ಸಾರಾಂಶ
೨ ಮೀಟರ್ ವ್ಯಾಪ್ತಿಯ ಮಣ್ಣು ಕೆಳಗಿನ ರಸ್ತೆಗೆ ಬೀಳದಂತೆ ಎತ್ತರದ ತಡೆಗೋಡೆ ನಿರ್ಮಿಸಿದ್ದು, ಈ ತಡೆಗೋಡೆಗೆ ಹೆಚ್ಚಿನ ಒತ್ತಡ ಸಿಗುವುದಿಲ್ಲ. ಈ ಕಾರಣಕ್ಕೆ ಅದು ಕುಸಿಯುವ ಭೀತಿ ಇರುವುದಿಲ್ಲವೆಂದು ವಿವರಿಸಿದರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಶಾಲಾ ರಸ್ತೆಯ ಪಾರ್ಶ್ವದಲ್ಲಿ ನಿರ್ಮಿಸಲಾದ 18 ಅಡಿಗಿಂತಲೂ ಹೆಚ್ಚು ಎತ್ತರದ ತಡೆಗೋಡೆಯ ಅಪಾಯಕಾರಿ ಸ್ಥಿತಿಯ ಬಗ್ಗೆ ಮೂಡಿದ್ದ ಸಾರ್ವಜನಿಕ ಕಳವಳದ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿಯ ಪ್ರಾಜೆಕ್ಟ್ ಮೆನೇಜರ್ ಮಹೇಂದ್ರ ಸಿಂಗ್ ಗುರುವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿದರು. ಕಾಮಗಾರಿಯು ಅತ್ಯಂತ ಗುಣಮಟ್ಟದಿಂದ ನಡೆಯುತ್ತಿದೆ. ತಡೆಗೋಡೆ ಮುರಿದು ಬೀಳುವ ಯಾವುದೇ ಭೀತಿ ಪಡಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.ಹೆದ್ದಾರಿ ಪಾರ್ಶ್ವದ ತಡೆಗೋಡೆ ಈ ಹಿಂದಿನ ಪ್ರಕರಣಗಳಲ್ಲಿ ಸಂಭವಿಸಿದಂತೆ ಕುಸಿದು ಬಿದ್ದರೆ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳ ಸಹಿತ ನಾಗರಿಕ ಜೀವ ಹಾನಿಯ ಭೀತಿಯು ನಾಗರಿಕ ವಲಯದಲ್ಲಿ ವ್ಯಕ್ತವಾಗಿದ್ದು , ಅದರ ಆಧಾರದಲ್ಲಿ ‘ಕನ್ನಡಪ್ರಭ’ ಆ.13ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬಂದ ದಿನವೇ ಆಗಮಿಸಿದ ಮಹೇಂದ್ರ ಸಿಂಗ್, ಈ ಪಾರ್ಶ್ವದಲ್ಲಿ ಎರಡು ಹಂತದ ತಡೆಗೋಡೆಯಿದ್ದು, ಮೊದಲ ಹಂತದ ತಡೆಗೋಡೆಯು ಮಣ್ಣಿನ ಒತ್ತಡವನ್ನು ನಿಭಾಯಿಸುತ್ತದೆ. ಅದರ ಬಳಿಕದ ೨ ಮೀಟರ್ ವ್ಯಾಪ್ತಿಯ ಮಣ್ಣು ಕೆಳಗಿನ ರಸ್ತೆಗೆ ಬೀಳದಂತೆ ಎತ್ತರದ ತಡೆಗೋಡೆ ನಿರ್ಮಿಸಿದ್ದು, ಈ ತಡೆಗೋಡೆಗೆ ಹೆಚ್ಚಿನ ಒತ್ತಡ ಸಿಗುವುದಿಲ್ಲ. ಈ ಕಾರಣಕ್ಕೆ ಅದು ಕುಸಿಯುವ ಭೀತಿ ಇರುವುದಿಲ್ಲವೆಂದು ವಿವರಿಸಿದರು.
ಹೆದ್ದಾರಿಯ ಇನ್ನೊಂದು ಪಾರ್ಶ್ವದ ತಡೆಗೋಡೆ ಕಳೆದ ಮಳೆಗಾಲದಲ್ಲಿ ಬಿದ್ದಿರುವ ಬಗ್ಗೆ ಮೂಡಿರುವ ಸಂದೇಹಕ್ಕೆ ಉತ್ತರಿಸಿದ ಅವರು, ಆ ಭಾಗದ ತಡೆಗೋಡೆ ನಿರ್ಮಿಸುವಾಗ ಅಲ್ಲಿನ ರಾಜಕಾಲುವೆಯ ಬಗ್ಗೆ ಗಮನಿಸಿರಲಿಲ್ಲ. ತಡೆಗೋಡೆ ನಿರ್ಮಿಸಿದ ಬಳಿಕ ರಾಜಕಾಲುವೆಯನ್ನು ಆಳಗೊಳಿಸಿ ಅಗಲೀಕರಣ ಮಾಡಿರುವುದರಿಂದ ಮಣ್ಣು ದುರ್ಬಲವಾಗಿ ಅದು ಕಳೆದ ಮಳೆಗಾಲದಲ್ಲಿ ಬುಡದಿಂದಲೇ ಬೀಳುವಂತಾಯಿತು. ಕಾಮಗಾರಿ ಬಗ್ಗೆ ಮುಂದಿನ ಹತ್ತು ವರ್ಷಗಳಾವಧಿಯ ನಿರ್ವಹಣೆಯ ಹೊಣೆಯು ಗುತ್ತಿಗೆದಾರ ಸಂಸ್ಥೆಗೆ ಇದ್ದು, ಅನಪೇಕ್ಷಿತ ನಷ್ಟ ತಪ್ಪಿಸುವ ಸಲುವಾಗಿ ಸಹಜವಾಗಿಯೇ ಗುಣಮಟ್ಟದೊಂದಿಗೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.ಸಂಸ್ಥೆಯ ಕಿರಿಯ ಇಂಜಿನಿಯರ್ ಜಿತೇಂದ್ರ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸಾಮಾಜಿಕ ಕಾರ್ಯಕರ್ತ ನಾಗೇಶ್ ಪ್ರಭು ಇದ್ದರು.