ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಶಿಥಿಲಾವಸ್ಥೆಯಲ್ಲಿರುವ ಮಳಿಗೆಗಳನ್ನು ಗಮನಿಸುವವರೇ ಇಲ್ಲ!. ಏನಾದರೂ ಹೆಚ್ಚು ಕಡಿಮೆಯಾದರೆ ಸಾವು- ನೋವು ಖಚಿತ. - ಹೌದು, ಇಲ್ಲಿನ ಊಟಿ ರಸ್ತೆಯಲ್ಲಿರುವ ಮಳಿಗೆಗಳ ಕಥೆ ಇದು.ನಂಜನಗೂಡಿನಲ್ಲಿ ಸುಮಾರು 1965 ರಲ್ಲಿ ಎಂ. ಕೃಷ್ಣಯ್ಯ ಹಾಗೂ ಪಿ. ವೆಂಕಟರಮಣ ಅವರ ಸತತ ಪ್ರಯತ್ನದಿಂದ ಊಟಿ ರಸ್ತೆಯಲ್ಲಿ ಗೃಹ ಮಂಡಳಿ ಬಡಾವಣೆಯು ಮೂರ್ತ ರೂಪು ಪಡೆಯಿತು. ಇಂದು ಆ ಬಡಾವಣೆಗೆ ಹೊಂದಿಕೊಂಡಂತೆ ಸುಮಾರು 15 ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳೂ ಸೇರಿ ಸುಮಾರು 1300 ಕ್ಕೂ ಹೆಚ್ಚು ಮನೆಗಳು ಇವೆ. ಇವೆಲ್ಲಕ್ಕೂ ಸಂಪರ್ಕ ಕಲ್ಪಿಸಲು ಇರುವ ಮುಖ್ಯ ರಸ್ತೆಯಲ್ಲಿ ಈ 6 ಅಂಗಡಿಗಳ ಸಮುಚ್ಚಯವನ್ನು 1971 ರಲ್ಲಿ ನಿರ್ಮಿಸಲಾಗಿದೆ.
ಕಳೆದ 10 ವರ್ಷಗಳಿಂದ ಈ ಅಂಗಡಿಯನ್ನು ಯಾರೂ ಕೂಡ ಬಾಗಿಲು ತೆಗೆಯುವ ಧೈರ್ಯ ಮಾಡಿಲ್ಲ.12 ಅಡಿಯ ಅಗಲ ಹಾಗೂ 16 ಅಡಿ ಉದ್ದ ಇರುವ ಈ ಮಳಿಗೆಗಳ ಮಾಲೀಕರಿಗೆ ಅಂಗಡಿ ತೆರೆದರೆ ಮೇಲಿಂದ ಯಾವಾಗ ಸೂರು ಕೆಳಗೆ ಬೀಳುತ್ತದೋ ಗೊತ್ತಿಲ್ಲ. ತುಕ್ಕು ಹಿಡಿದಿರುವ ಕಬ್ಬಿಣದ ಶೆಟರ್‌ಗಳನ್ನು ತೆರೆಯಲು ಸಾಧ್ಯವಾ ಅದೂ ಗೊತ್ತಿಲ್ಲ. ಮಳಿಗೆಗಳ ಹಿಂದೆ 15 ಅಡಿ ಎತ್ತರಕ್ಕೂ ಬೆಳೆದಿರುವ ಅರಳಿ ಮರ ಯಾವಾಗ ತಾರಸಿಯನ್ನು ಸೀಳುತ್ತದೋ ಗೊತ್ತಿಲ್ಲ. ಅದರ ಪಕ್ಕದಲ್ಲೇ ಇನ್ನೊಂದು ಅರಳಿ ಮರ ಕೆಳಕ್ಕೆ ಬೇರು ಬಿಟ್ಟಿದೆ. ಅಂಗಡಿಯ ಮುಂಭಾಗದಲ್ಲಿರುವ ಚಜ್ಜಾ ತಾರಸಿಯಿಂದ ಕೆಳಗೆ ಬೀಳಲು ಸಿದ್ಧವಾಗಿದೆ. ಚಜ್ಜಾ ಕೆಳಗಿನ ಸಿಮೆಂಟ್ ಪ್ಲಾಸ್ಟರ್ ಜೀರ್ಣವಾಗಿದೆ.
ಶಾಲಾ ಕಾಲೇಜುಗಳಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಬೆಳಗಿನ ಹೊತ್ತು ಶಾಲಾ ವಾಹನಕ್ಕಾಗಿ ಇಲ್ಲಿಯೇ ಮೆಟ್ಟಿಲ ಮೇಲೆ ಕುಳಿತು ಕೊಳ್ಳುತ್ತಾರೆ. ಸಂಜೆ ಹೊತ್ತು ಶಾಲಾ ವಾಹನದಲ್ಲಿ ಬಂದು ಇಲ್ಲಿ ಇಳಿದು ತಮ್ಮ ಕುಟುಂಬದವರು ಬಂದು ಕರೆದೊಯ್ಯುವವರೆಗೂ ಮೆಟ್ಟಿಲ ಮೇಲೆ ವಿಶ್ರಮಿಸುತ್ತಾರೆ. ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಬಂಧುಗಳು 3 ಶಿಫ್ಟ್‌ಗಳಲ್ಲೂ ಇಲ್ಲಿಂದಲೇ ತಮ್ಮ ಕಂಪನಿಯ ವಾಹನಗಳನ್ನು ಏರುತ್ತಾರೆ ಹಾಗೂ ಇಳಿಯುತ್ತಾರೆ. ಬೆಳಗಿನ ಹೊತ್ತು ಮತ್ತು ಸಂಜೆಯ * ಹೊತ್ತು ವಾಕಿಂಗಿಗೆ ಹೋಗುವ ಬಹಳಷ್ಟು ಮಂದಿಗೆ, ರ ನೌಕರಿಯಿಂದ ನಿವೃತ್ತರಾದವರಿಗೆ ಈ ಮಳಿಗೆಗಳು ಮುಂಭಾಗದಲ್ಲಿ ಇರುವ ಮೆಟ್ಟಿಲುಗಳು ವಿಶ್ರಮಿಸಲು ಉತ್ತಮವಾದ ಸ್ಥಳ.ಆದರೆ ನೆನಪಿಡಿ ಈ ಕಟ್ಟಡ ಯಾವಾಗ ಕುಸಿಯುತ್ತದೋ ಗೊತ್ತಿಲ್ಲ. ನಗರಸಭೆಯು ಹಾಗೂ ಗೃಹಮಂಡಳಿ ಬಡಾವಣೆಯ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಈ ಕಟ್ಟಡವನ್ನು ಕೆಡವಿ ಅದೇ ಗಾದ ಜಾಗದಲ್ಲಿ ಉತ್ತಮವಾದ 2 ಅಂತಸ್ತಿನ ಮಳಿಗೆಗಳನ್ನು ಒಂದೆ ನಿರ್ಮಿಸಿದರೆ ಅವರು ವೆಚ್ಚ ಮಾಡುವ ಹಣವನ್ನು 10 ತಿಂಗಳ ಮುಂಗಡ ಹಣದಲ್ಲೇ ಪಡೆಯಬಹುದು. ಅಲ್ಲದೇ ಪ್ರತಿ ತಿಂಗಳು ಲಕ್ಷ ರುಪಾಯಿಗೂ ಮೇಲೆ ಪ್ರತಿ ತಿಂಗಳು ಬಾಡಿಗೆ ಪಡೆಯಬಹುದು. ಕಟ್ಟಡ ಕೆಡವುವುದು ತಡವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.