ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಇ-ಕಚೇರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಹಾಯಕ ಆಯುಕ್ತೆ, ತಹಸೀಲ್ದಾರ್ ಹಾಗೂ ನಾನಾ ಇಲಾಖೆಯ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೆಂಡ ಕಾರಿದ ಪ್ರಸಂಗ ಮಂಗಳವಾರ ನಡೆಯಿತು.ಸ್ಥಳೀಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇ-ಕಚೇರಿ (ಇ-ಆಫೀಸ್) ವಿಷಯವನ್ನು ಪ್ರಸ್ತಾವನೆಯನ್ನು ಮಂಡಿಸಿದ ಸಚಿವರು, ಡಿಸಿ, ಎಸಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಕಡತಗಳನ್ನು ಭೌತಿಕವಾಗಿ ಪಡೆಯದೇ ಇ-ಸೇವೆಯಡಿ ನಿರ್ವಹಿಸಬೇಕು ಎಂದು ಎರಡು ತಿಂಗಳ ಹಿಂದೆ ಕಲಬುರಗಿಯಲ್ಲಿ ನಡೆಸಿದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಆದರು ರಾಯಚೂರು ಜಿಲ್ಲೆಯ ಎಸಿ ಮೆಹಬೂಬಿ, ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು ಇ-ಕಚೇರಿಯನ್ನು ಆರಂಭಿಸದೇ ಇರುವುದನ್ನು ಗಮನಿಸಿ ಫುಲ್ ಗರಂಗೊಂಡರು.
ಸಭೆ ಆರಂಭದಿಂದಲೂ ಸಂಯಮದಿಂದಲೇ ಚರ್ಚಿಸಿದ ಸಚಿವರು, ಇ-ಕಚೇರಿ ವಿಚಾರದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಕೋಪಗೊಂಡು ನಿಮಗೆ ಗೌರವದಿಂದ ಹೇಳಿದರೆ ಕೇಳಲ್ವಾ? ಹಾಗಾದರೇ ನಿಮ್ಮ ಭಾಷೆಯಲ್ಲಿಯೇ ಕೇಳ್ತಿನಿ ಕತ್ತೆ ಕಾಯ್ತಾ ಇದಿರಾ? ಯಾರನ್ನು ಯಾಮಾರೀಸ್ತಾ ಇದ್ದೀರಿ? ಎಂದು ಆಕ್ರೋಶದ ನುಡಿಗಳನ್ನು ಹೊರಹಾಕಿದರು.ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಜೂನ್ ತಿಂಗಳಿಂದ ಇ-ಕಚೇರಿ ಆಡಳಿತವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ಇನ್ನು ಭೌತಿಕವಾಗಿಯೇ ಕಡತಗಳ ವಿಲೇವಾರಿಯನ್ನು ಮಾಡುತ್ತಿರುವುದು ಯಾಕೆ? ಇ- ಕಚೇರಿ ನಿರ್ವಹಣೆಯಿಂದ ಪಾರದರ್ಶಕವಾಗಬಾರದು. ಜನರ ನೀಡಿದ ಕಡತಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಬೇಕಿದ್ದವರ ಕಡತವನ್ನು ವಿಲೇವಾರಿ ಮಾಡಿ ಬೇಕಿಲ್ಲದವರ ಕಡತಗಳನ್ನು ಕಳೆದು ಅವರನ್ನು ಸಾಹಿಸುವ ಕೆಲಸವನ್ನು ಮಾಡುತ್ತೀರಿ ಎಂದು ರೇಗಿದರು.
ಜಿಲ್ಲೆಯ ಎಲ್ಲ ತಹಸೀಲ್ದಾರ್ ನ್ಯಾಯಲಯದಲ್ಲಿ 30 ದಿನದಿಂದ ಐದು ವರ್ಷ ಮೇಲ್ಪಟಿರುವಂಥ ಒಟ್ಟು 382 ಪ್ರಕರಣಗಳು ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯಗಳಲ್ಲಿ ಒಟ್ಟು 561 ಪ್ರಕರಗಳು ವಿಲೇವಾರಿ ಮಾಡಿಲ್ಲ. ಕಂದಾಯ ಇಲಾಖೆಯ ನಿಯಮದ ಪ್ರಕಾರ ನಿಗದಿಪಡಿಸಿದ ವೇಳೆಯಲ್ಲಿ ಯಾಕೆ ಪ್ರಕರಣಗಳನ್ನು ವಿಲೇವಾರಿ ಮಾಡಿಲ್ಲ ಎಂದು ಸಚಿವರು ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ಪ್ರಶ್ನಿಸಿದರು.ಮುಂದಿನ ಫೆ.1 ರಿಂದ ಎಲ್ಲ ಕಡತಗಳನ್ನು ಇ-ಕಚೇರಿಯಿಂದಲೆಯೇ ವಿಲೇವಾರಿ ಮಾಡಬೇಕು. ಇದನ್ನು ನಾನು ಗಮನಿಸುತ್ತೇನೆ ಮತ್ತೆ ನಿರ್ಲಕ್ಷ್ಯ ಮುಂದುವರಿದಿರುವುದು ಕಂಡುಬಂದಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಕಟ್ಟೆಚ್ಚರಿಕೆ ನೀಡಿದರು.
ಜನರ ವಿಶ್ವಾಸ ಉಳಿಸಿಕೊಳ್ಳಿ:ಬರಗಾಲ ನಿರ್ವಹಣೆಯಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ತೋರದೆ ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರೈತರಿಗೆ ಬರಪರಿಹಾರ ನೀಡಲು ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ (ಫ್ರುಟ್ಸ್ )ಯಡಿ ನೋಂದಣಿ ನಿಗದಿತ ಪ್ರಮಾಣದಲ್ಲಿ ಗುರಿ ಸಾಧನೆಯಾಗಿಲ್ಲ. ಇದರಿಂದ ರೈತರಿಗೆ ಪರಿಹಾರ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಕೂಡಲೇ ಫ್ರುಟ್ಸ್ ನೋಂದಣಿಗೆ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಬರಗಾಲ ನಿರ್ವಹಣೆಗಾಗಿ ಈಗಾಗಲೇ 34 ಕೋಟಿ ಜಿಲ್ಲಾಡಳಿತದಲ್ಲಿದೆ. ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತ ಒಟ್ಟು 374 ಗ್ರಾಮಗಳನ್ನು ಗುರುತಿಸಲಾಗಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರಿನ ಸರಬರಾಜಿಗಾಗಿ 269 ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ. ಈಗಾಗಲೇ 59 ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.ಸಭೆಯಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್ ಬೋಸರಾಜು, ಶಾಸಕರಾದ ಡಾ.ಶಿವರಾಜ ಪಾಟೀಲ್, ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಕಂದಾಯ ಇಲಾಖೆಯ ಆಯುಕ್ತ ಸುನೀಲ್, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯೆ, ಡಿಸಿ ಎಲ್.ಚಂದ್ರಶೇಖರ ನಾಯಕ, ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕರಾಮ, ಸಹಾಯಕ ಆಯುಕ್ತರು, ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು, ಕಂದಾಯ ಸೇರಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.