ಸಾರಾಂಶ
ಆತ್ಮಭೂಷಣ್
ಮಂಗಳೂರು : ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಮತ್ತೆ ಕ್ಯಾನ್ಸರ್ಕಾರಕ ಪಟ್ಟ ದಕ್ಕಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ)ಯ ಅಂಗಸಂಸ್ಥೆಯೊಂದು ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿಯು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ತಂಬಾಕು ಮಾದರಿಯಲ್ಲೇ ಅಡಕೆ ಬೆಳೆ ನಿಯಂತ್ರಣ ಉಪಕ್ರಮಗಳಿಗೂ ಕಾರಣವಾಗುವ ಆತಂಕ ಬೆಳೆಗಾರರಲ್ಲಿ ಮೂಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅಂಗಸಂಸ್ಥೆ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್(ಐಎಆರ್ಸಿ) 2024 ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಮತ್ತೆ ಅಡಕೆಯನ್ನು ಕ್ಯಾನ್ಸರ್ ಕಾರಕ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್ ಅಂಕಾಲಜಿ ಎಂಬ ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ಪ್ರಕಟವಾಗಿದೆ. ಐಎಆರ್ಸಿ ಸಂಸ್ಥೆ ಬಾಯಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕ್ಯಾನ್ಸರ್ ವರದಿ ಪ್ರಕಟಿಸುತ್ತದೆ. ಈ ಹಿಂದಿನ ಐಎಆರ್ಸಿಯ ವರದಿಗಳಲ್ಲೂ ಅಡಕೆ ಕ್ಯಾನ್ಸರ್ಕಾರಕ ಎಂದೇ ಉಲ್ಲೇಖವಾಗಿದ್ದರೂ ಈಗಿನ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ.
ಅಡಕೆ ಬೆಳೆ ನಿಯಂತ್ರಣಕ್ಕೆ ಶಿಫಾರಸು:
ಐಎಆರ್ಸಿ ವರದಿಯಲ್ಲಿ ತಂಬಾಕು ಮಿಶ್ರಿತ ಅಡಕೆ ಮಾತ್ರವಲ್ಲ, ನೇರವಾಗಿ ಅಡಕೆ ಬೆಳೆಯನ್ನೇ ನಿಯಂತ್ರಿಸುವ ಪ್ರಸ್ತಾಪವಿದೆ. ಹೊಗೆ ರಹಿತ ತಂಬಾಕು(ತಿಂದು ಉಗುಳುವ) ಮತ್ತು ಅಡಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್ ತಡೆಯಬಹುದು ಎಂಬ ವರದಿಯಲ್ಲಿ ಹೇಳಲಾಗಿದೆ.
ಜಾಗತಿಕವಾಗಿ ಹೊಗೆ ರಹಿತ ತಂಬಾಕಿನಿಂದ ಉಂಟಾಗಿರುವ 1,20,200 ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ 83,400 ಪ್ರಕರಣ ಭಾರತದಲ್ಲೇ ದಾಖಲಾಗಿದೆ. 2022ರಲ್ಲಿ ಈ ಅಧ್ಯಯನ ನಡೆಸಿದ್ದು, ಬಹುತೇಕ ಅಧ್ಯಯನ ಉತ್ತರ ಭಾರತದಲ್ಲೇ ನಡೆದಿರುವುದು ಗಮನಾರ್ಹ. ಜಾಗತಿಕವಾಗಿ 300 ಮಿಲಿಯನ್ ಮಂದಿ ಹೊಗೆರಹಿತ ತಂಬಾಕು ದಾಸರಾಗಿದ್ದು, 600 ಮಿಲಿಯನ್ ಮಂದಿ ಅಡಕೆ ಬಳಸುತ್ತಾರೆ. ದಕ್ಷಿಣ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರೆ ಹೆಚ್ಚಿನ ದೇಶಗಳಲ್ಲಿ ಅಡಕೆ ಬಳಕೆಯಲ್ಲಿದೆ. ಹೊಗೆ ರಹಿತ ತಂಬಾಕು ಮತ್ತು ಅಡಕೆ ಉತ್ಪನ್ನಗಳು ಗ್ರಾಹಕರಿಗೆ ವಿವಿಧ ರೂಪದಲ್ಲಿ ಲಭ್ಯವಿರುತ್ತವೆ.
ತಂಬಾಕು, ಗುಟ್ಕಾ ಹಾಗೂ ಅಡಕೆಯಂಥ ಹೊಗೆರಹಿತ ತಂಬಾಕು ಉತ್ಪನ್ನಗಳ ಹೆಚ್ಚಿನ ಬಳಕೆಯಿಂದ ಏಷ್ಯಾದ ದೇಶಗಳಲ್ಲಿ ಭಾರತ ಅತೀ ಹೆಚ್ಚು ಬಾಯಿ ಕ್ಯಾನ್ಸರ್ ಪ್ರಕರಣ ಹೊಂದಿದೆ ಎಂದು ಕ್ಯಾನ್ಸರ್ ವಿಭಾಗದ ವಿಜ್ಞಾನಿ ಡಾ.ಹ್ಯಾರಿಯೆಟ್ ರುಮ್ಗೇ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೊಗೆರಹಿತ ತಂಬಾಕು ಮತ್ತು ಅಡಕೆ ಬಳಕೆಯಿಂದ ಉಂಟಾಗುವ ಎಲ್ಲ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಭಾರತದಲ್ಲಿ 83,400, ಬಾಂಗ್ಲಾದೇಶ 9,700, ಪಾಕಿಸ್ತಾನ 8,900, ಚೀನಾ 3,200, ಮ್ಯಾನ್ಮಾರ್ 1,600, ಶ್ರೀಲಂಕಾ 1,300, ಇಂಡೋನೇಷ್ಯಾ 990 ಹಾಗೂ ಥಾಯ್ಲ್ಯಾಂಡ್ನಲ್ಲಿ 785 ಕೇಸ್ಗಳು ವರದಿಯಾಗಿದೆ.
ಅಡಕೆ ಬೆಳೆ ಮೇಲೆ ಪರಿಣಾಮ:
ಅಡಕೆ ಕ್ಯಾನ್ಸರ್ಕಾರಕ ಎಂಬ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ನಲ್ಲಿ ಕೆಲ ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. 1998 ರಿಂದಲೂ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಅಡಕೆ ಹಾನಿಕಾರಕ ಎಂದೇ ಉಲ್ಲೇಖಿಸಲಾಗುತ್ತಿದೆ. ಅಡಕೆ ಆರೋಗ್ಯದಾಯಕ, ಸಾಂಪ್ರದಾಯಿಕವಾಗಿಯೂ ಅಡಕೆ ಬಳಸುತ್ತಾರೆ. ಮೌಲ್ಯವರ್ಧಿತ ಉತ್ಪನ್ನವಾಗಿಯೂ ಉಪಯೋಗಿಸುತ್ತಾರೆ ಎಂಬುದನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ. ಇದರ ಜತೆಗೆ ಅಡಕೆ ಕ್ಯಾನ್ಸರ್ಕಾರಕ ಅಲ್ಲ ಎಂದು ಮಾರುಕಟ್ಟೆ ಅಧ್ಯಯನ ವರದಿಗಳೂ ಅಭಿಪ್ರಾಯ ಮಂಡಿಸಿದ್ದರೂ ಅದು ಐಎಆರ್ಸಿ ತಲುಪಿಲ್ಲ. ಹೀಗಾಗಿ ಅಡಕೆ ಕ್ಯಾನ್ಸರ್ಕಾರಕ ಅಲ್ಲ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇರುವುದು ಈಗ ಅಡಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿಗೆ ಕಾರಣವಾಗಿದೆ.
ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಚೀನಾ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡಕೆ ಹಾನಿಕಾರಕ ಎಂದು ವರದಿಗಳು ಬರುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಅಡಕೆ ಬೆಳೆಯುವ ಚೀನಾ ಅಡಕೆ ನಿಷೇಧಕ್ಕೂ ಮೊದಲೇ ಮೌಲ್ಯವರ್ಧಿತ ಆಹಾರ ಉತ್ಪನ್ನವಾಗಿ ಮಾರ್ಪಡಿಸಿ ಅಡಕೆ ಬೆಳೆ ಉಳಿಸಿಕೊಳ್ಳಲು ಉಪಾಯ ಕಂಡುಕೊಂಡಿದೆ. ಮುಂದಿನ ಡಬ್ಲ್ಯೂಎಚ್ಒ ಶೃಂಗ ಚೀನಾದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡಕೆ ವಿಚಾರದಲ್ಲಿ ಚೀನಾ ಈಗಾಗಲೇ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.