ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗದ ಪಕ್ಷೇತರರು!

| Published : Apr 13 2024, 01:05 AM IST

ಸಾರಾಂಶ

ರಾಮನಗರ: ಸಂಸತ್ ಪ್ರವೇಶಿಸುವ ಕನಸು ಹೊತ್ತು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಲೇ ಇದೆ. ಆದರೆ, ಪಕ್ಷೇತರರಾಗಿ ಅಖಾಡಕ್ಕಿಳಿದವರು ಗೆಲುವು ಸಾಧಿಸುವುದಿರಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ರಾಮನಗರ: ಸಂಸತ್ ಪ್ರವೇಶಿಸುವ ಕನಸು ಹೊತ್ತು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರಾಗಿ ಸ್ಪರ್ಧಿಸುವವರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಲೇ ಇದೆ. ಆದರೆ, ಪಕ್ಷೇತರರಾಗಿ ಅಖಾಡಕ್ಕಿಳಿದವರು ಗೆಲುವು ಸಾಧಿಸುವುದಿರಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಸಂಸತ್ ಕ್ಷೇತ್ರದಲ್ಲಿ 11 ಸಾರ್ವತ್ರಿಕ, 1 ಉಪಚುನಾವಣೆ ಹಾಗೂ ಈಗಿನ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಿ 3 ಸಾರ್ವತ್ರಿಕ , 1 ಉಪ ಚುನಾವಣೆಗಳು ನಡೆದಿವೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಬಹುತೇಕ ಪಕ್ಷೇತರರು ಠೇವಣಿ ನಷ್ಟ ಮಾಡಿಕೊಂಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಯು ಚಲಾವಣೆಯಾದ ಮತಗಳಲ್ಲಿ ಮಾನ್ಯಗೊಂಡ ಒಟ್ಟು ಮತಗಳ ಪೈಕಿ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯಬೇಕು. ಅಷ್ಟು ಮತಗಳು ಲಭಿಸದಿದ್ದರೆ ಆ ಅಭ್ಯರ್ಥಿಯ ಠೇವಣಿ ಕಳೆದುಕೊಂಡಂತಾಗುತ್ತದೆ.

1996ರಲ್ಲಿ ದಾಖಲೆ ಎಂಬಂತೆ 19 ಮಂದಿ ಚುನಾವಣಾ ಅಖಾಡದಲ್ಲಿ ಇದ್ದರು. ಇಷ್ಟು ಮಂದಿ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಕನಕಪುರ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಅದೇ ಮೊದಲು. 2014 ಹಾಗೂ 2019ರ ಚುನಾವಣೆಯಂತೆಯೇ 2024ರಲ್ಲಿಯೂ 15 ಮಂದಿ ಕಣದಲ್ಲಿದ್ದಾರೆ.

ಕನಕಪುರ ಸಂಸತ್ ಕ್ಷೇತ್ರಕ್ಕೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಆರು ಮಂದಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. 4,44,344 ಮತದಾರರಲ್ಲಿ ಚಲಾವಣೆಯಾದ 2,81,621 (ಶೇ.63.38)ಮತಗಳ ಪೈಕಿ 2,66,380 ಮತಗಳು ಮಾನ್ಯಗೊಂಡಿದ್ದವು. ಸ್ಪರ್ಧಿಸಿದ್ದ ಆರು ಮಂದಿ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ನ ಎಂ.ವಿ.ರಾಜಶೇಖರನ್ 1,21,394 ಮತ ಪಡೆದು 48196 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಠೇವಣಿ ಉಳಿಸಿಕೊಳ್ಳಲು 44,396 ಮತಗಳನ್ನು ಪಡೆಯಬೇಕಾಗಿತ್ತು. ಪಕ್ಷೇತರ ಎಂ.ಬಿ.ದಾಸ್ 73,198 ಮತ ಪಡೆದು ಠೇವಣಿ ಉಳಿಸಿಕೊಂಡರೆ, ನಾಲ್ವರು ಠೇವಣಿ ನಷ್ಟ ಮಾಡಿಕೊಂಡಿದ್ದರು.

1971 ರಲ್ಲಿ ಚಲಾವಣೆಯಾದ 313659 ಮತಗಳಲ್ಲಿ 305086 ಮತಗಳು ಮಾನ್ಯಗೊಂಡಿದ್ದವು. ಕಾಂಗ್ರೆಸ್ ನ ಸಿ.ಕೆ.ಜಾಫರ್ ಷರೀಫ್ 2,43,987 ಮತ ಪಡೆದು ಸಮೀಪ ಸ್ಪರ್ಧಿ ಎನ್ ಸಿಒ ಅಭ್ಯರ್ಥಿ ಎಂ.ವಿ.ರಾಜಶೇಖರನ್ ಅವರನ್ನು 1,86,519 ಮತಗಳ ಅಂತರದಿಂದ ಪರಾಭಗೊಳಿಸಿದ್ದರು. ಪಕ್ಷೇತರರಾಗಿದ್ದ ಅಬ್ದುಲ್ ರಶೀದ್ ಠೇವಣಿ ಕಳೆದುಕೊಂಡಿದ್ದರು.

1977 ರ ಚುನಾವಣೆಯಲ್ಲಿ 4,18,814 ಮತಗಳಲ್ಲಿ 4,07,458 ಮತಗಳು ಮಾನ್ಯಗೊಂಡಿದ್ದವು. ಕಾಂಗ್ರೆಸ್ ನ ಎಂ.ವಿ.ಚಂದ್ರಶೇಖರ ಮೂರ್ತಿ 1,92,111 ಮತ ಪಡೆದು ವಿಜೇತರಾದರು. ಬಿಎಲ್ ಡಿ ಅಭ್ಯರ್ಥಿ ಎಂ.ವಿ.ರಾಜಶೇಖರನ್ 1,87,459 ಮತ ಗಳಿಸಿದರು. ಪಕ್ಷೇತರರಾದ ಎಂ.ಶಿವಣ್ಣ, ಸಿ.ಮಹದೇವಸ್ವಾಮಿ ಠೇವಣಿ ನಷ್ಟ ಮಾಡಿಕೊಂಡರು.

1980 ರಲ್ಲಿ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. 4,86,180 ಮತಗಳಲ್ಲಿ 4,72,345 ಮತಗಳು ಮಾನ್ಯಗೊಂಡಿದ್ದವು. ಕಾಂಗ್ರೆಸ್ ನ ಚಂದ್ರಶೇಖರ ಮೂರ್ತಿ (2,52,383)ಪ್ರತಿಸ್ಪರ್ಧಿ ಜನತಾ ಪಕ್ಷದ ಎಂ.ವಿ.ರಾಜಶೇಖರನ್ ಅವರನ್ನು 1,28,504 ಮತಗಳಿಂದ ಪರಾಭಗೊಳಿಸಿದರು. ಉಳಿದ 07 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ತಿರಸ್ಕೃತಗೊಂಡಿದ್ದರು.

1984ರ ಚುನಾವಣೆಯಲ್ಲಿ ಚಲಾವಣೆಯಾದ 6,52,044 ಮತಗಳ ಪೈಕಿ 6,38,720 ಮತಗಳು ಮಾನ್ಯಗೊಂಡಿದ್ದವು. ಕಣದಲ್ಲಿದ್ದ 11 ಅಭ್ಯರ್ಥಿಗಳ ಪೈಕಿ 9 ಮಂದಿ ಠೇವಣಿ ನಷ್ಟ ಅನುಭವಿಸಿ ಮುಜುಗರಕ್ಕೀಡಾಗಿದ್ದರು.

1989ರಲ್ಲಿ ಆರು ಮಂದಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಚಲಾವಣೆಯಾದ 9,23,505 ಮತಗಳ ಪೈಕಿ 8,91,182 ಮತಗಳು ಮಾನ್ಯಗೊಂಡಿದ್ದವು. ಈ ಚುನಾವಣೆಯಲ್ಲಿ ಮೂವರಿಗೆ ಠೇವಣಿ ನಷ್ಟವಾಗಿತ್ತು.

1991ರ ಚುನಾವಣೆಯಲ್ಲಿ 11 ಮಂದಿ ಕಣದಲ್ಲಿದ್ದರು. ಚಲಾವಣೆಯಾದ 8,10,336 ಮತಗಳ ಪೈಕಿ 7,92,837 ಮತಗಳು ಮಾನ್ಯಗೊಂಡಿದ್ದವು. ಠೇವಣಿ ಉಳಿಸಿಕೊಳ್ಳಲು 1,32,139 ಮತಗಳು ಲಭಿಸಬೇಕಾಗಿತ್ತು. ಆದರೆ, 8 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ಕನಕಪುರ ಸಂಸತ್ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 19 ಅಭ್ಯರ್ಥಿ ಸ್ಪರ್ಧೆ ಮಾಡಿದ್ದು 1996ರ ಚುನಾವಣೆಯಲ್ಲಿ ಚಲಾವಣೆಯಾದ 10,66,862 ಮತಗಳ ಪೈಕಿ 10,45,911 ಮತಗಳು ಮಾನ್ಯಗೊಂಡಿತ್ತು.

1,74,318 ಮತಗಳನ್ನು ಪಡೆಯಲಾಗದೆ 16 ಮಂದಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಮುಖಭಂಗ ಅನುಭವಿಸಿದ್ದರು.

1998ರ ಚುನಾವಣೆಯಲ್ಲಿ 12,28,049 ಮತಗಳ ಪೈಕಿ 12,06,041 ಮತಗಳು ಮಾನ್ಯಗೊಂಡಿದ್ದವು. ಸ್ಪರ್ಧಿಸಿದ್ದ 7 ಅಭ್ಯರ್ಥಿಗಳ ಪೈಕಿ 4 ಮಂದಿ ಠೇವಣಿ ನಷ್ಟ ಹೊಂದಿದ್ದರು. 1999ರ ಚುನಾವಣೆಯಲ್ಲಿ 5 ಮಂದಿ ಸ್ಪರ್ಧೆ ಮಾಡಿದ್ದರು. ಚಲಾವಣೆಯಾದ 12,25,773 ಮತಗಳ ಪೈಕಿ 12,33,825 ಮತಗಳು ಮಾನ್ಯಗೊಂಡವು. ಠೇವಣಿ ಉಳಿಸಿಕೊಳ್ಳಲು 205637 ಮತ ಗಳಿಸಬೇಕಿತ್ತು. ಆಗ ಸ್ಪರ್ಧಿಸಿದ್ದ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ (1,62,448ಮತ) ಸೇರಿದಂತೆ ಮೂವರು ಠೇವಣಿ ನಷ್ಟ ಮಾಡಿಕೊಂಡಿದ್ದರು.

ಬಾಕ್ಸ್‌...........

ಠೇವಣಿ ಕಳೆದುಕೊಂಡಿದ್ದ ಕುಮಾಸ್ವಾಮಿ, ತೇಜಸ್ವಿನಿ 2004ರ ಚುನಾವಣೆಯಲ್ಲಿ ನಾಲ್ಕು ಮಂದಿ ಸ್ಪರ್ಧಿಸಿದ್ದರು. 15,52,416 ಮತಗಳು ಚಲಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ತೇಜಸ್ವಿನಿ (5,84,238 ಮತ) ಗೆಲುವು ಸಾಧಿಸಿದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡರು (4,62,320 ಮತ) ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಇಬ್ಬರು ಪಕ್ಷೇತರರು ಠೇವಣಿ ಕಳೆದುಕೊಂಡಿದ್ದರು.

ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ 2009ರ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಎಚ್.ಡಿ.ಕುಮಾಸ್ವಾಮಿ, ತೇಜಸ್ವಿನಿ ಗೌಡ ಸೇರಿ 8 ಮಂದಿ ಕಣದಲ್ಲಿದ್ದರು. ಒಟ್ಟು 11,02,833 ಮತಗಳು ಚಲಾವಣೆಗೊಂಡಿದ್ದವು. ಠೇವಣಿ ಉಳಿವಿಗೆ 3,17,355 ಮತ ಪಡೆಯಬೇಕಾಗಿತ್ತು. ತೇಜಸ್ವಿನಿ ಸೇರಿ 7 ಮಂದಿಯ ಠೇವಣಿ ನಷ್ಟವಾಗಿ ಮುಖಭಂಗ ಅನುಭವಿಸಿದ್ದರು.

2014ರ ಚುನಾವಣೆಯಲ್ಲಿ 14,55,244 ಮತಗಳು ಚಲಾವಣೆಯಾಗಿದ್ದವು. ಠೇವಣಿ ಉಳಿವಿಗೆ 2,42,529 ಮತ ಪಡೆಯಬೇಕಾಗಿತ್ತು. ಸ್ಪರ್ಧಿಸಿದ್ದ 15 ಮಂದಿ ಪೈಕಿ 12 ಮಂದಿ ಠೇವಣಿ ಕಳೆದುಕೊಂಡು ಜನರಿಂದ ತಿರಸ್ಕೃತಗೊಂಡಿದ್ದರು. 2019ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ಒಟ್ಟು 15 ಮಂದಿ ಅಖಾಡದಲ್ಲಿದ್ದರು. ಠೇವಣಿ ಉಳಿಸಿಕೊಳ್ಳಲು ಮಾನ್ಯವಾದ 16,21,906 ಮತಗಳ ಪೈಕಿ 2,70,317 ಮತಗಳನ್ನು ಪಡೆಯಬೇಕಿತ್ತು. ಆದರೆ, 13 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.

ಸಂಸತ್ ಚುನಾವಣೆಗಳಲ್ಲಿ ಪಕ್ಷದಿಂದ ಬಂಡಾಯವೆದ್ದವರು ಅಥವಾ ಪಕ್ಷೇತರರಾಗಿ ಚುನಾವಣಾ ಅಖಾಡಕ್ಕೆ ಇಳಿದ ಅಭ್ಯರ್ಥಿಗಳ ಸ್ಪರ್ಧೆ ಠೇವಣಿ ನಷ್ಟ ಸಂಪ್ರದಾಯ ಎನ್ನುವಂತಾಗಿಬಿಟ್ಟಿದೆ. ಆದರೂ ಪಕ್ಷೇತರರು ಯಾವ ಅಭ್ಯರ್ಥಿಯ ಸೋಲು ಗೆಲುವಿಗೆ ಕಾರಣರಾಗುತ್ತಾರೆ ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.

12ಕೆಆರ್ ಎಂಎನ್ 1,2.ಜೆಪಿಜಿ1.ಎಚ್.ಡಿ.ಕುಮಾರಸ್ವಾಮಿ

2.ತೇಜಸ್ವಿನಿಗೌಡ