ಸಾರಾಂಶ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಲೋಕಾಯುಕ್ತ ಸಂಸ್ಥೆಯು ಬಾಹ್ಯ ಪ್ರಭಾವಗಳಿಂದ ಸ್ವಾತಂತ್ರ್ಯ ಮತ್ತು ರಕ್ಷಣೆ ಹೊಂದಿದೆ. ಹಾಲಿ ಮುಖ್ಯಮಂತ್ರಿ ವಿರುದ್ಧದ ಅಪರಾಧವನ್ನು ತನಿಖೆ ಮಾಡಲು ಲೋಕಾಯುಕ್ತ ಸಂಸ್ಥೆ ಸಮರ್ಥವಾಗಿದೆ. ಪ್ರಕರಣದಲ್ಲಿ ಈವರೆಗೆ ಲೋಕಾಯುಕ್ತ ಪೊಲೀಸರ ತನಿಖಾ ವರದಿ ಪರಿಶೀಲಿಸಿದಾಗ, ತನಿಖೆ ಲೋಪದೋಷಗಳಿಂದ ಅಥವಾ ಪಕ್ಷಪಾತದಿಂದ ಕೂಡಿದೆ ಎಂಬುದಾಗಿ ಕಂಡುಬಂದಿಲ್ಲ. ಆದ್ದರಿಂದ ಪ್ರಕರಣವನ್ನು ಮುಂದಿನ ತನಿಖೆಗಾಗಿ ಅಥವಾ ಮರು ತನಿಖೆಗಾಗಿ ಸಿಬಿಐಗೆ ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇನ್ನು ಲೋಕಾಯುಕ್ತ ಪೊಲೀಸರು ಪ್ರಕರಣ ಕುರಿತು ಈವರೆಗೆ ತನಿಖೆ ನಡೆಸಿ ಸಿದ್ಧಪಡಿಸಿರುವ ತನಿಖಾ ವರದಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ. ಅಲ್ಲಿ ಅರ್ಜಿದಾರರು ಕಾನೂನಿನಡಿ ಲಭ್ಯವಿರುವ ಪರಿಹಾರ ಪಡೆದುಕೊಳ್ಳಬಹುದು ಎಂದು ಪೀಠ ತಿಳಿಸಿದೆ.
ಇದರೊಂದಿಗೆ ಸಿಬಿಐ ಕುಣಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿಸಿಕೊಂಡಂತಾಗಿದೆ. ಅಲ್ಲದೆ, ರಾಜಕೀಯ ಕಾರಣಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಮಹತ್ವ ಪಡೆದುಕೊಂಡಿರುವ ಮುಡಾ ಪ್ರಕರಣ ಸಂಬಂಧ ನಡೆಸಿದ ಕಾನೂನು ಹೋರಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲ ಬಾರಿಗೆ ಯಶಸ್ಸು ಸಿಕ್ಕಂತಾಗಿದೆ.
ಮುಡಾ ಪ್ರಕರಣದ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠವೇ 2024ರ ಸೆ.24ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರೂ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ಸಿಕ್ಕಿರಲಿಲ್ಲ. ಮತ್ತೊಂದೆಡೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ ವರದಿ ಸಿದ್ಧಪಡಿಸಿದ್ದರು. ನಂತರ ಜಾರಿ ನಿರ್ದೇಶನಾಲಯ(ಇ.ಡಿ)ವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಸಮನ್ಸ್ ಸಹ ಜಾರಿ ಮಾಡಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಬಿಐ ತನಿಖೆ ಭೀತಿ ಸಹ ಆವರಿಸಿತ್ತು. ಇದೀಗ ಹೈಕೋರ್ಟ್ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದೆ. ಇದರಿಂದ ಮುಖ್ಯಮಂತ್ರಿಗಳು ಅಲ್ಪ ಪ್ರಮಾಣದಲ್ಲಿ ನಿರಾಳರಾಗಿದ್ದಾರೆ.
ಮೂರು ಪ್ರಶ್ನೆ ರಚಿಸಿ ಉತ್ತರಿಸಿರುವ ಕೋರ್ಟ್:
ಲೋಕಾಯುಕ್ತ ಹಾಗೂ ಲೋಕಾಯುಕ್ತ ಸಂಸ್ಥೆ ಪ್ರಶ್ನಾರ್ಹ ಸ್ವಾತಂತ್ರ್ಯವನ್ನು ಹೊಂದಿದೆಯೇ? ಯಾವ ಸಂದರ್ಭದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ತನಿಖೆ, ಮುಂದುವರಿದ ತನಿಖೆ ಮತ್ತು ಮರು ತನಿಖೆಯನ್ನು ಸಿಬಿಐಗೆ ವಹಿಸಿವೆ? ಯಾವ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ವಹಿಸಲು ನ್ಯಾಯಾಲಯ ನಿರಾಕರಿಸಿದೆ? ಲೋಕಾಯುಕ್ತ ತನಿಖೆ ನಡೆಸಿ ಸಲ್ಲಿಸಿರುವ ದಾಖಲೆಗಳನ್ನು ನೋಡಿದ ಬಳಿಕ ಪ್ರಕರಣವನ್ನು ಸಿಬಿಐಗೆ ಮುಂದುವರಿದ ತನಿಖೆ ನಡೆಸಲು ಅಥವಾ ಮರು ತನಿಖೆಗೆ ಆದೇಶಿಸಬೇಕೇ? ಎಂಬುದಾಗಿ ಮೂರು ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಅಲ್ಲದೆ, ಮೊದಲಿಗೆ ಲೋಕಾಯುಕ್ತ ಪೊಲೀಸರಿಂದ ತನಿಖೆ ಮನವಿ ಮಾಡಿ, ನಂತರ ಸಿಬಿಐಗೆ ತನಿಖೆಗೆ ಕೋರಿರುವ ಅರ್ಜಿದಾರರ ನಡೆಗೆ ಇದೇ ವೇಳೆ ಆಕ್ಷೇಪಿಸಿದೆ.
ಶಾಹಿ ಒಣಗುವ ಮುನ್ನವೇ ಹೈಕೋರ್ಟ್‌ಗೆ:
ಅರ್ಜಿದಾರರು ಲೋಕಾಯುಕ್ತ ಕೋರ್ಟ್‌ಗೆ ದೂರು ಸಲ್ಲಿಸಿ, ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ನಿರ್ದೇಶಿಸುವಂತೆ ಕೋರಿದ್ದರು. ನಂತರ ರಾಜ್ಯಪಾಲರಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು. ರಾಜ್ಯಪಾಲರು ಅನುಮತಿ ನೀಡಿದ್ದು, ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶದ ಮೇರೆಗೆ ವಿಚಾರಣಾ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲು 2024ರ ಸೆ.25 ರಂದು ಆದೇಶಿಸಿತ್ತು. ಮರು ದಿನ ಮಧ್ಯಾಹ್ನ 1.40ಕ್ಕೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು ಎಂದು ಪೀಠ ಹೇಳಿದೆ.
ಅಂದರೆ ವಿಚಾರಣಾ ನ್ಯಾಯಾಲಯದ ಆದೇಶದ ಮೇಲಿನ ಶಾಹಿ ಒಣಗುವ ಮೊದಲೇ ಹಾಗೂ ಎಫ್‌ಐಆರ್ ದಾಖಲಾಗುವ ಒಂದು ಗಂಟೆಯ ಮುನ್ನವೇ ಅರ್ಜಿದಾರರು ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ. 2024ರ ನ.5ರವರೆಗೆ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಮನವಿ ಮಾಡಿಲ್ಲ. ಮೊದಲಿಗೆ ಲೋಕಾಯುಕ್ತ ತನಿಖೆಗೆ ಕೋರಿದ್ದ ಅರ್ಜಿದಾರರು, ತನಿಖೆ ಏನೆಂದು ತಿಳಿಯದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸಿಬಿಐ ತನಿಖೆಗೆ ಕೋರಿದ್ದಾರೆ ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದ್ದಾರೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿದೆ. ಬಾಹ್ಯ ಪ್ರಭಾವಗಳಿಂದ ರಕ್ಷಣೆ ಹೊಂದಿದೆ. ಅದರ ಸಾಂಸ್ಥಿಕ ಸಮಗ್ರತೆ ಹಾಗೂ ಸ್ವಾತಂತ್ರ್ಯವನ್ನು ಮರೆಯಲಾಗುವುದಿಲ್ಲ. ಹಾಲಿ ಮುಖ್ಯಮಂತ್ರಿ ಸೇರಿ ಸಚಿವರು, ಉನ್ನತಾಧಿಕಾರಿಗಳ ವಿರುದ್ಧದ ಅಪರಾಧವನ್ನು ತನಿಖೆ ಮಾಡಲು ಲೋಕಾಯುಕ್ತ ಸಂಸ್ಥೆ ಸಮರ್ಥವಾಗಿದೆ ಎಂದು ಪೀಠ ಹೇಳಿದೆ.
ಸ್ವತಂತ್ರ ಸಂಸ್ಥೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿಲ್ಲ:
ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿನ ತನಿಖೆಯನ್ನು ಸ್ಥಳೀಯ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿದೆ. ಆ ಅಪರಾಧ ಪ್ರಕರಣಗಳನ್ನು ಯಾವುದೇ ಸ್ವತಂತ್ರ ಸಂಸ್ಥೆ ತನಿಖೆ ನಡೆಸುತ್ತಿರಲಿಲ್ಲ. ಸ್ಥಳೀಯ ಪೊಲೀಸರೇ ಆರೋಪ ಅಥವಾ ಪ್ರಕರಣಗಳಲ್ಲಿ ಭಾಗಿಯಾದ ಅಥವಾ ಅದರಿಂದ ದೊಡ್ಡ ಪರಿಣಾಮಗಳು ಉಂಟಾಗಬಹುದು ಎಂಬ ಪರಿಸ್ಥಿತಿಯಲ್ಲಿ ಸಿಬಿಐಗೆ ತನಿಖೆಯನ್ನು ವರ್ಗಾಯಿಸಲಾಗಿದೆ. ಲೋಕಾಯಕ್ತ ಅಥವಾ ಲೋಕಪಾಲದಂಥ ಸ್ವತಂತ್ರ ತನಿಖಾ ಸಂಸ್ಥೆಯಿಂದ ಮಧ್ಯಭಾಗದಲ್ಲಿಯೇ ತನಿಖೆಯನ್ನು ಸಿಬಿಐಗೆ ವಹಿಸಿದಂತಹ ಒಂದು ಪ್ರಕರಣವನ್ನೂ ನ್ಯಾಯಾಲಯದ ಮುಂದಿಟ್ಟಿಲ್ಲ ಎಂದು ಪೀಠ ನುಡಿದಿದೆ.
ಸ್ಥಳೀಯ ಪೊಲೀಸರ ಮೇಲೆ ಕಕ್ಷಿದಾರರು ಸಾಮಾನ್ಯ ರೀತಿಯಲ್ಲಿ ಆರೋಪ ಮಾಡಿದ ಮಾತ್ರಕ್ಕೆ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಲಾಗುವುದಿಲ್ಲ. ಅಸಾಧಾರಣ ಹಾಗೂ ವ್ಯಾಪಕ ಪರಿಣಾಮಗಳನ್ನು ಬೀರುವ ಸಂದರ್ಭಗಳಲ್ಲಿ ತನಿಖೆಯನ್ನು ವರ್ಗಾವಣೆ ಮಾಡುವಂತಹ ಅಧಿಕಾರವನ್ನು ನ್ಯಾಯಾಲಯಗಳು ಮಿತ ಹಾಗೂ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಇಲ್ಲವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬಿಐಗೆ ಬರುತ್ತವೆ. ಆದ್ದರಿಂದ ಆರೋಪಿಗಳಲ್ಲಿ ಒಬ್ಬರು ಹಾಲಿ ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ವಾದ ಸ್ವೀಕಾರಾರ್ಹವಲ್ಲ ಎಂಧು ಪೀಠ ಹೇಳಿದೆ.
ಇನ್ನೂ ಪ್ರಕರಣವನ್ನು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿಲ್ಲ. ಲೋಕಾಯುಕ್ತ ತನಿಖಾ ವಿಭಾಗ ತನಿಖೆ ನಡೆಸುತ್ತಿದೆ. ಆ ವಿಭಾಗವು ಲೋಕಾಯುಕ್ತ ಅಥವಾ ಲೋಕಾಯುಕ್ತ ಎಡಿಜಿಪಿಗೆ ಉತ್ತರ ನೀಡಬೇಕಿರುತ್ತದೆ. ಲೋಕಾಯುಕ್ತ ಕಾಯ್ದೆಯೇ ತನಿಖಾಧಿಕಾರಿಗಳನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸುತ್ತದೆ. ಉನ್ನತ ಅಧಿಕಾರಿಗಳ ಪ್ರಕರಣಗಳಲ್ಲಿ ತನಿಖೆ ನಡೆಸುವ ಲೋಕಾಯುಕ್ತದ ಸ್ವಾತಂತ್ರ್ಯವನ್ನು ನ್ಯಾಯಾಲಯದ ಆದೇಶದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಒಂದ ವೇಳೆ ಆ ರೀತಿ ಮಾಡಿದರೆ, ಅದು ಕಾಯ್ದೆಯನ್ನು ನಿಷ್ಪಲಗೊಳಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿ, ಸಚಿವರು ಮತ್ತು ರಾಜ್ಯದ ಉನ್ನತಾಧಿಕಾರಿಗಳ ವಿರುದ್ಧದ ತನಿಖೆ ನಡೆಸಲು ಲೋಕಾಯುಕ್ತ ಕಾಯ್ದೆ ಅವಕಾಶ ಕಲ್ಪಿಸಿದೆ. ಅರ್ಜಿದಾರರು ಸಂಶಯ ವ್ಯಕ್ತಪಡಿಸಿದ ಮಾತ್ರಕ್ಕೆ ಲೋಕಾಯುಕ್ತವನ್ನು ಖಂಡಿಸಲಾಗುವುದಿಲ್ಲ. ಇನ್ನು ಲೋಕಾಯುಕ್ತ ಸಂಸ್ಥೆಯಿಂದ ಪ್ರಕರಣದ ತನಿಖಾ ದಾಖಲೆಗಳನ್ನು ಕಾಲಕಾಲಕ್ಕೆ ಪಡೆದು ಪರಿಶೀಲಿಸಲಾಗಿದೆ. ಲೋಕಾಯುಕ್ತ ಪೊಲೀಸರು ಎಲ್ಲಾ ಸಾರ್ವಜನಿಕ ದಾಖಲೆ, ನೋಟಿಫೀಕೇಷನ್‌ಗಳನ್ನು ಪಡೆದುಕೊಂಡಿದ್ದು, ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರಿಂದ ಈವರೆಗಿನ ತನಿಖೆ ಪಕ್ಷಪಾತವಾಗಿದೆ ಅಥವಾ ಕಳಪೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಕೋರ್ಟ್ ಹೇಳಿದ್ದೇನು?
- ಪೊಲೀಸರ ಮೇಲೆ ಕಕ್ಷಿದಾರರು ಆರೋಪ ಮಾಡಿದಾಕ್ಷಣ ಪ್ರಕರಣವನ್ನು ಸಿಬಿಐಗೆ ಕೊಡಲಾಗದು
- ಪ್ರಕರಣದ ತನಿಖೆಗೆ ಲೋಕಾ ಸಮರ್ಥ
- ಸಿಬಿಐಗೆ ಕೊಡಲು ಆಗದು: ಹೈಕೋರ್ಟ್- ಮುಡಾ: ಕೋರ್ಟಲ್ಲಿ ಸಿದ್ದುಗೆ ಮೊದಲ ಜಯ
- ಪ್ರಕರಣವನ್ನು ತನಿಖೆ ನಡೆಸುತ್ತಿರುವುದು ಲೋಕಾಯುಕ್ತದ ತನಿಖಾ ವಿಭಾಗ. ಸ್ಥಳೀಯ ಪೊಲೀಸ್ ಅಲ್ಲ- ಲೋಕಾಯುಕ್ತ ಕಾಯ್ದೆಯೇ ತನಿಖಾಧಿಕಾರಿಗಳನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಣೆ ಮಾಡುತ್ತದೆ
- ಉನ್ನತ ಪ್ರಕರಣಗಳಲ್ಲಿ ತನಿಖೆ ನಡೆಸುವ ಲೋಕಾಯುಕ್ತದ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಆಗದು- ಲೋಕಾಯುಕ್ತರ ತನಿಖಾ ವರದಿ ಪರಿಶೀಲಿಸಿದಾಗ ಅದು ಪಕ್ಷಪಾತದಿಂದ ಕೂಡಿದೆ ಎಂದು ಕಂಡುಬಂದಿಲ್ಲ- ಹೀಗಾಗಿ ಪ್ರಕರಣವನ್ನು ಮರುತನಿಖೆಗಾಗಿ ಸಿಬಿಐ ತನಿಖೆಗೆ ನೀಡಲು ಸಾಧ್ಯವಿಲ್ಲ: ಹೈಕೋರ್ಟ್
ಸುಪ್ರೀಂಗೆ ಹೋಗುವೆಲೋಕಾಯುಕ್ತ ತನಿಖೆ ನಿಷ್ಪಕ್ಷಪಾತವಾಗಿಲ್ಲ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ.- ಸ್ನೇಹಮಯಿ ಕೃಷ್ಣ, ದೂರುದಾರ--ಸಿದ್ದು ನಿರಪರಾಧಿ ಅಂತೇನೂ ಹೇಳಿಲ್ಲಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ನಿರಪರಾಧಿ ಎಂದು ಹೈಕೋರ್ಟ್ ಹೇಳಿಲ್ಲ. - ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ