ಕಟೀಲು ಮೇಳ ಯಕ್ಷಗಾನ ಇಡೀ ಪ್ರದರ್ಶನ ಪ್ರಸ್ತಾಪ: ಕೋರ್ಟ್‌ಗಳ ಆದೇಶ ಕಟ್ಟುನಿಟ್ಟು ಪಾಲಿಸಿ ಎಂದ ಡಿಸಿ

| Published : Jan 12 2024, 01:45 AM IST

ಕಟೀಲು ಮೇಳ ಯಕ್ಷಗಾನ ಇಡೀ ಪ್ರದರ್ಶನ ಪ್ರಸ್ತಾಪ: ಕೋರ್ಟ್‌ಗಳ ಆದೇಶ ಕಟ್ಟುನಿಟ್ಟು ಪಾಲಿಸಿ ಎಂದ ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳು ಸಿದ್ಧತೆ ನಡೆಸುತ್ತಿರುವಂತೆಯೇ ರಾಜ್ಯ ಹೈಕೋರ್ಟ್‌ ಆದೇಶದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಲಮಿತಿಯಿಂದ ಮರಳಿ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳು ಸಿದ್ಧತೆ ನಡೆಸುತ್ತಿರುವಂತೆಯೇ ಯಕ್ಷಗಾನ ಪ್ರದರ್ಶನ ವೇಳೆ ಶಬ್ದಮಾಲಿನ್ಯ ನಿಯಮಾವಳಿ, ರಾಜ್ಯ ಹೈಕೋರ್ಟ್‌ ಆದೇಶದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಎಲ್ಲ ನಿಯಮಗಳನ್ನು ಪಾಲಿಸುವುದು ಹಾಗೂ ಪಾಲಿಸುವಂತೆ ನೋಡಿಕೊಳ್ಳುವುದು ದೇವಸ್ಥಾನ ಆಡಳಿತ ಮಂಡಳಿಯ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಜಿಲ್ಲಾಧಿಕಾರಿ 15-11-2022ರ ಆದೇಶದಲ್ಲಿ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ರಾತ್ರಿ 10 ಗಂಟೆಯಿಂದ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಅದೇಶವನ್ನು ಪ್ರಶ್ನಿಸಿ ಕೃಷ್ಣಕುಮಾರ್‌ ಎಂಬವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆ ಕುರಿತ ಹೈಕೋರ್ಟ್‌ನ 28-11-2023ರ ಆದೇಶದಲ್ಲಿ ಯಕ್ಷಗಾನ ಮೇಳದ ಪ್ರದರ್ಶನ ಅವಧಿ ಬಗ್ಗೆ ಅರ್ಜಿದಾರರು ಸೂಕ್ತ ಪ್ರಸ್ತಾವನೆ ಕಳುಹಿಸಿ ಜಿಲ್ಲಾಧಿಕಾರಿಯಿಂದ ಅಗತ್ಯ ಕ್ರಮ ವಹಿಸಬೇಕು ಎಂದು ಆದೇಶಿಸಿದ್ದರೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಅಲ್ಲದೆ ಕೋವಿಡ್‌ 19ರ ನಿರ್ದಿಷ್ಟ ನಿಬಂಧನೆ ಅಥವಾ ಕೋವಿಡ್‌ 19ರ ಪೂರ್ವ ಪದ್ಧತಿ ಯಾವುದು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ಡಿಸಿ ಕಟ್ಟುನಿಟ್ಟು ಆದೇಶ: ಜ.14ರಿಂದ ಕಾಲಮಿತಿ ಕೈ ಬಿಟ್ಟು ಇಡೀ ರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನ ನೀಡಲಾಗುವುದು ಎಂದು ಕಟೀಲು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೆ ನೀಡಿತ್ತು. ಇದು ಕಾಲಮಿತಿಗೆ ಹೊಂದಿಕೊಂಡ ಸೇವಾಕರ್ತರಿಗೆ ಹಾಗೂ ಕೆಲವು ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿತ್ತು. ಏಕಾಏಕಿ ಕಾಲಮಿತಿಯನ್ನು ಬದಲಾಯಿಸಿ ಇಡೀ ರಾತ್ರಿಗೆ ಯಕ್ಷಗಾನ ಪ್ರದರ್ಶನ ವಿಸ್ತರಿಸಿದ್ದನ್ನು ಕೆಲವು ಮಂದಿ ಸೇವಾಕರ್ತರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು.

ಅಲ್ಲದೆ ಕಟೀಲು ದೇವಸ್ಥಾನದಿಂದಲೂ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ನಿರ್ಧರಿಸಿರುವುದನ್ನು ಜಿಲ್ಲಾಡಳಿತಕ್ಕೆ ಗಮನಕ್ಕೆ ತರಲಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಸುಪ್ರೀಂ ಕೋರ್ಟ್‌ ನಿಯಮ ಹಾಗೂ ಹೈಕೋರ್ಟ್‌ ಸೂಚನೆಯನ್ನು ಕಟ್ಟುನಿಟ್ಟು ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಇಡೀ ರಾತ್ರಿ ಪ್ರದರ್ಶನಕ್ಕೆ ತೊಂದರೆ ಏನು?: ಸುಪ್ರೀಂ ಕೋರ್ಚ್‌ ಆದೇಶದನ್ವಯ ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಆದರೆ ಈ ಹಿಂದೆ ಜಿಲ್ಲಾ​ಧಿಕಾರಿಗಳ 15.11.2022ರ ಆದೇಶದಲ್ಲಿ ಕಟೀಲು ಮೇಳದ ಹರಕೆಯ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಭಕ್ತಾಭಿಮಾನಿಗಳ ಭಾವನೆಗಳಿಗೆ ಕುಂದುಂಟಾಗದಂತೆ ರಾತ್ರಿ 10 ಗಂಟೆಯಿಂದ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಅದೇಶವನ್ನು ಪ್ರಶ್ನಿಸಿ ಕೆಲವು ವರ್ಷದ ಮೊದಲು ಇದ್ದಂತೆಯೇ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಕೃಷ್ಣ ಕುಮಾರ್‌ ಎಂಬವರು ಅರ್ಜಿ ಹಾಕಿದ್ದರು. ಕೊರೋನಾ ಪೂರ್ವದಲ್ಲಿ ಇದ್ದಂತೆಯೇ ರಾತ್ರಿ 9 ರಿಂದ ತೊಡಗಿ ಬೆಳಗ್ಗಿನವರೆಗೂ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶಕೊಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಬಗ್ಗೆ ಹೈಕೋರ್ಟ್‌ ಕೂಡ ಅರ್ಜಿದಾರರಿಗೆ, ಕೊರೊನಾಕ್ಕೆ ಮೊದಲಿನಂತೆಯೇ ಯಕ್ಷಗಾನ ಪ್ರದರ್ಶಿಸಬಹುದು. ಆದರೆ ಶಬ್ದ ಮಾಲಿನ್ಯ ನಿಯಮಾವಳಿ-2000 ಅನ್ನು ಉಲ್ಲಂಘಿಸದಂತೆ ಗಮನಹರಿಸಬೇಕು ಎಂಬ ಷರತ್ತು ವಿಧಿಸಿತ್ತು. ಅರ್ಜಿ ದಾರರು ಸೂಕ್ತ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು, ಜಿಲ್ಲಾಧಿಕಾರಿ ಈ ಆದೇಶದಲ್ಲಿರುವ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದೂ ಆದೇಶಿಸಿತ್ತು.

ದೇವಸ್ಥಾನದ ಏಕಪಕ್ಷೀಯ ನಿರ್ಣಯ ಉಲ್ಲೇಖ: ಆದರೆ ಹೈಕೋರ್ಟ್‌ ಆದೇಶದಲ್ಲಿರುವಂತೆ ಅರ್ಜಿದಾರರು ತಮಗೆ ಯಾವುದೇ ಮನವಿ ಸಲ್ಲಿಸಿಲ್ಲ. ಬದಲಿಗೆ ದೇವಳದ ಆಡಳಿತ ಸಮಿತಿಯವರು ಏಕಪಕ್ಷೀಯ ನಿರ್ಣಯ ಕೈಗೊಂಡು ಕೋವಿಡ್‌ 19ರ ಸಂದರ್ಭದ ನಿಬಂಧನೆಗಳಿಗೆ ಒಳಪಟ್ಟು ಮೇಳಗಳನ್ನು ನಡೆಸುವುದಾಗಿ ಕಚೇರಿಗೆ ಪತ್ರ ಸಲ್ಲಿಸಿದ್ದಾರೆ. 15.12.2022ಲ್ಲಿ ಕೋವಿಡ್‌-19ರ ನಿರ್ದಿಷ್ಟ ನಿಬಂಧನೆಗಳು, ಅಥವಾ ಕೋವಿಡ್‌ ಪೂರ್ವ ಪದ್ಧತಿ ಯಾವುದೆಂದು ಉಲ್ಲೇಖವಿಲ್ಲ ಎಂದು ಡಿಸಿ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ.

ಇಡೀ ರಾತ್ರಿ ಪ್ರದರ್ಶನ ಸಾಧ್ಯವೇ? : ಈ ಹಿಂದಿನಂತೆ ಇಡೀ ರಾತ್ರಿ ಯಕ್ಷಗಾನ ನಡೆಸುವುದಕ್ಕೆ ತೊಂದರೆ ಏನೂ ಇಲ್ಲ. ಆದರೆ ಸುಪ್ರೀಂ ಕೋರ್ಟ್‌ ಆದೇಶದಂತೆ ರಾತ್ರಿ 10ರ ನಂತರ ಶಬ್ದಮಾಲಿನ್ಯ ಇರಬಾರದು. ಶಬ್ದ ಮಾಲಿನ್ಯವೆಂದರೆ ಅದನ್ನು ಡೆಸಿಬೆಲ್‌ ಲೆಕ್ಕದಲ್ಲಿ ಅಳೆಯುವಂಥದ್ದು. ಸಾಮಾನ್ಯವಾಗಿ 50 ಡೆಸಿಬೆಲ್‌ ಮೀರಬಾರದು ಎಂಬ ನಿಯಮವಿದೆ. ಆದರೆ ಧ್ವನಿವರ್ಧಕ 400 ಡೆಸಿಬೆಲ್‌ ಮೀರುತ್ತದೆ. ಮಾತನಾಡುವ ಧ್ವನಿಯೇ 50 ಡೆಸಿಬಲ್‌ ಇರುತ್ತದೆ. ಚೆಂಡೆಯ ಪೆಟ್ಟು 200 ಡಿಬಿ ಇರುತ್ತದೆ. ಹಾಗಿರುವಾಗ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ಎಷ್ಟರ ಮಟ್ಟಿಗೆ ಸಾಧ್ಯವೇ ಎಂಬ ಜಿಜ್ಞಾಸೆಯಿದೆ. ಯಕ್ಷಗಾನ ತಡರಾತ್ರಿ ಪ್ರದರ್ಶನದ ವೇಳೆ ಧ್ವನಿ ವರ್ಧಕವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವಂತೆ ತಿಳಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದರೂ, ವಾಸ್ತವವಾಗಿ ಇದು ಎಷ್ಟರ ಮಟ್ಟಿಗೆ ಕಾರ್ಯಸಾಧ್ಯ ಎಂದು ಕಾದು ನೋಡಬೇಕಿದೆ.