ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಬೇಡ, ‘ಮೈಷುಗರ್‌ಗೆ ಆಧುನಿಕ ಸ್ಪರ್ಶ ಕೊಡಿ’

| Published : Jul 12 2024, 01:40 AM IST / Updated: Jul 12 2024, 12:13 PM IST

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಬೇಡ, ‘ಮೈಷುಗರ್‌ಗೆ ಆಧುನಿಕ ಸ್ಪರ್ಶ ಕೊಡಿ’
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಸಕ್ಕರೆ ಕಾರ್ಖಾನೆಗೆ ಆಧುನಿಕ ಸ್ಪರ್ಶ ಕೊಡಿ. ಹೊಸ ಕಾರ್ಖಾನೆ ಪ್ರಸ್ತಾಪವನ್ನು ಕೈಬಿಡುವಂತೆ ರೈತ ಪ್ರತಿನಿಧಿಗಳು ಸರ್ವಾನುಮತದಿಂದ ಕೈಗೊಂಡ ನಿರ್ಣಯಕ್ಕೆ ಒಮ್ಮತದ ಬೆಂಬಲ ವ್ಯಕ್ತವಾಯಿತು.

  ಮಂಡ್ಯ :  ಮೈಸೂರು ಸಕ್ಕರೆ ಕಾರ್ಖಾನೆಗೆ ಆಧುನಿಕ ಸ್ಪರ್ಶ ಕೊಡಿ. ಹೊಸ ಕಾರ್ಖಾನೆ ಪ್ರಸ್ತಾಪವನ್ನು ಕೈಬಿಡುವಂತೆ ರೈತ ಪ್ರತಿನಿಧಿಗಳು ಸರ್ವಾನುಮತದಿಂದ ಕೈಗೊಂಡ ನಿರ್ಣಯಕ್ಕೆ ಒಮ್ಮತದ ಬೆಂಬಲ ವ್ಯಕ್ತವಾಯಿತು.

ಮೈಷುಗರ್ ಅತಿಥಿಗೃಹದಲ್ಲಿ ಗುರುವಾರ ಹೊಸ ಕಾರ್ಖಾನೆ ಕುರಿತಂತೆ ಪಕ್ಷಾತೀತವಾಗಿ ಕರೆಯಲಾಗಿದ್ದ ರೈತ ಪ್ರತಿನಿಧಿಗಳ ಸಭೆಯಲ್ಲಿ ವಿವಿಧ ರೈತ ಪ್ರತಿನಿಧಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಬಿ-ಮಿಲ್ ಆಧುನೀಕರಣ:

ಈಗಿರುವ ಸ್ಥಳದಲ್ಲೇ ಕಾರ್ಖಾನೆಗೆ ಆಧುನಿಕ ಸ್ಪರ್ಶ ಕೊಡಿ. ಬೇರೆಲ್ಲೋ ಹೊಸ ಕಾರ್ಖಾನೆ ಮಾಡುವುದಾದರೆ ಅದಕ್ಕೆ ನಮ್ಮ ವಿರೋಧವಿದೆ. ಈಗಿರುವ ಕಾರ್ಖಾನೆ ಸುಸ್ಥಿತಿಯಲ್ಲಿರುವುದಾಗಿ ತಾಂತ್ರಿಕ ತಜ್ಞರೇ ವರದಿ ನೀಡಿದ್ದಾರೆ. ಕಾರ್ಖಾನೆಯ ಎ-ಮಿಲ್ ನಿತ್ಯ ೫ ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಬಿ-ಮಿಲ್‌ನ್ನು ಹೊಸ ತಂತ್ರಜ್ಞಾನದಡಿ ಆಧುನೀಕರಣಗೊಳಿಸಿ ಅಳವಡಿಸಿದರೆ ಕಬ್ಬು ಅರೆಯುವ ಸಾಮರ್ಥ್ಯ ೧೦ ಸಾವಿರ ಟನ್‌ಗೆ ಹೆಚ್ಚಾಗಲಿದೆ ಎಂದು ರೈತ ಮುಖಂಡರು ಸಭೆಯ ಗಮನಕ್ಕೆ ತಂದರು.

ಸುಸ್ಥಿತಿಯಲ್ಲಿ ಕಾರ್ಖಾನೆ:

ಡಿಸ್ಟಿಲರಿ ಘಟಕ, ಎಥೆನಾಲ್ ಘಟಕ ಸೇರಿದಂತೆ ಉಪ ಉತ್ಪನ್ನಗಳ ಘಟಕಗಳ ಸ್ಥಾಪನೆಗೆ ಬೇಕಾದಷ್ಟು ಸ್ಥಳಾವಕಾಶ ಈಗಿರುವ ಸ್ಥಳದಲ್ಲೇ ಇರುವುದರಿಂದ ಹೊಸ ಜಾಗದಲ್ಲಿ ಕಾರ್ಖಾನೆ ಸ್ಥಾಪನೆ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಸಹ ವಿದ್ಯುತ್ ಘಟಕಕ್ಕೂ ಚಾಲನೆ ನೀಡಿರುವುದರಿಂದ ಕಾರ್ಖಾನೆ ಸುಸ್ಥಿತಿಯಲ್ಲಿದ್ದು, ವಿದ್ಯುತ್ ಮಾರಾಟ ಮಾಡುವಷ್ಟು ಶಕ್ತಿ ಹೊಂದಿರುವುದರಿಂದ ಕಾರ್ಖಾನೆಗೆ ಆರ್ಥಿಕವಾಗಿ ಚೇತರಿಕೆ ಕಾಣುವ ಎಲ್ಲಾ ಲಕ್ಷಣಗಳೂ ಇವೆ. ಹೊಸ ಕಾರ್ಖಾನೆಯನ್ನು ಬೇರೆಡೆ ಸ್ಥಾಪಿಸುವುದಾದರೆ ಖರ್ಚುಗಳು ಹೆಚ್ಚಾಗಲಿವೆ. ಆರ್ಥಿಕ ಹೊರೆಯಾಗಲಿದೆ ಎಂಬ ಅಂಶಗಳನ್ನು ಸಭೆಗೆ ತಿಳಿಸಿದರು.

ಕಬ್ಬು ಬೆಳೆಯುವ ಪ್ರದೇಶ ಕ್ಷೀಣ:

ಕಾರ್ಖಾನೆ ವ್ಯಾಪ್ತಿಯೊಳಗೆ ಕಬ್ಬು ಬೆಳೆಯುವ ಪ್ರದೇಶ ದಿನೇ ದಿನೇ ಕಡಿಮೆಯಾಗುತ್ತಿದೆ. ಕಬ್ಬು ಬೆಳೆಗಾರರು ವಾಣಿಜ್ಯ, ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ತೋರಿದ್ದಾರೆ. ಹಲವರು ವಸತಿ ಉದ್ದೇಶಕ್ಕೆ ಜಮೀನುಗಳನ್ನು ಪರಿವರ್ತಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಬ್ಬಿನ ಲಭ್ಯತೆ ಕಡಿಮೆಯಾಗಲಿದೆ. ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸುವ ಬದಲು ಈಗಿರುವ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಬೇಕಿದೆ ಎಂದು ಸಲಹೆ ನೀಡಿದರು.

ಸಾಮರ್ಥ್ಯ ನಿಗದಿಗೆ ಅವಕಾಶ:

ಇದಕ್ಕೆ ಕಾರ್ಖಾನೆಯ ತಾಂತ್ರಿಕ ಅಧಿಕಾರಿಗಳು ಈಗಿರುವ ತಂತ್ರಜ್ಞಾನದಲ್ಲಿ ೧ ಸಾವಿರ ಟನ್ ಸಾಮರ್ಥ್ಯದಿಂದ ೧೦ ಸಾವಿರ ಟನ್ ಸಾಮರ್ಥ್ಯದವರೆಗೆ ನಿಗದಿಪಡಿಸಿಕೊಂಡು ಕಬ್ಬು ಅರೆಯುವುದಕ್ಕೆ ಸಾಧ್ಯವಿದೆ. ಇಂತಿಷ್ಟೇ ಕಬ್ಬು ಅರೆಯಬೇಕೆಂಬ ನಿಗದಿ ಏನಿಲ್ಲ. ಕಾರ್ಖಾನೆಗೆ ಕಬ್ಬು ಎಷ್ಟು ಬರುತ್ತದೋ ಅದನ್ನು ನೋಡಿಕೊಂಡು ಅರೆಯಬಹುದು ಎಂದರು.

ಹೊಸ ಕಾರ್ಖಾನೆಗೆ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಸರ್ಕಾರವೇ ನೀಡುತ್ತಿರುವುದೋ ಅಥವಾ ಕಾರ್ಖಾನೆಯ ಆಸ್ತಿಯನ್ನು ಅಡಮಾನ ಮಾಡುವ ಯೋಚನೆಯಿಂದ ಘೋಷಿಸಿರುವ ಅನುದಾನವೋ ಎಂಬ ಬಗ್ಗೆ ಕೇಳಿದಾಗ, ಅದು ಸಂಪೂರ್ಣವಾಗಿ ಸರ್ಕಾರ ನೀಡುವ ಅನುದಾನವೇ ಆಗಿದೆ. ಕಾರ್ಖಾನೆಯನ್ನು ಅಡಮಾನ ಮಾಡುವ ಉದ್ದೇಶ, ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಕಾರ್ಖಾನೆಯ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ಸಭೆಯಲ್ಲಿ ರೈತನಾಯಕಿ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಮುದ್ದೇಗೌಡ, ಕೃಷ್ಣಪ್ರಸಾದ್, ಕನ್ನಡಸೇನೆ ಮಂಜುನಾಥ್, ತಾಂತ್ರಿಕ ಅಧಿಕಾರಿ ಅಪ್ಪಾಸಾಹೇಬ್ ಪಾಟೀಲ, ವಿವಿಧ ಸಂಘಟನೆಗಳ ಪದಾಧಿಕಾರಿಗಳಿದ್ದರು.

ಹೊಸ ಕಾರ್ಖಾನೆ ಸ್ಥಾಪನೆ ಸರ್ಕಾರದ ವಿವೇಚನೆಗೆ: ಸಿ.ಡಿ.ಗಂಗಾಧರ್

ಹೊಸ ಕಾರ್ಖಾನೆ ಸ್ಥಾಪಿಸುವ ವಿಚಾರ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು, ಈ ವಿಚಾರವಾಗಿ ತೀರ್ಮಾನ ಕೈಗೊಳ್ಳುವ, ಸ್ಥಳ ಗುರುತಿಸುವ ಅಧಿಕಾರ ನಮ್ಮ ಮುಂದಿಲ್ಲ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಗುರುವಾರ ಮೈಷುಗರ್ ಅತಿಥಿ ಗೃಹದಲ್ಲಿ ರೈತ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿ, ಹೊಸ ಸಕ್ಕರೆ ಕಾರ್ಖಾನೆ ವಿಚಾರ ಶಾಸಕರು, ಸಚಿವರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಹಂತದಲ್ಲಿ ಚರ್ಚೆಯಾಗಿ ಅಂತಿಮವಾಗಿ ಕ್ಯಾಬಿನೇಟ್‌ಗೆ ಬರಲಿದೆ. ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದರು.

ನಿಮ್ಮ ಅಭಿಪ್ರಾಯಗಳು, ಸಲಹೆ, ಸೂಚನೆಗಳನ್ನೆಲ್ಲಾ ಪಡೆದುಕೊಂಡಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಜು.28 ರೊಳಗೆ ಕಬ್ಬು ಅರೆಯುವಿಕೆ:

ಮೈಷುಗರ್ ಕಾರ್ಖಾನೆಯಲ್ಲಿ ೨೦೨೪-೨೫ನೇ ಸಾಲಿನ ಕಬ್ಬು ಅರೆಯುವಿಕೆ ಕಾರ್ಯವನ್ನು ಜು.೨೮ರೊಳಗೆ ಆರಂಭಿಸಲಾಗುವುದು ಎಂದು ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. ಸಹ ವಿದ್ಯುತ್ ಘಟಕವನ್ನು ಜು.೧೫ರಿಂದಲೇ ಆರಂಭಿಸಲಾಗುವುದು. ನಮ್ಮಲ್ಲಿರುವ ಬಗಾಸ್ ಉಪಯೋಗಿಸಿಕೊಂಡೇ ವಿದ್ಯುತ್ ಘಟಕ ಆರಂಭಿಸಲಿದ್ದೇವೆ. ಕಳೆದ ಸಾಲಿನಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದೇವೆ. ಘಟಕ ಆರಂಭಕ್ಕೆ ಬಗಾಸ್ ಕೊರತೆ ಇಲ್ಲ. ಕಾರ್ಖಾನೆಯನ್ನು ಜು.೨೨ರಿಂದ ೨೮ರೊಳಗೆ ಆರಂಭಿಸಲಾಗುವುದು ಎಂದರು.

ಡಾ.ಎಚ್.ಎಲ್.ನಾಗರಾಜು ಮೈಷುಗರ್ ನೂತನ ಎಂಡಿ:

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರನ್ನು ಮೈಷುಗರ್ ಕಾರ್ಖಾನೆಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಾಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ಆರ್.ರವಿಕುಮಾರ್ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿದೆ. ಡಾ.ಎಚ್.ಎಲ್.ನಾಗರಾಜು ಅವರು ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.