ಸಾವಯವ ಕೃಷಿಯಿಂದ ಆಹಾರದಲ್ಲಿ ಪೋಷಕಾಂಶಗಳ ಭದ್ರತೆ- ಡಾ.ಪಿ.ಎಲ್ .ಪಾಟೀಲ

| Published : Jul 02 2024, 01:33 AM IST

ಸಾರಾಂಶ

ರಸಗೊಬ್ಬರಗಳ ಬಳಕೆ ತಗ್ಗಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಜೈವಿಕ ಗೊಬ್ಬರದ ಬಳಕೆಯಿಂದ ಆಹಾರದಲ್ಲಿ ಪೋಷಕಾಂಶಗಳ ಭದ್ರತೆಯನ್ನು ಮಾಡಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.

ರಾಣಿಬೆನ್ನೂರು: ರಸಗೊಬ್ಬರಗಳ ಬಳಕೆ ತಗ್ಗಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಜೈವಿಕ ಗೊಬ್ಬರದ ಬಳಕೆಯಿಂದ ಆಹಾರದಲ್ಲಿ ಪೋಷಕಾಂಶಗಳ ಭದ್ರತೆಯನ್ನು ಮಾಡಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮ್ಯಾನೇಜ್ ಹೈದರಾಬಾದ್, ಸಮೇತಿ (ಉತ್ತರ), ಧಾರವಾಡ ಕೃಷಿ ವಿಶ್ವವಿದ್ಯಾಲಯ, ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತ 15 ದಿನದ ವಸತಿ ಸಹಿತ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರದ ಅಭಾವವಿರುವುದರಿಂದ ರೈತರು ಬೆಳೆಯನ್ನು ಕಟಾವು ಮಾಡಿದ ನಂತರ ಉಳಿದ ಕೃಷಿ ತ್ಯಾಜ್ಯ ವಸ್ತುಗಳನ್ನು ಸುಡುವ ಬದಲು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಮಾಲಿನ್ಯವನ್ನು ತಡೆಯಬಹುದು. ತರಬೇತಿ ಪಡೆದ ನಂತರ ನೀವು ತಿಳಿದುಕೊಂಡ ವೈಜ್ಞಾನಿಕ ಮಾಹಿತಿಯನ್ನು ಒಬ್ಬರಿಂದ ಒಬ್ಬರಿಗೆ ಪಸರಿಸಬೇಕು ಹಾಗೂ ಕಡಿಮೆ ಖರ್ಚಿನಲ್ಲಿ ರೈತರು ಹೆಚ್ಚಿನ ಆದಾಯವನ್ನು ಪಡೆಯಲು ಸಹಕರಿಸಬೇಕು ಎಂದರು. ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಮಾತನಾಡಿ, ವಿವಿಧ ಬೆಳೆ ಪದ್ಧತಿಗಳಾದ ಏಕದಳ, ದ್ವಿದಳ, ಎಣ್ಣೆ ಕಾಳು, ಅಂತರ ಬೆಳೆ ಮತ್ತು ಮಿಶ್ರ ಬೆಳೆ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದರು. ವಿವಿಧ ಪೋಷಕಾಂಶಗಳ ಮೂಲಗಳಾದ ದ್ರವ ರೂಪದ ಗೊಬ್ಬರ, ನ್ಯಾನೋ ಗೊಬ್ಬರ, ನೀರಿನಲ್ಲಿ ಕರಗುವ ಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನು ಬೆಳೆಗಳಿಗೆ ಅನುಗುಣವಾಗಿ ಯಾವ ರೀತಿ ಒದಗಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥ ಡಾ. ಜೆ. ಎಸ್. ಹಿಳ್ಳಿ ಮಾತನಾಡಿ, ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರದ, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು. ಎರೆಹುಳು ಘಟಕಗಳನ್ನು ರೈತರು ನಿರ್ಮಿಸಿ ಎರೆಹುಳು ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡುವುದರಿಂದ ಅಧಿಕ ಲಾಭವನ್ನು ಸಹಗಳಿಸಬಹುದು ಎಂದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಮಾತನಾಡಿ, ಹೆಚ್ಚುತಿರುವ ಭಾರತದ ಜನ ಸಂಖ್ಯೆಗೆ ಪೋಷಕಾಂಶಯುಕ್ತ ಆಹಾರ ಪೂರೈಕೆ ಒಂದು ಸವಾಲಾದರೆ ಹವಾಮಾನ ವೈಪರಿತ್ಯದಿಂದ ಕೃಷಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತೊಂದು ಸವಾಲಾಗಿದೆ. ಹೀಗಾಗಿ ರೈತರ ಖರ್ಚು ವೆಚ್ಚ ಅಧಿಕ ಆಗುವುದರ ಜೊತೆಗೆ ಉತ್ಪಾದಕತೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ಬೇಸಾಯ ಕ್ರಮದ ಹೊಸ ತಂತ್ರಜ್ಞಾನಗಳು ರೈತರಿಗೆ ಗ್ರಾಮೀಣ ಮಟ್ಟದಲ್ಲಿ ಮಾಹಿತಿಯನ್ನು ನೀಡುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇವರಿಗೆ ನಾವು ಸಮಗ್ರ ಪೋಷಕಾಂಶಗಳ ನಿರ್ವಹಣೆಯ ತಂತ್ರಜ್ಞಾನದ ಬಗ್ಗೆ ಮಾಹಿತಿ ಒದಗಿಸಿದಲ್ಲಿ ಮುಂದೆ ಅವರು ವಿಸ್ತರಣಾ ಅಧಿಕಾರಿಗಳಾಗಿ ರೈತರಿಗೆ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಪೂರಕ ಮಾಹಿತಿಯನ್ನು ನೀಡಬಹುದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆದಾಯ ದ್ವಿಗುಣಗೊಂಡ ರೈತರಿಗೆ ಸನ್ಮಾನ ಮಾಡಲಾಯಿತು.ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್. ಎಮ್., ಬೇಸಾಯಶಾಸ್ತ್ರ ವಿಷಯ ತಜ್ಞೆ ಡಾ. ಸಿದ್ದಗಂಗಮ್ಮ ಕೆ. ಆರ್., ಮಣ್ಣು ವಿಜ್ಞಾನದ ವಿಷಯ ತಜ್ಞೆ ಡಾ. ರಶ್ಮಿ ಸಿ. ಎಮ್. ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ನಿಯಮಿತ ಸದಸ್ಯರು, ಪರಿಕರ ವಿತರಕರು ಮತ್ತು 50ಕ್ಕೂ ಹೆಚ್ಚು ಜನ ರೈತರು/ ರೈತ ಮಹಿಳೆಯರು ಪಾಲ್ಗೊಂಡಿದ್ದರು.