾಷೆ ಬಳಸಿ ಬರೆದ ಲೇಖನವೇ ಇಂದು ಯುವ ಜನಾಂಗವನ್ನು ಆಕರ್ಷಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬರಹಗಾರರು ಮಡಿವಂತಿಕೆ ಬಿಟ್ಟು ಟ್ರೆಂಡ್‌ಗೆ ತಕ್ಕಂತೆ ತಮ್ಮ ಬರವಣಿಗೆಯಲ್ಲೂ ಬದಲಾವಣೆ ತರುತ್ತಾರೆ. ಇದು ಕನ್ನಡ ಭಾಷೆಯ ಮಟ್ಟಿಗೆ ಅಪಾಯಕಾರಿ ಬೆಳವಣಿಗೆ ಎಂದರು. ಕನ್ನಡ ಅಸ್ಮಿತೆ ಉಳಿಸಲು ಮಾರ್ಗಸೂಚಿ:

ಕನ್ನಡದ ಅಸ್ಮಿತೆಯನ್ನು ಉಳಿಸಿ ಅದರ ಸರ್ವತೋಮುಖ ಉನ್ನತಿ ಗಳಿಸಲು ಕೆಲವು ಮಾರ್ಗಸೂಚಿಗಳನ್ನು ಕನ್ನಡಿಗರೇ ಪಾಲಿಸಲು ಮುಂದಾಗಬೇಕು ಎಂದು ಆರು ಅಂಶಗಳನ್ನು ಭುವನೇಶ್ವರಿ ಹೆಗಡೆ ಪ್ರಸ್ತಾಪಿಸಿದರು.

ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ನೀಡಬೇಕು. ಪುಸ್ತಕಗಳನ್ನು ಓದಿಗಾಗಿ ಜನರ ಬಳಿಗೆ ಒಯ್ಯುವ ಸಂಚಾರಿ ಗ್ರಂಥಾಲಯ ಯೋಜನೆ ಪುನಾರಂಭವಾಗಬೇಕು. ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಒಪ್ಪಓರಣ ಇರಿಸಲು ಮುಂದಗಬೇಕು. ಖಾಸಗಿ ಗ್ರಂಥಾಲಯಗಳನ್ನು ಪುನಶ್ಚೇತನ ಮಾಡಬೇಕು. ಮುದ್ರಣ ಮಾಧ್ಯಮಗಳ‍ಲ್ಲಿ ತಪ್ಪುಗಳು ನುಸುಳಿದಾಗ ಮುದ್ರಾ ರಾಕ್ಷಸನ ಹಾವಳಿ ಎಂದು ಗೇಲಿ ಮಾಡಲಾಗುತ್ತಿತ್ತು. ಆದರೆ ಇಂದಿನ ಗೂಗಲ್‌ ಆಡಳಿತದಲ್ಲಿ ಭಾಷಾ ಅಪಭ್ರಂಶ ಎಗ್ಗಿಲ್ಲದೆ ಮೆರೆಯುತ್ತಿದೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಕರ್ಯಗಳನ್ನು ಉತ್ತಮಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವ ಹಾಗೂ ಕನ್ನಡ ಶಾಲೆಗಳನ್ನು ಬಲಪಡಿಸುವ ಪ್ರಯತ್ನಗಳಾಗಬೇಕು. ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ತಲುಪುವಂತೆ ಪುಸ್ತಕ ಮಾರಾಟ ಇಲಾಖೆಯನ್ನೇ ಸರ್ಕಾರ ಆರಂಭಿಸಬೇಕು ಎಂದರು.

ಕನ್ನಡ ಮಾಧ್ಯಮಕ್ಕೆ ಆದ್ಯತೆ:

1ರಿಂದ 7ನೇ ತರಗತಿ ವರೆಗೆ ಪ್ರಾಥಮಿಕ ಶಿಕ್ಷಣ ಎಂಬುದನ್ನು ಸರ್ಕಾರದ ದಾಖಲೆಗಳೇ ಒಪ್ಪಿವೆ. ಇದು ಸಂಪೂರ್ಣ ಮಾತೃ ಭಾಷೆ ಅಥವಾ ಕನ್ನಡದಲ್ಲೇ ಆಗಬೇಕು. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಹೊಂದಬೇಕು. ಆಂಗ್ಲ ಮಾಧ್ಯಮದ 1ರಿಂದ 4ನೇ ತರಗತಿ ಕನ್ನಡ ಮಾಧ್ಯಮವಾಗಿ ಪರಿವರ್ತನೆ ಹೊಂದಬೇಕು ಎನ್ನುವ ಸರ್ಕಾರಿ ಆದೇಶಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ತಂದಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಕೂಡಲೇ ತೆರವು ಮಾಡಿಸಬೇಕು. 1ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಎಲ್ಲ ರೀತಿಯ ವೃತ್ತಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣದಲ್ಲಿ ಆದ್ಯತೆ ಮೇರೆಗೆ ಪ್ರವೇಶ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಶಾಲೆಗಳಿಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬುದನ್ನು ಸರ್ಕಾರ ಪರ್ಯಾಲೋಚಿಸಬೇಕು. ಸರ್ಕಾರಿ ‘ಕನ್ನಡ ಮಾಧ್ಯಮ’ ಶಾಲೆಗಳಿಗೆ ಕಾಯಕಲ್ಪ ಮಾಡುತ್ತೇವೆ ಎಂಬ ಒಂದು ‘ಗ್ಯಾರಂಟಿ’ಯನ್ನು ಸರ್ಕಾರದಿಂದ ನಿರೀಕ್ಷಿಸಬಹುದೇ? ಎಂದು ಭುವನೇಶ್ವರಿ ಹೆಗಡೆ ಹೇಳಿದರು.