ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರೀಯ ಶಿಕ್ಷಣ ನೀತಿಯು(ಎನ್‌ಇಪಿ) ಕರ್ನಾಟಕವೂ ಸೇರಿದಂತೆ ದೇಶದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರಿಹೊಂದುವುದಿಲ್ಲ. ಅನೇಕ ಗೊಂದಲಕಾರಿ ಹಾಗೂ ಅವೈಜ್ಞಾನಿಕ ಅಂಶಗಳು ಇರುವುದರಿಂದ ಕೇಂದ್ರ ಸರ್ಕಾರ ಈ ನೀತಿಯನ್ನು ಪುನರ್ ಪರಿಶೀಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಒತ್ತಾಯಿಸಿದ್ದಾರೆ.ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಷ್ಟಬಂದ ವಿಷಯ ಆಯ್ಕೆ ಮಾಡಿಕೊಳ್ಳುವ, ಯಾವುದೇ ವರ್ಷದಲ್ಲಿ ಪದವಿಯಿಂದ ನಿರ್ಗಮನ, ಮತ್ತೆ ಸೇರ್ಪಡೆಯಂತಹ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಗಳನ್ನು ಅಳವಡಿಸಿರುವುದು ನಮ್ಮ ದೇಶಕ್ಕೆ ಸರಿ ಹೊಂದುವುದಿಲ್ಲ. ಹಾಗಾಗಿ ನಾವು ಎನ್‌ಇಪಿ ಮಾರ್ಪಡಿಸಿ ರಾಜ್ಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.
ಎನ್‌ಇಪಿ ಸರ್ಕಾರಿ ವಿವಿ, ಶಿಕ್ಷಣ ಸಂಸ್ಥೆಗಳಿಗೆ ಸರಿಹೊಂದುವುದಿಲ್ಲ. ಕೆಲ ಖಾಸಗಿ ವಿವಿಗಳಿಗೆ ಮಾತ್ರ ಇದರ ಸಮರ್ಪಕ ಜಾರಿ ಸಾಧ್ಯವಾಗಬಹುದು. ಏಕೆಂದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ತಾಂತ್ರಿಕ, ವೈದ್ಯಕೀಯ, ಇತರೆ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್ ಹೀಗೆ ನಿರ್ದಿಷ್ಟ ಕೋರ್ಸುಗಳ ವ್ಯಾಸಂಗಕ್ಕೆ ಸೀಮಿತಗೊಂಡಿವೆ. ಎಲ್ಲವನ್ನೂ ಒಂದೇ ಸೂರಿನಡಿ ಕಲಿಯಲು ಅವಕಾಶವಿಲ್ಲ ಎಂದರು.ಕರ್ನಾಟಕದ ಅನೇಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆಯಿದೆ. 14 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದರೂ ಕೊರತೆ ಮಾತ್ರ ನೀಗಿಲ್ಲ. ಅದೇ ರೀತಿ ಉನ್ನತ ಶಿಕ್ಷಣದ ಪ್ರವೇಶ ಪಡೆಯುವವರ ಪ್ರಮಾಣ ಕಡಿಮೆ ಇರುವಂತಹ ರಾಜ್ಯಗಳಲ್ಲಿ ಪದವಿ ವ್ಯಾಸಂಗದ ನಡುವೆ ಓದು ನಿಲ್ಲಿಸುವ, ಮತ್ತೆ ಬೇಕಾದಾಗ ಪುನಾರಂಭಿಸುವ ಅವಕಾಶ ನೀಡುವುದು ಕಷ್ಟ. ಇದು ಇನ್ನಷ್ಟು ಪ್ರವೇಶ ಪ್ರಮಾಣ ಇಳಿಕೆಗೆ ಕಾರಣವಾಗಬಹುದು. ಎನ್‌ಇಪಿ ಅಳವಡಿಕೆಗೆ ಕರ್ನಾಟಕವೇ ಇಷ್ಟು ಸಮಸ್ಯೆ ಎದುರಿಸಿದರೆ ಹಿಂದುಳಿದ ರಾಜ್ಯಗಳ ಸ್ಥಿತಿ ಏನು? ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಎನ್‌ಇಪಿಯನ್ನು ಪುನರ್ ಪರಿಶೀಲಿಸಬೇಕು ಎಂದರು.
ರಾಜ್ಯ ಶಿಕ್ಷಣ ನೀತಿ ಕರಡು ರಚನಾ ಆಯೋಗದ ಮಧ್ಯಂತರ ವರದಿ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ಮತ್ತು ಮುಕ್ತ ಆಯ್ಕೆಗಳನ್ನು ಒಳಗೊಂಡಂತೆ ಅನೇಕ ಅಂಶಗಳನ್ನು ಮಾರ್ಪಾಡು ಮಾಡಲಾಗಿದೆ. ಶೀಘ್ರದಲ್ಲಿ ಅಂತಿಮ ವರದಿಯನ್ನು ಕೂಡ ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು.ಇದಕ್ಕೂ ಮುನ್ನ ಘಟಿಕೋತ್ಸವ ಭಾಷಣ ಮಾಡಿದ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ, ಎನ್‌ಇಪಿ ಬಹುಶಿಸ್ತೀಯ, ಬಹು ಪ್ರವೇಶ, ನಿರ್ಗಮನದಂತಹ ಉಪಕ್ರಮಗಳಿಂದ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯುತ್ತಮ ಬದಲಾವಣೆಗೆ ಕಾರಣವಾಗಿವೆ ಎಂದು ಹೇಳಿದರು.
ಕುಲಪತಿ ಡಾ। ಎಸ್.ಎಂ.ಜಯಕರ, ಕುಲಸಚಿವ ಶೇಕ್ ಲತೀಫ್, ಕುಲಸಚಿವ (ಮೌಲ್ಯಮಾಪನ) ಸಿ.ಶ್ರೀನಿವಾಸ್, ಸಿಂಡಿಕೇಟ್ ಸದಸ್ಯರು, ಡೀನರ್ ಉಪಸ್ಥಿತರಿದ್ದರು.ಗುರುಕಿರಣ್, ರಾಜಣ್ಣಗೆ ಗೌಡಾ
ಘಟಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಅಂಗವಿಕಲರ ಅಧಿನಿಯಮದ ಮಾಜಿ ರಾಜ್ಯ ಆಯುಕ್ತ ಕೆ.ಎಸ್.ರಾಜಣ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.ಅನ್ನಪೂರ್ಣ, ಅನುರಾಧಗೆ ತಲಾ 9 ಚಿನ್ನ
ವಿವಿಧ ಪದವಿ, ಸ್ನಾತಕೋತ್ತರ ಪದವಿಯಲ್ಲಿ ರ್‍ಯಾಂಕ್ ಪಡೆದಿದ್ದ 158 ವಿದ್ಯಾರ್ಥಿಗಳು 308 ಚಿನ್ನದ ಪದಕ ಹಾಗೂ 79 ನಗದು ಬಹುಮಾನಗಳನ್ನು ಗಣ್ಯರಿಂದ ಸ್ವೀಕರಿಸಿದರು. ಸ್ನಾತಕೋತ್ತರ ಪದವಿಯಲ್ಲಿ ಎಸ್.ಅನ್ನಪೂರ್ಣ 9 ಚಿನ್ನದ ಪದಕ ಮತ್ತು ಸ್ನಾತಕ ಪದವಿ ವಿಭಾಗದಲ್ಲಿ ಅನುರಾಧಾ 9 ಚಿನ್ನದ ಪದಕ ಸ್ವೀಕರಿಸಿ ಅತಿ ಹೆಚ್ಚು ಚಿನ್ನದ ಪದಕ ಪಡೆದರು. 140 ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ನೀಡಲಾಯಿತು. ಈ ಬಾರಿ ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು 26,210 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಘಟಿಕೋತ್ಸವದಲ್ಲಿ ಸಾಂಕೇತಿಕವಾಗಿ ಒಂದಷ್ಟು ಮಂದಿಗೆ ಮಾತ್ರ ಪದವಿ ಪ್ರದಾನ ಮಾಡಿದ್ದು ಉಳಿದವರಿಗೆ ನಂತರ ಪದವಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.