ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಯನ್ನು ಮರು ಮಂಡನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ

| N/A | Published : Feb 08 2025, 01:45 AM IST / Updated: Feb 08 2025, 08:17 AM IST

Vidhan soudha

ಸಾರಾಂಶ

‘ರಾಜ್ಯದಲ್ಲಿ ನೋಂದಾಯಿತವಲ್ಲದ ಅಥವಾ ಸಾಲ ನೀಡಲು ಪರವಾನಗಿ ಹೊಂದಿರದ ಯಾವುದೇ ವ್ಯಕ್ತಿ ಸಾಲ ನೀಡಲು, ಹೆಚ್ಚಿನ ಬಡ್ಡಿ, ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ಸಂಗ್ರಹಿಸಲು ಕಾನೂನಿನಲ್ಲಿ ಅಧಿಕಾರ ಹೊಂದಿಲ್ಲ.

 ಬೆಂಗಳೂರು : ‘ರಾಜ್ಯದಲ್ಲಿ ನೋಂದಾಯಿತವಲ್ಲದ ಅಥವಾ ಸಾಲ ನೀಡಲು ಪರವಾನಗಿ ಹೊಂದಿರದ ಯಾವುದೇ ವ್ಯಕ್ತಿ ಸಾಲ ನೀಡಲು, ಹೆಚ್ಚಿನ ಬಡ್ಡಿ, ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ಸಂಗ್ರಹಿಸಲು ಕಾನೂನಿನಲ್ಲಿ ಅಧಿಕಾರ ಹೊಂದಿಲ್ಲ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ’ ಎಂಬ ಅಂಶ ಸೇರಿ ರಾಜ್ಯಪಾಲರು ಎತ್ತಿರುವ ಆರು ಪ್ರಶ್ನೆಗಳಿಗೆ ಸ್ಪಷ್ಟನೆ ಜತೆಗೆ ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಯನ್ನು ಮರು ಮಂಡನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ತನ್ಮೂಲಕ ಕಾನೂನುಬಾಹಿರವಾಗಿ ನೀಡಿರುವ ಸಾಲ ಹಾಗೂ ಬಡ್ಡಿಯಿಂದ ಸಾಲಗಾರರನ್ನು ಮುಕ್ತಗೊಳಿಸುವ ಅಂಶವನ್ನು ಹೊಂದಿರುವ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರ ಕಳುಹಿಸಿದ್ದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆಯು -2025’ ಸ್ಪಷ್ಟನೆ ಕೋರಿ ರಾಜ್ಯಪಾಲರು ಶುಕ್ರವಾರ ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

ರಾಜ್ಯಪಾಲರು ಕೋರಿರುವ ಆರು ಅಂಶಗಳ ಬಗ್ಗೆ ಕಾನೂನು ಇಲಾಖೆ ಶುಕ್ರವಾರವೇ ಸ್ಪಷ್ಟನೆ ಸಿದ್ಧಪಡಿಸಿದ್ದು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಕೆ ಮಾಡಿದೆ. ಮುಖ್ಯಮಂತ್ರಿಗಳು ಅಂತಿಮವಾಗಿ ಪರಿಶೀಲನೆ ನಡೆಸಿ ಶನಿವಾರ ಅಥವಾ ಭಾನುವಾರ ರಾಜ್ಯಪಾಲರಿಗೆ ಸ್ಪಷ್ಟನೆಯೊಂದಿಗೆ ಸುಗ್ರೀವಾಜ್ಞೆಯನ್ನು ಮರು ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರಕ್ಕೆ ಸುಗ್ರೀವಾಜ್ಞೆ ವಾಪಸು ಕಳುಹಿಸಿರುವ ರಾಜ್ಯಪಾಲರು, ‘ನೋಂದಾಯಿತವಲ್ಲದ ಹಾಗೂ ಲೈಸನ್ಸ್‌ ಇಲ್ಲದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಸಾಲ ಹಾಗೂ ಬಡ್ಡಿಯಿಂದ ಸಾಲಗಾರನಿಗೆ ಮುಕ್ತಿ ನೀಡಲು ಪ್ರಸ್ತಾಪಿಸಲಾಗಿದೆ. ಜತೆಗೆ ಸಾಲ, ಬಡ್ಡಿ ವಸೂಲಿ ಮಾಡುವ ಕುರಿತ ವ್ಯಾಜ್ಯಗಳನ್ನು ನ್ಯಾಯಾಲಯ ಪರಿಗಣಿಸುವಂತಿಲ್ಲ. ಜತೆಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನೂ ಕೈಬಿಡಬೇಕು ಎಂದು ಪ್ರಸ್ತಾಪಿಸಲಾಗಿದೆ. ಇದು ಸಾಲ ನೀಡಿರುವ ವ್ಯಕ್ತಿಗಳ ಸಂವಿಧಾನ ಬದ್ಧ ಮೂಲಭೂತ ಹಕ್ಕು ಉಲ್ಲಂಘನೆ’ ಎಂದು ಆಕ್ಷೇಪಿಸಿದ್ದರು.

ಇದಕ್ಕೆ ಕಾನೂನು ಇಲಾಖೆಯು ತೀಕ್ಷ್ಣ ಪ್ರತಿಕ್ರಿಯೆ ಸಿದ್ಧಪಡಿಸಿದ್ದು, ‘ಪರವಾನಗಿ ಇಲ್ಲದೆ ಸಾಲ ನೀಡುವುದು, ಬಡ್ಡಿ ವಸೂಲಿ ಮಾಡುವುದು ಸಂವಿಧಾನಾತ್ಮಕವಾಗಿ ಮೂಲಭೂತ ಹಕ್ಕು ಎನ್ನುವುದಾದರೆ ಸಂವಿಧಾನದ ಬಹುದೊಡ್ಡ ರಕ್ಷಣೆ, ಸಮಾಜದಲ್ಲಿ ಅಕ್ರಮ ಬಡ್ಡಿ ವಿಧಿಸಿ ಕಾನೂನು ಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ’ ಎಂದು ತಿರುಗೇಟು ನೀಡಿದೆ.

ಸಾಲ ವಸೂಲಿ ಮಾಡಬಾರದು ಅಥವಾ ಪರವಾನಗಿ ಇಲ್ಲದವರು ನೀಡಿರುವ ಸಾಲಗಳು ವಸೂಲಿಗೆ ಅರ್ಹವಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಿಲ್ಲ. ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು, ನಿಷೇಧಿಸಲು ಪ್ರಸ್ತಾಪಿಸಲಾಗಿದೆ.

ಇನ್ನು ಈ ಮಸೂದೆಯನ್ನು ವಿಧಾನಮಂಡಲದಲ್ಲಿ ಸಹಜವಾಗಿಯೇ ಮಂಡಿಸಲಾಗುತ್ತದೆ. ಆ ವೇಳೆ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ. ಆದರೆ, ಸರ್ಕಾರವು ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆ ಮೂಲಕ ಜನರ ನೆರವಿಗೆ ಬರಬೇಕು. ಹೀಗಾಗಿ ರಾಜ್ಯ ಸರ್ಕಾರಕ್ಕೆ ಸಂವಿಧಾನದತ್ತವಾಗಿರುವ ಪರಮಾಧಿಕಾರ ಬಳಸಿಕೊಂಡು ಸುಗ್ರೀವಾಜ್ಞೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.

ಕಾನೂನು ಇಲಾಖೆ ಸಿದ್ಧಪಡಿಸಿರುವ ಸಮರ್ಥನೆ:

1. ನೋಂದಾಯಿತವಲ್ಲದ ಮತ್ತು ಸಾಲ ನೀಡಲು ಪರವಾನಗಿ ಹೊಂದಿಲ್ಲದ ಯಾವುದೇ ವ್ಯಕ್ತಿ ಯಾರಿಗೂ ಸಾಲ ಕೊಡಲು, ಹೆಚ್ಚಿನ ಬಡ್ಡಿ, ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಿನಡಿ ಅಧಿಕಾರ ಹೊಂದಿಲ್ಲ. ಹೀಗಾಗಿ ಕಾನೂನು ಬಾಹಿರವಾಗಿ ಸಾಲ ನೀಡಿದವರು ತಮ್ಮ ಪ್ರಕರಣವನ್ನು ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲು ಸಹ ಅವಕಾಶವಿಲ್ಲ. ಹಾಗಂತ ನೈಜ, ಕಾನೂನು ಬದ್ಧವಾಗಿ ಸಾಲ ನೀಡಿದವರು ತಮ್ಮ ಸಾಲ ವಸೂಲಿ ಮಾಡಬಾರದೆಂದು ಸುಗ್ರೀವಾಜ್ಞೆ ಹೇಳಲ್ಲ. 2. 3 ಲಕ್ಷ ರು. ಸಾಲಕ್ಕೆ 5 ಲಕ್ಷ ದಂಡ ಎಂಬ ರಾಜ್ಯಪಾಲರ ಆಕ್ಷೇಪ ಸರಿಯಲ್ಲ. ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ದಂಡನೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ, ಒತ್ತಡ ತಂತ್ರ, ಹಿಂಸೆ ನೀಡುವ ಮೂಲಕ ವಸೂಲಾತಿಗೆ ಮುಂದಾದ ಕ್ರಮಕ್ಕೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ. ಹೀಗಾಗಿ ಇದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಲ್ಲ. 3. ಕಿರು ಸಾಲ ನೀಡುವ ಸಂಸ್ಥೆಗಳು ಯಾವುದೇ ಭದ್ರತೆಯನ್ನು (ಅಡಮಾನ) ಪಡೆಯದೇ ಸಾಲ ನೀಡಬೇಕು ಎಂಬುದನ್ನು ಆರ್‌ಬಿಐ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಭದ್ರತೆ ಪಡೆಯದೆ ಕಿರು ಸಾಲ ನೀಡಬೇಕು. ಒಂದು ವೇಳೆ ಅಕ್ರಮವಾಗಿ ಭದ್ರತೆ ಪಡೆದಿದ್ದರೆ ಅಂತಹ ಭದ್ರತೆಗಳನ್ನು ವಾಪಸು ನೀಡುವುದು ಕಿರು ಸಾಲ ನೀಡುವ ಸಂಸ್ಥೆಯ ಕರ್ತವ್ಯ.

4. ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಬಂಧನೆಗಳು ಅನ್ವಯವಾಗುವ ನೋಂದಾಯಿತ ಸಂಸ್ಥೆಗಳನ್ನು ಸುಗ್ರೀವಾಜ್ಞೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಕಾನೂನು ಪ್ರಕಾರ ಸೂಕ್ತ. ಸಾಲ ವಸೂಲಿ ಹೆಸರಿನಲ್ಲಿನ ಕಿರುಕುಳ ತಡೆಯಲು ಈಗ ಇರುವ ಕಾಯ್ದೆಗಳಲ್ಲಿ ಗಂಭೀರ ಹಾಗೂ ಪರಿಣಾಮಕಾರಿ ನಿಯಂತ್ರಣ ಅಸ್ತ್ರ ಇಲ್ಲ. ಹೀಗಾಗಿ ಸುಗ್ರೀವಾಜ್ಞೆ ಅನಿವಾರ್ಯ.

5. ಸರ್ಕಾರವು ಲಭ್ಯವಿರುವ ಎಲ್ಲಾ ಸ್ತರದಲ್ಲಿ ಸಮಾಲೋಚನೆ ನಡೆಸಿ ಈ ಸುಗ್ರೀವಾಜ್ಞೆ ಕರಡನ್ನು ಸಿದ್ಧಪಡಿಸಿದೆ. ಇದು ಸಮಾಜದಲ್ಲಿ ಯಾವುದೇ ಗೊಂದಲ ಉಂಟು ಮಾಡಲ್ಲ. ಜತೆಗೆ ನಿರ್ಲಕ್ಷಿತ ವರ್ಗಗಳ ಹಣಕಾಸು ಅಭಿವೃದ್ಧಿಗೆ ಅಡ್ಡಿಯಾಗಲ್ಲ.

6. ಈ ಮಸೂದೆಯನ್ನು ವಿಧಾನಮಂಡಲದಲ್ಲಿ ಸಹಜವಾಗಿಯೇ ಮಂಡಿಸಲಾಗುತ್ತದೆ. ಆ ವೇಳೆ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆ ಮೂಲಕ ಜನರ ನೆರವಿಗೆ ಬರುವ ಸಲುವಾಗಿ ಸರ್ಕಾರ ತನ್ನ ಪರಮಾಧಿಕಾರ ಬಳಸಿಕೊಂಡು ಈ ಸುಗ್ರೀವಾಜ್ಞೆ ಜಾರಿ ಮಾಡಿರುವುದನ್ನು ತಮ್ಮ (ರಾಜ್ಯಪಾಲರ) ಗಮನಕ್ಕೆ ತರಲಾಗುತ್ತಿದೆ.

- ರಾಜ್ಯಪಾಲರು ಎತ್ತಿದ ಆರೂ ಆಕ್ಷೇಪಕ್ಕೂ ಉತ್ತರ- ಕಾನೂನು ಇಲಾಖೆಯಿಂದ ಸಿಎಂ ಕಚೇರಿಗೆ ರವಾನೆ

1. ನೋಂದಾಯಿತವಲ್ಲದ, ಪರವಾನಗಿ ಹೊಂದಿಲ್ಲದ ಯಾವುದೇ ವ್ಯಕ್ತಿ ಯಾರಿಗೂ ಸಾಲ ಕೊಡಲು ದಂಡ ವಿಧಿಸಲು ಅಧಿಕಾರವಿಲ್ಲ 2. ಸಾಲದ ಮೊತ್ತ ಪರಿಗಣಿಸಿ ದಂಡ ವಿಧಿಸಿಲ್ಲ. ವಸೂಲಿಗೆ ನೀಡುವ ಕಿರುಕುಳ, ಹಿಂಸೆ ಮತ್ತಿತರೆ ಕ್ರಮ ಗಮನಿಸಿ ದಂಡ ಹೇರಲಾಗಿದೆ3. ಕಿರು ಸಾಲ ನೀಡುವ ಸಂಸ್ಥೆಗಳು ಯಾವುದೇ ಭದ್ರತೆ ಪಡೆಯದೆ ಸಾಲ ನೀಡಬೇಕು ಎಂದು ಆರ್‌ಬಿಐ ನಿಯಮಗಳಲ್ಲೇ ಹೇಳಲಾಗಿದೆ4. ಸಾಲ ವಸೂಲಿ ಹೆಸರಿನಲ್ಲಿನ ಕಿರುಕುಳ ತಡೆಯಲು ಈಗ ಇರುವ ಕಾಯ್ದೆಗಳಲ್ಲಿ ಗಂಭೀರ ಹಾಗೂ ಪರಿಣಾಮಕಾರಿ ನಿಯಂತ್ರಣ ಅಸ್ತ್ರ ಇಲ್ಲ5. ಸರ್ಕಾರವು ಲಭ್ಯವಿರುವ ಎಲ್ಲಾ ಸ್ತರದಲ್ಲಿ ಸಮಾಲೋಚನೆ ನಡೆಸಿ ಸುಗ್ರೀವಾಜ್ಞೆ ಸಿದ್ಧಪಡಿಸಿದೆ. ಯಾವುದೇ ಗೊಂದಲ ಉಂಟು ಮಾಡಲ್ಲ6. ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆ ಮೂಲಕ ಜನರ ನೆರವಿಗೆ ಬರುವ ಸಲುವಾಗಿ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದೆ