ಇಂದಿನ ಲಾರಿ ಮುಷ್ಕರಕ್ಕೆ ಎಐಎಂಟಿಸಿ ಬೆಂಬಲವಿಲ್ಲ: ಸೈಯದ್

| Published : Jan 17 2024, 01:50 AM IST

ಇಂದಿನ ಲಾರಿ ಮುಷ್ಕರಕ್ಕೆ ಎಐಎಂಟಿಸಿ ಬೆಂಬಲವಿಲ್ಲ: ಸೈಯದ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಬ್ಬ ಕೇಂದ್ರ ಸಚಿವ ಪಿಯುಷ್ ಗೋಯಲ್ ರಿಂದ ವಿವರಣೆ ಪಡೆದು, ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ ಸಂಘಟನೆ ಜೊತೆಗೆ ಸತತ 3-4 ತಾಸು ಚರ್ಚಿಸಿ, ಐಪಿಸಿ 106 ಅನುಚ್ಛೇದ 2 ಕಾನೂನು ಜಾರಿಗೊಳಿಸುವುದಿಲ್ಲವೆಂಬ ಭರವಸೆ ನೀಡಿದ ನಂತರ ಮುಷ್ಕರದ ಪ್ರಶ್ನೆಯೇ ಇಲ್ಲ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಐಪಿಸಿ 106 ಅನುಚ್ಛೇದ 2 ಕಾನೂನನ್ನು ಜಾರಿಗೊಳಿಸುವುದಿಲ್ಲವೆಂದು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಐಎಂಟಿಸಿ ಸಂಘಟನೆಗೆ ಲಿಖಿತ ಹಾಗೂ ಮಾಧ್ಯಮಗಳ ಮೂಲಕ ವಿವರಣೆ ನೀಡಿರುವ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಮೋಟಾರ್‌ ಟ್ರಾನ್ಸಪೋರ್ಟ್‌ ಕಾಂಗ್ರೆಸ್ (ಎಐಎಂಟಿಸಿ) ಮುಷ್ಕರಕ್ಕೆ ಹೋಗದೇ, ಕೇಂದ್ರ ಸರ್ಕಾರವು ಕಾನೂನು ಹಿಂಪಡೆಯುವುದು ನಿರೀಕ್ಷಿಸುತ್ತಿದೆ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸಪೋರ್ಟ್‌ ಏಜೆಂಟರ ಸಂಘ ತಿಳಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಬ್ಬ ಕೇಂದ್ರ ಸಚಿವ ಪಿಯುಷ್ ಗೋಯಲ್ ರಿಂದ ವಿವರಣೆ ಪಡೆದು, ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ ಸಂಘಟನೆ ಜೊತೆಗೆ ಸತತ 3-4 ತಾಸು ಚರ್ಚಿಸಿ, ಐಪಿಸಿ 106 ಅನುಚ್ಛೇದ 2 ಕಾನೂನು ಜಾರಿಗೊಳಿಸುವುದಿಲ್ಲವೆಂಬ ಭರವಸೆ ನೀಡಿದ ನಂತರ ಮುಷ್ಕರದ ಪ್ರಶ್ನೆಯೇ ಇಲ್ಲ ಎಂದರು.

ಈ ಕಾನೂನು ಲೋಕಸಭೆ, ರಾಜ್ಯಸಭೆ ಹಾಗೂ ರಾಷ್ಟ್ರಪತಿಯವರ ಒಪ್ಪಿಗೆ ನಂತರ ಅದನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಹಿಂಪಡೆಯಲು ಸಂಘಟನೆಯು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಒತ್ತಾಯಿಸುತ್ತದೆ. ಅಲ್ಲದೇ, ಜ.17ರಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಸ್ಥೆ ಕರೆ ನೀಡಿರುವ ಬಂದ್‌ಗೆ ಎಐಎಂಟಿಸಿ ಸಂಘಟನೆ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಶಾದ್ಯಂತ ಆಕ್ಟ್ರಾಯ್‌(ಜಕಾತಿ) ತೆಗೆಸುವಲ್ಲಿ ಎಐಎಂಟಿಸಿ ಮಹತ್ವದ ಪಾತ್ರ ವಹಿಸಿದೆ. ಲಾರಿ ಮಾಲೀಕರು ರಾಷ್ಟ್ರೀಯ ಪರವಾನಗಿ ಪಡೆಯಲು ಪ್ರತಿ ರಾಜ್ಯಕ್ಕೆ 5ರಿಂದ 8 ಸಾವಿರ ರು. ತೆರಿಗೆ ಕಟ್ಟಿ, ಸಂಬಂಧಿಸಿದ ರಾಜ್ಯ ಪ್ರವೇಶಿಸಬೇಕಿತ್ತು. ಇದನ್ನು ಸುಲಭವಾಗಿ ರಾಷ್ಟ್ರೀಯ ಪರವಾನಿಗೆ ಪಡೆಯಲು ಏಕಮುಖ ತೆರಿಗೆ ವಿಧಿಸಿ, ರಾಷ್ಟ್ರದ ಯಾವುದೇ ರಾಜ್ಯಕ್ಕೆ ಪ್ರವೇಶಿಸಲು 15 ಸಾವಿರ ರು. ನಿಗದಿಪಡಿಸಿ, ಸಾರಿಗೆ ಮಾಲೀಕರಿಗೆ ಅನುಕೂಲ ಮಾಡಿಕೊಡಲಾಗಿದೆ. 5 ವರ್ಷದಿಂದ ವಾಹನಗಳಿಗೆ ವಿಮೆ ದರ ಹೆಚ್ಚಿಸದಂತೆ ಕೇಂದ್ರದ ಮೇಲೆ ಒತ್ತಡ ಹೇರಿ, ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.

ಈಚೆಗೆ ಕೇಂದ್ರ ಗೃಹ ಸಚಿವಾಲಯ ಐಪಿಸಿ ಸೆಕ್ಷನ್ 304 ಎ ಭಾರತೀಯ ನ್ಯಾಯ ದಂಡ ಸಂಹಿತೆ ಅಡಿಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಗೆ ಕಾನೂನಿನಲ್ಲಿ ಪರಿವರ್ತನೆ ಮಾಡಿ, 7 ಲಕ್ಷ ರು. ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ(ಜಾಮೀನು ರಹಿತ) ಮಾಡಿದ್ದು ಖಂಡನೀಯ ಎಂದು ವಿವರಿಸಿದರು.

ಪ್ರತಿ ವಾಹನ ಚಾಲಕರಿಗೂ ಅನ್ವಯ:

ಇಂತಹದ್ದೊಂದು ಕಾನೂನು ಕೇವಲ ಯಾವುದೇ ಉದ್ಯಮಕ್ಕೆ ಸಂಬಂಧಿಸಿದ್ದಲ್ಲ. ಇದು ಪ್ರತಿ ವಾಹನದ ಚಾಲಕರಿಗೂ ಅನ್ವಯವಾಗುತ್ತದೆ. ಈ ಹಿಂದೆ 304 ಎ ಗೆ ಪೊಲೀಸ್ ಠಾಣೆಯಲ್ಲಿ ಜಾಮೀನಿನ ಮೇಲೆ ಚಾಲಕನಿಗೆ ಬಿಡುಗಡೆಯಾಗುತ್ತಿತ್ತು. ಆದರೆ, 106 ಕ್ಲಾಸ್ 2 ಅಡಿಯಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆಯುವುದು ಎಷ್ಟರ ಮಟ್ಟಿಗೆ ಸರಿ? ಈ ಕಾಯ್ದೆ ಗಂಭೀರತೆಯನ್ನು ಎಐಎಂಟಿಸಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸೈಯದ್ ಸೈಫುಲ್ಲಾ ತಿಳಿಸಿದರು.

ಸಂಘದ ಕಾರ್ಯದರ್ಶಿ ಎಸ್.ಕೆ.ಮಲ್ಲಿಕಾರ್ಜುನ, ಖಜಾಂಚಿ ಮಹಾಂತೇಶ ವಿ.ಒಣರೊಟ್ಟಿ, ಎಂ.ದಾದಾಪೀರ್, ಶ್ರೀಧರ ಬಾತಿ, ಬಿ.ಭೀಮಣ್ಣ, ಫಯಾಜ್ ಅಹಮ್ಮದ್‌, ರಫೀಕ್, ಸರ್ದಾರ್ ಅಲಿ ಇತರರಿದ್ದರು..............

ಸಾರಿಗೆ ಉದ್ಯಮ ಪರ ಹೋರಾಡುವ ಸಂಸ್ಥೆ

ಸ್ವಾತಂತ್ರ್ಯ ಪೂರ್ವದಲ್ಲೇ ಲಾಹೋರ್‌ನಲ್ಲಿ 1936ರಲ್ಲಿ ಬ್ರಿಟಿಷರ ವಿರುದ್ಧ ಸಾರಿಗೆ ಉದ್ಯಮಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸಲು ಸ್ಥಾಪನೆಯಾದ ಸಂಸ್ಥೆ ಎಐಎಂಟಿಸಿ. ಅಂದಿನಿಂದ ಇಂದಿನವರೆಗೂ ಸಾರಿಗೆ ಉದ್ಯಮಕ್ಕೆ ಸಂಬಂಧಿಸಿ ಯಾವುದೇ ಅನ್ಯಾಯವಾದರೆ, ಅದರ ವಿರುದ್ಧ ಧ್ವನಿ ಎತ್ತಿ ಹೋರಾಡುವ ರಾಷ್ಟ್ರೀಯ ಸಂಘಟನೆ. ಕೇಂದ್ರ ಸರ್ಕಾರದೊಂದಿಗೆ ಸಾರಿಗೆ ಉದ್ಯಮಕ್ಕೆ ಸಂಬಂಧಿಸಿ ತೊಂದರೆಯಾದರೆ ಹೋರಾಡುತ್ತ ಬಂದ ಸಂಸ್ಥೆಯಾಗಿದೆ.

ಸೈಯದ್ ಸೈಫುಲ್ಲಾ, ಜಿಲ್ಲಾಧ್ಯಕ್ಷ, ಲಾರಿ ಮಾಲೀಕರು, ಟ್ರಾನ್ಸಪೋರ್ಟ್ ಏಜೆಂಟರ ಸಂಘ

...................