ಸಾರಾಂಶ
- ತಾಲೂಕು ಪಂಚಾಯಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಇ-ಸ್ವತ್ತು , ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಗ್ರಾಮ ಠಾಣಾ ವ್ಯಾಪ್ತಿ ಮೀರಿ ತಮ್ಮ ಜಮೀನು ಅಥವಾ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಇ-ಸ್ವತ್ತು ಸಿಗದಿರುವ ಕುಟುಂಬಗಳನ್ನು ಗುರುತಿಸಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಶೀಘ್ರದಲ್ಲೇ ಇ-ಸ್ವತ್ತು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆನಂದ್ ಕೆ.ಎಸ್. ಅಧಿಕಾರಿಗಳಿಗೆ ಸೂಚನೆ ನೀಡಿದರು.ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ನಡೆದ ಇ-ಸ್ವತ್ತು ಮತ್ತು ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡೂರು ವಿಧಾನಸಭಾ ಕ್ಷೇತ್ರದ 49 ಗ್ರಾ ಪಂ ವ್ಯಾಪ್ತಿಗಳಲ್ಲಿ ಅನೇಕ ದಶಕಗಳ ಹಿಂದೆ ಜನರು ಮನೆಗಳನ್ನು ಕಟ್ಟಿಕೊಂಡಿದ್ದರೂ ಕೂಡ ನಮಗೆ ಇ-ಸ್ವತ್ತು ಸಿಕ್ಕಿಲ್ಲ ಎಂದು ಗ್ರಾಮೀಣ ಭಾಗದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಜನ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಗಮನಿಸಿದ ತಾವು ಎಲ್ಲಾ ಪಿಡಿಒಗಳು, ಆರ್.ಐ ಗಳ ಸಹಕಾರದಿಂದ ಪ್ರತೀ ಗ್ರಾಪಂ ವ್ಯಾಪ್ತಿಗೆ ಬರುವ ಸರ್ಕಾರಿ ಭೂಮಿ, ಹುಲ್ಲುಬನಿ, ಅರಣ್ಯ, ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಹಿತಿ ಸಲ್ಲಿಸಿ ಸರ್ಕಾರದ ಗಮನ ಸೆಳೆದು ಇ-ಸ್ವತ್ತು ನೀಡಿಕೆಗೆ ಕ್ರಮ ವಹಿಸುತ್ತೇನೆ. ಕೂಡಲೇ ಸರ್ವೆ ಮಾಡಿಸಿ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದರು.
ತಹಸೀಲ್ದಾರ್ ಕವಿರಾಜ್ ಮಾತನಾಡಿ ಮೊದಲು 15 ದಿನದೊಳಗೆ ಮೊದಲ ಹಂತದಲ್ಲಿ ಅಂತಹ ಗ್ರಾಮಗಳನ್ನು ಪಟ್ಟಿ ಮಾಡಿ ನಂತರ ಸರ್ಕಾರದ ಮಾನದಂಡ ಅನುಸರಿಸಿ ಇ-ಸ್ವತ್ತು ನೀಡಲು ಶ್ರಮಿಸುವುದಾಗಿ ತಿಳಿಸಿದರು.ಗ್ರಾಮೀಣ ಕುಡಿವ ನೀರಿನ ಇಲಾಖೆ ಹಾಗು ಜಿಪಂ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳು ಬರಗಾಲದಿಂದ ಕುಡಿವ ನೀರಿನ ಸಮಸ್ಯೆ ಇರುವ ಕೆಲವೆಡೆ ಹಳೇ ಕೊಳವೆ ಬಾವಿಯನ್ನು ಮತ್ತಷ್ಟು ಪುನರುಜ್ಜೀವನ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮಚ್ಚೇರಿಯಲ್ಲಿ ಖಾಸಗಿ ಕೊಳವೆ ಬಾವಿಯಿಂದ ನೀರು ಪಡೆಯಲಾಗುತ್ತಿದೆ. ಸದ್ಯಕ್ಕೆ ತೀವ್ರ ತೊಂದರೆ ಎದುರಾಗಿಲ್ಲ. ನೀರಿನ ಸಮಸ್ಯೆ ಆಗದಂತೆ ಎದುರಿಸಲು ಸಿದ್ದತೆ ಆಗಿದೆ ಎಂದು ಮಾಹಿತಿ ನೀಡಿದರು.
ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದಿಂದ ಹೊರಉಳಿದಿದ್ದು ಇದನ್ನು ಸರಿಪಡಿಸಲು ಅರ್ಜಿ ನೀಡಿದ್ದೇವೆ. ಇನ್ನೂ ಸಂಪರ್ಕ ದೊರೆತಿಲ್ಲ. ಹೊಗರೇಹಳ್ಳಿಯಲ್ಲೂ ಇದೇ ರೀತಿಯಾಗಿದೆ ಎಂದು ಕೆಲವು ಪಿಡಿಒ ಗಳು ತಿಳಿಸಿದಾಗ ಯಾವುದೇ ಸಬೂಬು ಹೇಳದಂತೆ ಶೀಘ್ರ ಸಂಪರ್ಕ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಮತಿಘಟ್ಟ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ 2018-19 ರ ಸಾಲಿನಲ್ಲಿ ಟ್ಯಾಂಕರ್ ಮೂಲಕ ಕುಡಿವ ನೀರು ಸರಬರಾಜು ಮಾಡಿದವರಿಗೆ ಸುಮಾರು 8 ಲಕ್ಷ ರು. ಪಾವತಿ ಆಗಿಲ್ಲ ಎಂಬ ದೂರು ಬಂದಿದ್ದು, ಕೂಡಲೇ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹಣ ಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಉಮೇಶ್ ಸಭೆಗೆ ಮಾಹಿತಿ ನೀಡಿ, ಕಡೂರು ತಾಲೂಕಿನ ಏಳು ಹೋಬಳಿಗಳಲ್ಲಿ ಈಗಿರುವ ಮೇವಿನ ಲಭ್ಯತೆ ಅನುಸಾರ ಸಾಮಾನ್ಯ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ 46 ದಿನ. ತೀವ್ರಗೊಂಡರೆ 20 ವಾರ ಸಾಕಾಗುತ್ತದೆ. ಯಗಟಿ, ಪಂಚನಹಳ್ಳಿ, ಹಿರೇನಲ್ಲೂರುಗಳಲ್ಲಿ ಗೋಶಾಲೆ ಸ್ಥಾಪಿಸಲು ತಲಾ 51 ಲಕ್ಷ ರು. ವೆಚ್ಚ ಅಂದಾಜು ಮಾಡಲಾಗಿದೆ. 950 ಪ್ಯಾಕೆಟ್ ಮೇವಿನ ಬೀಜವನ್ನು ಕೊಳವೆ ಬಾವಿಯಿರುವ ರೈತರಿಗೆ ಉಚಿತವಾಗಿ ನೀಡಲಾಗಿದೆ. ಬಾಸೂರು, ಬಿಳವಾಲ ಬೀರೂರು ಅಮೃತಮಹಲ್ ಕಾವಲಿನಲ್ಲಿರುವ ಒಟ್ಟು 28 ಎಕರೆ ಪ್ರದೇಶದಲ್ಲಿ ಮೇವು ಬೆಳೆಸ ಲಾಗುತ್ತಿದೆ ಎಂದರು.ತಾಲೂಕಿನಲ್ಲಿ ಶೇ 16 ಮಳೆ ಕಡಿಮೆಯಾಗಿ. 46,800 ಹೆಕ್ಟೇರ್ ಬೆಳೆ ನಾಶವಾಗಿದೆ. ಹಿಂಗಾರು ಬೆಳೆಗಳು ಉತ್ತಮ ಸ್ಥಿತಿ ಯಲ್ಲಿವೆ. ರೈತರಿಗೆ ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಪರಿಕರ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ತಿಳಿಸಿದಾಗ ಬಯಲು ಪ್ರದೇಶದ ಬಡ ರೈತರಿಗೆ ಪರಿಕರಗಳನ್ನು ಹೆಚ್ಚು ನೀಡಿ ಎಂದು ಶಾಸಕರು ಸೂಚಿಸಿದರು.
ಜಿಲ್ಲಾ ಕೃಷಿ ಅಧಿಕಾರಿ ಸುಜಾತ, ತಹಸೀಲ್ದಾರ್ ಎಂ.ಪಿ.ಕವಿರಾಜ್, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಸಿ.ಆರ್.ಪ್ರವೀಣ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.--- ಬಾಕ್ಸ್ ಸುದ್ದಿ---- -
ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳಿಗೆ ಮೊದಲ ಆಧ್ಯತೆ ನೀಡಿ ನಂತರ ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆ ಮಾಡಲು ಯೋಜನೆ ತಯಾರಿಸಲಾಗಿದ್ದು, ಅದರಂತೆ ಕಾರ್ಯ ಮುಂದುವರೆಸುವುದಾಗಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದಾಗ ಶಾಸಕರು ಶೀಘ್ರ ಕಾರ್ಯಾರಂಭ ಮಾಡಿ ಎಂದು ಸೂಚನೆ ನೀಡಿದರು.
28ಕೆಕೆಡಿಯು1ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಕೆ.ಎಸ್.ಆನಂದ್ ಬರಗಾಲದ ಪ್ರಗತಿ ಪರಿಶೀಲನ ಸಭೆ ನಡೆಸಿದರು.