ಸಾರಾಂಶ
ಹೊಸ ಬಿದಿರಿನ 21 ಕಟ್ಟಿನ ಮೊರದಲ್ಲಿ 21 ವಿಧದ ನೈವೇದ್ಯಗಳನ್ನು ಸಮರ್ಪಿಸಿದರು.
ಕಂಪ್ಲಿ: ಪಟ್ಟಣದ ದೇವಾಂಗಪೇಟೆಯ ಹುಳ್ಳಿ ಬಸಪ್ಪ ದೇವಸ್ಥಾನದಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ನೋಪಿ ಗೌರಮ್ಮ ಪ್ರತಿಮೆಯನ್ನು ಸ್ಥಾಪಿಸಿ, ಭಕ್ತರು ಮಂಗಳವಾರ ಭಕ್ತಿ ಪೂರ್ವಕವಾಗಿ ವಿಶೇಷ ಪೂಜೆ ನೆರವೇರಿಸಿದರು.
ಸಾಂಪ್ರದಾಯಿಕ ರೀತಿಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಭಕ್ತರು ಹೊಸ ಬಿದಿರಿನ 21 ಕಟ್ಟಿನ ಮೊರದಲ್ಲಿ 21 ವಿಧದ ನೈವೇದ್ಯಗಳನ್ನು ಸಮರ್ಪಿಸಿದರು. ಸಿಹಿಕರ್ಚಿಕಾಯಿ, ಸಿಹಿ ಗಾರ್ಗಿ, ಬಾಳೆಹಣ್ಣು, ಹೋಳ್ಗಿ (ಒಬ್ಬಟ್ಟು), ಕರಿಗಡಬು, ಸೇಬುಹಣ್ಣು ಹಾಗೂ ಇತರ ಹಣ್ಣುಗಳು ಸೇರಿದಂತೆ, ತಮ್ಮ ಮನೆತನದ ಸಂಪ್ರದಾಯದ ಪ್ರಕಾರ ದೇವಿಗೆ ನೈವೇದ್ಯ ಅರ್ಪಿಸಲಾಯಿತು.ಅದೇ ರೀತಿ ತುಂಬೆಹೂವು, ಅರಿಷಿಣದ ಕೊಂಬು, ಎಲೆ, ಅಡಿಕೆ, ಹೂವಿನ ಸೂಸುಗ (ಹೂದಂಡೆ), ಹೂವಿನ ತೊಟ್ಟಿಲು ಹಾಗೂ ಹೂಹಾರಗಳಿಂದ ದೇವಾಲಯವನ್ನು ಅಲಂಕರಿಸಲಾಯಿತು.
ದೇವಾಲಯದ ಅರ್ಚಕ ಗದ್ಗಿ ಹಿಮವಂತಪ್ಪ ಮಾತನಾಡಿ, ಈ ದೇವಾಲಯದಲ್ಲಿ ತಲಾತಲಾಂತರಗಳಿಂದ ನೋಪಿ ಗೌರಮ್ಮನ ಪ್ರತಿಮೆಯನ್ನು ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯ ಎರಡೂ ದಿನಗಳಲ್ಲಿ ಪೂಜಿಸುವ ಪರಂಪರೆ ಮುಂದುವರಿದಿದೆ. ದೇವಾಂಗ ಸಮಾಜದ ಬಂಗಿಯವರು, ಗದ್ಗಿಯವರು, ಶೀಲವಂತರು, ವೇಣಿಯವರು, ಯತ್ನಟ್ಟಿಯವರು, ದೂಪದವರು ಹಾಗೂ ವಾಲ್ಮೀಕಿ ಸಮಾಜದ ಭಕ್ತರು ಹರಕೆ ಹೊತ್ತು ಪೂಜೆಗೆ ಆಗಮಿಸುತ್ತಾರೆ ಎಂದು ಹೇಳಿದರು.ಪಟ್ಟಣದ ಇತರ ಭಾಗಗಳಾದ ಗುಂಡದವರ ಮನೆ, ವಿಶ್ವಕರ್ಮ ಸಮಾಜದ ಕಾಳಿಕಮಠೇಶ್ವರ ದೇವಸ್ಥಾನ, ಪೇಟೆ ಬಸವೇಶ್ವರ ದೇವಾಲಯ ಹಾಗೂ ಕೂಲಿಕಟ್ಟೆ ಬಸವೇಶ್ವರ ದೇವಾಲಯಗಳಲ್ಲೂ ನೋಪಿ ಗೌರಮ್ಮನ ಪ್ರತಿಮೆಗಳನ್ನು ಸ್ಥಾಪಿಸಿ ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸಲಾಯಿತು.