ಸೂಕ್ಷ್ಮ ವೀಕ್ಷಕರು ಮತಗಟ್ಟೆಗಳಲ್ಲಿನ ವರದಿ ನೀಡಬೇಕು: ನೀರಜ್ ಕುಮಾರ್

| Published : Apr 23 2024, 12:46 AM IST

ಸೂಕ್ಷ್ಮ ವೀಕ್ಷಕರು ಮತಗಟ್ಟೆಗಳಲ್ಲಿನ ವರದಿ ನೀಡಬೇಕು: ನೀರಜ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಸೂಕ್ಷ್ಮ ವೀಕ್ಷಕರು ಮತಗಟ್ಟೆಯ 100 ಹಾಗೂ 200 ಮೀ. ವ್ಯಾಪ್ತಿಯಲ್ಲಿ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು. ಮತಗಟ್ಟೆಯ ಒಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ. ತಾವು ಎಲ್ಲವನ್ನೂ ವೀಕ್ಷಿಸಿ ಹೊರಬಂದು ವರದಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಚುನಾವಣೆಗೆ ನಿಯೋಜನೆಗೊಂಡಿರುವ ಸೂಕ್ಷ್ಮ ವೀಕ್ಷಕರು ಮತಗಟ್ಟೆ ಹೊರಗೆ ಹಾಗೂ ಒಳಗೆ ನಡೆಯುವ ಎಲ್ಲಾ ಪ್ರಕ್ರಿಯೆಗಳನ್ನು ವೀಕ್ಷಿಸಿ ವರದಿ ನೀಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ನೀರಜ್ ಕುಮಾರ್ ತಿಳಿಸಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮೈಕ್ರೋ ಅಬ್ಸರ್ವರ್ ಗಳಿಗೆ ಏರ್ಪಡಿಸಿದ್ದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿ, ಸೂಕ್ಷ್ಮ ವೀಕ್ಷಕರನ್ನು ಚುನಾವಣಾ ಆಯೋಗದಿಂದ ನೇಮಕ ಮಾಡಲಾಗಿದೆ. ಪ್ರತಿಯೊಂದು ಪ್ರಕ್ರಿಯೆಯನ್ನು ಸಿಸಿಟಿವಿ ರೀತ್ಯ ದಾಖಲು ಮಾಡಿಕೊಂಡು ಸಾಮಾನ್ಯ ವೀಕ್ಷಕರಿಗೆ ಮಾತ್ರ ವರದಿ ಮಾಡಬೇಕು ಎಂದು ತಮ್ಮ ಮೊಬೈಲ್ ಸಂಖ್ಯೆಯ ವಿವರವನ್ನು ನೀಡಿದರು. ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸೂಕ್ಷ್ಮ ವೀಕ್ಷಕರು ಮತಗಟ್ಟೆಯ 100 ಹಾಗೂ 200 ಮೀ. ವ್ಯಾಪ್ತಿಯಲ್ಲಿ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು. ಮತಗಟ್ಟೆಯ ಒಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ. ತಾವು ಎಲ್ಲವನ್ನೂ ವೀಕ್ಷಿಸಿ ಹೊರಬಂದು ವರದಿ ಮಾಡಬೇಕು ಎಂದರು.

ಮತದಾನದ ಗೌಪ್ಯತೆ ಕಾಪಾಡುವುದು ಪ್ರತಿಯೊಬ್ಬ ಮತದಾರನ ಕೆಲಸವಾಗಿದೆ. ಗೌಪ್ಯತೆ ಕಾಪಾಡದೇ ಉಲ್ಲಂಘನೆ ಕಂಡುಬಂದಲ್ಲಿ ಆರ್.ಪಿ. ಆ್ಯಕ್ಟ್ ಅಡಿ ಕ್ರಮ ಕೈಗೊಳ್ಳಬಹುದು. ಇದನ್ನು ಸಹ ಸೂಕ್ಷ್ಮವಾಗಿ ವೀಕ್ಷಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು. 18 ಪ್ರಶ್ನೆಗಳುಳ್ಳ ನಮೂನೆ 1 ನ್ನು ಸೂಕ್ಷ್ಮ ವೀಕ್ಷಕರಿಗೆ ನೀಡಲಾಗುವುದು. ಮತದಾನ ಪ್ರಕ್ರಿಯೆ ಮುಗಿದ ನಂತರ ಅದನ್ನು ತಪ್ಪದೇ ಸಾಮಾನ್ಯ ವೀಕ್ಷಕರಿಗೆ ಸಲ್ಲಿಸಬೇಕು ಎಂದು ಹೇಳಿದರು. ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್. ಎಲ್. ನಾಗರಾಜು, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಎಚ್, ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ನಡೆ ಮತದಾನ ಕಡೆ ಜಾಗೃತಿ ಜಾಥಾ

ಮದ್ದೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್‌ ವತಿಯಿಂದ ಪಟ್ಟಣದಲ್ಲಿ ನಮ್ಮ ನಡೆ ಮತದಾನ ಕಡೆ ಎಂಬ ಘೋಷಣೆಯೊಂದಿಗೆ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಭಾರತ ಚುನಾವಣಾ ಆಯೋಗ, ತಾಲೂಕು ಆಡಳಿತ ಸ್ವೀಪ್ ಸಮಿತಿ, ಪುರಸಭೆಯಿಂದ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ, ಸ್ತ್ರೀಶಕ್ತಿ, ವಿಕಲಚೇತನರು ಹಾಗೂ ನರೇಗಾ ಸಿಬ್ಬಂದಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.ತಾಪಂ ಆವರಣದಿಂದ ಆರಂಭಗೊಂಡ ನಮ್ಮ ನಡೆ ಮತಗಟ್ಟೆ ಕಡೆ ಜಾಗೃತಿ ಜಾಥಾಗ ತಹಸೀಲ್ದಾರ್ ಸೋಮಶೇಖರ್ ಚಾಲನೆ ನೀಡಿದರು. ಜಾಥಾ ಆರಂಭಕ್ಕೆ ಮುನ್ನ ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ಜಿ.ಆರ್.ಮಂಜುನಾಥ್ ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ಕೃಷಿ ಅಧಿಕಾರಿ ಪರಮೇಶ್, ತೋಟಗಾರಿಕೆ ಅಧಿಕಾರಿ ರೇಖಾ, ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಸಿಡಿಪಿಒ ನಾರಾಯಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಡಾ.ಮಂಗಳ, ಆಯುಷ್ ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ, ನರೇಗಾ ಅಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.