ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಆರೋಗ್ಯಕರ ಮನಸ್ಸಿನಿಂದ ಉತ್ತಮ ಜೀವನ, ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಯಕ್ಷ್ಮ ಸಂವಾದ- ನಿ–ಕ್ಷಯ್ ರಾಷ್ಟ್ರೀಯ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೆಚ್ಚಿನ ತಿಳವಳಿಕೆ ಉಳ್ಳವರೇ ಪ್ಲಾಸ್ಟಿಕ್ ಬಳಸುತ್ತಾರೆ, ಕಂಡ ಕಂಡಲ್ಲಿ ಬಿಸಾಡುತ್ತಾರೆ. ಶುಚಿತ್ವ ಎಂಬುವುದು ವೈಯಕ್ತಿಕ ಮಟ್ಟದಲ್ಲಿ ಶುರುವಾಗವೇಕು. ಯಾರೋ ಶುಚಿ ಮಾಡಲೀ ಎನ್ನುವ ಬದಲು, ನಾನು ಕಸ ಹರಡಬಾರದು ಎಂಬುದನ್ನ ಅರಿತುಕೊಳ್ಳಬೇಕು. ಕುವೆಂಪು ಹೇಳಿದಂತೆ ಯಾರು ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡಿರುತ್ತಾರೊ ಅವರು ಉತ್ತುಂಗವಾಗಿ ಬೆಳೆಯುತ್ತಾರೆ. ಅಂಥವರಿಂದ ಉತ್ತಮ ಜೀವನ ಸಾಧ್ಯ ಎಂದು ಅವರು ಹೇಳಿದರು.ಪ್ರಧಾನಿಯವರು ವಿಕಸಿತ ಭಾರತ ನಿರ್ಮಾಣದ ಬಗ್ಗೆ ಕರೆ ನೀಡುತ್ತಿದ್ದಾರೆ. ಆದರೆ, ದೇಶದಲ್ಲಿ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗದೆ ಇರುವುದು ನಮ್ಮಲ್ಲಿರುವ ಇಚ್ಚಾಶಕ್ತಿಯ ಕೊರತೆಯನ್ನು ತೋರಿಸುತ್ತದೆ. ಕ್ಷಯರೋಗ ನಿರ್ಮೂಲನೆಯಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನಿಯ. ಕೋವಿಡ್ ಬರುವುದಕ್ಕಿಂತ ಮೊದಲು ವೈರಸ್, ಬ್ಯಾಕ್ಟೀರಿಯಾ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಇಂದು ಜಾಗೃತಿ ಹೆಚ್ಚಾಗಿದೆ. ಕ್ಷಯ ರೋಗದ ಬಗ್ಗೆಯೂ ಜಾಗೃತಿ ಹೆಚ್ಚಲಿ ಎಂದು ಅವರು ಆಶಿಸಿದರು.
ಇದೇ ವೇಳೆ ಆಯುಷ್ ಫಾರ್ ಯೂ ನಿಯತಕಾಲಿಕವನ್ನು (ಜರ್ನಲ್) ಕಿದ್ವಾಯಿ ಆಸ್ಪತ್ರೆ ನಿವೃತ್ತ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಬಿಡುಗಡೆಗೊಳಿಸಿದರು. ಬಳಿಕ ಅವರಿಗೆ ಅಭಿನವ ಧನ್ವಂತರಿ ಬಿರುದು ನೀಡುವ ಮೂಲಕ ಸನ್ಮಾನಿಸಲಾಯಿತು.ಆದಿಚುಂಚನಗಿರಿ ವಿವಿ ಕುಲಪತಿ ಡಾ.ಎಂ.ಎ. ಶೇಖರ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಲಕ್ಷ್ಮಿನಾರಾಯಣ ಶೆಣೈ, ಅಪೋಲೊ ಬಿಜಿಎಸ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ.ಕೆ. ಮಧು, ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜ್ ಕುಮಾರ್ ಎಚ್. ಗರಂಪಳ್ಳಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್, ಸ್ವಸ್ಥ ವೃತ್ತ ವಿಭಾಗದ ಪ್ರೊ.ಕೆ.ವಿ. ವೆಂಕಟಕೃಷ್ಣ , ಡಾ. ಗುರುಬಸವರಾಜ್, ಡಾ. ಶುಶೃತ್ ಗೌಡ, ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ. ಕಿರಣ್ ಮೊದಲಾದವರು ಇದ್ದರು.