ಕಾಫಿಯ ತವರೂರಲ್ಲಿ ಇಂದಿನಿಂದ ನುಡಿ ಜಾತ್ರೆ

| Published : Mar 29 2024, 12:47 AM IST

ಸಾರಾಂಶ

ಕರಾವಳಿಯ ಹಬ್ಬಾಗಿಲಿನಲ್ಲಿರುವ ಮೂಡಿಗೆರೆಯಲ್ಲಿ ಈ ಬಾರಿ ಇಂದಿನಿಂದ ಎರಡು ದಿನಗಳ ಕಾಲ ನುಡಿಜಾತ್ರೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೂಡಿಗೆರೆ

ಎತ್ತ ನೋಡಿದರೂ ಅತ್ತ ಕಾಫಿ ತೋಟಗಳು, ಗಿಡಗಳಿಗೆ ಸುತ್ತುವರೆದು ಆಕಾಶಕ್ಕೆ ಮುಖ ಮಾಡಿರುವ ಮೆಣಸಿನ ಬಳ್ಳಿಗಳು, ಅವುಗಳ ಮಧ್ಯೆದಲ್ಲಿ ಬಾಳೆ ಹಾಗೂ ಹಣ್ಣಿನ ಗಿಡಗಳು. ಪಶ್ಚಿಮಘಟ್ಟ ಹಾಗೂ ಕರಾವಳಿಯ ಹಬ್ಬಾಗಿಲಿನಲ್ಲಿರುವ ಮೂಡಿಗೆರೆಯಲ್ಲಿ ಈ ಬಾರಿ ಇಂದಿನಿಂದ (ಮಾ.29) ಎರಡು ದಿನಗಳ ಕಾಲ ನುಡಿಜಾತ್ರೆ ನಡೆಯಲಿದೆ.

ಹೇಮಾವತಿ ನದಿಯ ತವರೂರು, ಪೂರ್ಣಚಂದ್ರ ತೇಜಸ್ವಿ ಅವರಲ್ಲಿ ಬರವಣಿಗೆಯ ಉತ್ಸಾಹ ತುಂಬಿದ ಪ್ರಕೃತಿ, ಇಲ್ಲಿನ ಸಂಪ್ರದಾಯ, ಕಲೆ ಸಾಹಿತ್ಯ ಕ್ಷೇತ್ರಕ್ಕೆ ಈ ನೆಲ ಕೊಟ್ಟಿರುವ ಕೊಡುಗೆ ಅಸಾಮಾನ್ಯ. ರಾಜಕೀಯ ಕ್ಷೇತ್ರಕ್ಕೂ ಅಪಾರವಾದ ಕೊಡುಗೆಯನ್ನು ನೀಡಿರುವ ಮೂಡಿಗೆರೆ, ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಅಗ್ರ ಪಂಕ್ತಿಯಲ್ಲಿದೆ.

ಇದೊಂದು ಪೂರ್ಣ ಪ್ರಮಾಣದ ಮಲೆನಾಡು, ಪಶ್ಚಿಮಘಟ್ಟದ ತಪ್ಪಲಲ್ಲಿ ಹಸಿರು ಬೆಟ್ಟಗಳ ಸಾಲಿನಲ್ಲಿ ಗುಬ್ಬಚ್ಚಿಯ ಗೂಡಿನಂತೆ ಕಂಡು ಬರುವ ಮೂಡಿಗೆರೆಯನ್ನು ಈ ಬಾರಿ ಚಿಕ್ಕಮಗಳೂರು ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಆಯ್ಕೆ ಮಾಡಿಕೊಂಡಿರುವುದು ಪರಿಷತ್‌ನ ಘನತೆ ಇನ್ನಷ್ಟು ಹೆಚ್ಚು ಮಾಡಿದೆ.

ಬೆಳಿಗ್ಗೆ ಚಾಲನೆ: ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ಅವರು ಪರಿಷತ್ತಿನ ಧ್ವಜಾರೋಹಣ, ಕಸಾಪ ನಾಡ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ಎಚ್‌.ಎಂ. ಶಾಂತಕುಮಾರ್‌ ಅವರು ನೆರವೇರಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಹೊರಡಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಚಂದನ್‌ ಗ್ರೂಫ್‌ನ ಮಂಚೇಗೌಡ ಅವರು ಉದ್ಘಾಟಿಸಲಿದ್ದಾರೆ. ತಹಶೀಲ್ದಾರ್ ಶೈಲೇಶ್‌ ಎಸ್‌. ಪರಮಾನಂದ, ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಗಾದಿ ಲಿಂಗನಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಆಳ್ವಾಸ್‌ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್‌ ಆಳ್ವ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಷಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಡಾ. ಜೆ.ಪಿ. ಕೃಷ್ಣೇಗೌಡ ಅವರು ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿ ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಡಾ.ಬೆಳವಾಡಿ ಮಂಜುನಾಥ್‌ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಗೋಷ್ಠಿಗಳು ನಡೆಯಲಿದ್ದು, ಗೋಷ್ಠಿಯ ನಂತರ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಮಾರೋಪ: ಮಾ.30ರ ಬೆಳಿಗ್ಗೆ 10ಕ್ಕೆ ಜಾನಪದ ಪ್ರಕಾರಗಳ ಪ್ರದರ್ಶನ, ಮಧ್ಯಾಹ್ನ 1.30ಕ್ಕೆ ಕವಿಗೋಷ್ಠಿ, ಸಂಜೆ 4 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಳಿಕ ಬಹಿರಂಗ ಅಧಿವೇಶನ, ನಂತರ ಸಮಾರೋಪ ಸಮಾರಂಭ ನಡೆಯಲಿದೆ.

ಕೃತಿಗಳ ಲೋಕಾರ್ಪಣೆ: ಸಾಹಿತ್ಯ ಸಮ್ಮೇಳನದಲ್ಲಿ ಕಣ್ಣ ಕನ್ನಡಿ ಭಾಗ-1, ನನಸುಗಾರನ ಸ್ವಗತ, ಪ್ರೇಮ ರೇಖೆ, ಜನ ಸಾಮಾನ್ಯರಿಗಾಗಿ ಕಾನೂನು, ಕಲ್ಪನೆ, ವಚನಸುಧೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಪ್ರಮುಖ ಗೋಷ್ಠಿಗಳು: ಮಾ.29ಕ್ಕೆ ‘ಅನ್ನದಾತರ ಅಳಲು-ಅಪೇಕ್ಷೆಗಳು’, ನಂತರ ವರ್ತಮಾನದಲ್ಲಿ ಮಹಿಳೆ, ಮಾ.30ಕ್ಕೆ ಕನ್ನಡ ಚಳವಳಿ- ಪರಿಣಾಮಗಳು ಕುರಿತು ಗೋಷ್ಠಿ ನಡೆಯಲಿದೆ.ಹಳೆಕೋಟೆ ರಮೇಶ್‌ ಸಮ್ಮೇಳನಾಧ್ಯಕ್ಷಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತ್ಯ ಹಾಗೂ ಕೃಷಿ ಕ್ಷೇತ್ರಗಳೆರಡಲ್ಲೂ ಅನುಪಮ ಸೇವೆ ಸಲ್ಲಿಸಿರುವ ಹಳೆಕೋಟೆ ರಮೇಶ್‌ ಅವರನ್ನು ಆಯ್ಕೆ ಮಾಡಿರುವುದು ಸಹ ಈ ಸಮ್ಮೇಳನದ ವಿಶೇಷವಾಗಿದೆ. ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದವರಾದ ನಂಜೇಗೌಡ ಹಾಗೂ ಸೀತಮ್ಮ ಇಬ್ಬರೂ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ಇವರ ಪುತ್ರರಾದ ಹಳೆಕೋಟೆ ರಮೇಶ್‌, ಎಂಎ ಪದವೀಧರರು, ಆದರೂ ಸಹ ಕೃಷಿ ಕ್ಷೇತ್ರದಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು.

ಕಾಫಿ, ಏಲಕ್ಕಿ, ಮೆಣಸು, ಅಡಿಕೆ, ಬಾಳೆ, ತೆಂಗು, ಬತ್ತ, ರೇಷ್ಮೆ ಹೀಗೆ ಬಹು ವಿಧದ ಬೆಳೆಗಳನ್ನು ಬೆಳೆಯಲಾರಂಭಿಸಿ ಮಾದರಿ ಕೃಷಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇನ್ನು, ಸಮ್ಮೇಳನದಲ್ಲಿ ಸುಮಾರು 3 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳಲ್ಲಿ ಸುಮಾರು 8 ಸಾವಿರ ಜನರು ಸಮ್ಮೇಳನಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದಲ್ಲಿ ಸುಮಾರು 25 ಕನ್ನಡ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ಹೇಳಿದರು.