ನೇಜಾರು ಕಗ್ಗೊಲೆ ಆರೋಪಿಗೆ ಗಲ್ಲುಶಿಕ್ಷೆಯೇ ಆಗಬೇಕು: ಅಬ್ದುಲ್ ಅಜೀಂ

| Published : Nov 29 2023, 01:15 AM IST

ನೇಜಾರು ಕಗ್ಗೊಲೆ ಆರೋಪಿಗೆ ಗಲ್ಲುಶಿಕ್ಷೆಯೇ ಆಗಬೇಕು: ಅಬ್ದುಲ್ ಅಜೀಂ
Share this Article
  • FB
  • TW
  • Linkdin
  • Email

ಸಾರಾಂಶ

ನೇಜಾರು ಗ್ರಾಮದಲ್ಲಿ ನಡೆದ ತಾಯಿ ಮತ್ತು ಮೂವರ ಮಕ್ಕಳ ಕಗ್ಗೊಲೆ ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ನೇಜಾರು ಗ್ರಾಮದಲ್ಲಿ ನಡೆದ ತಾಯಿ ಮತ್ತು ಮೂವರ ಮಕ್ಕಳ ಕಗ್ಗೊಲೆ ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಅವರು ಬುಧವಾರ ಕಗ್ಗೊಲೆ ನಡೆದ ನೇಜಾರಿನ ನೂರ್ ಮಹಮ್ಮದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಸಾಧಾರಣವಾಗಿ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಅಂದರೆ 14 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯು ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದಾನೆ, 10 - 15 ಬಾರಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ, ಇದರಿಂದ ಆತನಲ್ಲಿ ಮಾನವೀಯತೆ. ಕರುಣೆ ಎಂಬುದೇ ಇರಲಿಲ್ಲ ಎಂದು ತಿಳಿಯುತ್ತಿದೆ. ಆದ್ದರಿಂದ ಇದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಪೊಲೀಸರು ಸಾಬೀತು ಮಾಡಿ, ಆತನಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಬೇಕು, ಆಗ ಮಾತ್ರ ಕೊಲೆಯಾದವರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎಂದರು. ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವ ಅಗತ್ಯ ಇಲ್ಲ, ಉಡುಪಿ ಪೊಲೀಸರು ಬಹಳ ದಕ್ಷರಿದ್ದು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ. ಆದರೆ ಈ ತನಿಖೆಯ ಮೇಲುಸ್ತುವಾರಿಯನ್ನು ಸ್ವತಃ ಪಶ್ಚಿಮ ವಲಯ ಐಜಿಪಿ ಅವರೇ ನೋಡಿಕೊಳ್ಳಬೇಕು.

ಹೊರಗೆ ಏನೇನು ಮಾತುಗಳು ಕೇಳಿಬರುತ್ತಿವೆ. ಅವುಗಳ ಬಗ್ಗೆ ಗಮನ ಕೊಡದೆ ಪೊಲೀಸರು ತಮ್ಮ ಥಿಯರಿಗೆ ಬದ್ಧವಾಗಿ ಕೆಲಸ ಮಾಡಬೇಕು ಎಂದವರು ಸಲಹೆ ಮಾಡಿದರು.

ಒಂದು ವರ್ಷದೊಳಗೆ ತನಿಖೆ ನಡೆಸಿ, ಆರೋಪ ಪಟ್ಟಿಯನ್ನು ಸಲ್ಲಿಸಿ, ವಿಚಾರಣೆ ಮುಗಿದು ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಆದ್ದರಿಂದ ಪ್ರಕರಣವನ್ನು ಶೀಘ್ರವಾಗಿ ಮುಗಿಸಲು ವಿಶೇಷ ತ್ವರಿತ ನ್ಯಾಯಾಲಯದಲ್ಲಿ ತನಿಖೆ ಮಾಡಬೇಕು ಎಂದರು. ಇದಕ್ಕೆ ಮೊದಲು ಕುಟುಂಬಿಕರ ಹತ್ಯೆ ಘಟನೆ ನೆನೆದು ಮನೆಯ ಯಜಮಾನ ನೂರ್ ಮುಹಮ್ಮದ್ ಕುಸಿದು ಬಿದ್ದರು. ತಕ್ಷಣ ಅವರಿಗೆ ನೀರು ನೀಡಿ ಆರೈಕೆ ಮಾಡಲಾಯಿತು. ಕಾಂಗ್ರೆಸ್ ನಾಯಕ ಎಂ.ಎ.ಗಫೂರ್ ಮತ್ತು ನೇಜಾರು ಪರಿಸರದ ಸಮುದಾಯದ ನಾಯಕರು ಉಪಸ್ಥಿತರಿದ್ದರು.