ಸೂಚನೆ ನೀಡದೆ ಜಾಗ ಪಲಿಶೀಲನೆಗೆ ಬಂದ ಅಧಿಕಾರಿಗಳು

| Published : Oct 09 2025, 02:01 AM IST

ಸಾರಾಂಶ

ತಾಲೂಕಿನ ಗೇರಸೊಪ್ಪಾದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ಕೈಬಿಡಬೇಕು ಎಂದು ಕಳೆದ ತಿಂಗಳು ನಡೆದ ಅಹವಾಲು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ಬಂದಿತ್ತು.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಗೇರಸೊಪ್ಪಾದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ಕೈಬಿಡಬೇಕು ಎಂದು ಕಳೆದ ತಿಂಗಳು ನಡೆದ ಅಹವಾಲು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ಬಂದಿತ್ತು. ನಂತರದಲ್ಲಿ ಈ ಯೋಜನೆಯನ್ನು ಸರ್ಕಾರ ಕೈಬಿಡಬಹುದು ಎಂಬ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದರು. ಆದರೆ ಬುಧವಾರದಂದು ಕೆಪಿಸಿಯ ಅಧಿಕಾರಿಗಳು ಮೂರರಿಂದ ನಾಲ್ಕು ಜನರು ನಗರಬಸ್ತಿಕೇರಿ ಭಾಗದ ಸರ್ವೆ ನಂ 1-6-18 ರ ಮಾಲ್ಕಿ ಜಾಗದಲ್ಲಿ ಬಂದು ರಸ್ತೆ ಕಾಮಗಾರಿ ನಡೆಸಲು ಎಷ್ಟು ಜಾಗ ಬೇಕಾಗಬಹುದು ಎಂದು ಅಳೆಯಲು ಬಂದಿದ್ದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ರಸ್ತೆ ನಿರ್ಮಿಸಲು ಬೇಕಾಗುವ ಜಾಗವನ್ನು ನಿಗದಿಗೊಳಿಸಲು ಬಂದಿದ್ದರು. ಆದರೆ ಬಂದಿರುವ ಅಧಿಕಾರಿಗಳು ಇದಕ್ಕೂ ಮೊದಲು ಮಾಲ್ಕಿ ಜಾಗದ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಜಾಗ ಪರಿಶೀಲಿಸಲು ಆಗಮಿಸಿದ್ದರು. ಇದರಿಂದಾಗಿ ಸ್ಥಳೀಯರು ಅವರ ಕೆಲಸವನ್ನು ವಿರೋಧಿಸಿದರು. ಯಾರ ಆದೇಶದ ಮೇಲೆ ಇಲ್ಲಿಗೆ ಬಂದಿದ್ದೀರಿ ಎಂದು ಜನರು ಪ್ರಶ್ನಿಸಿದರು. ನಂತರ ಜನರು ಹಾಗೂ ಪೊಲೀಸರ ಸಮ್ಮುಖದಲ್ಲಿ ಅಳತೆ ನಡೆಸುವ ಕೆಲಸ ಬಿಟ್ಟು ತೆರಳಿದರು. ಸ್ಥಳಿಯ ಜನರು ಕೆಪಿಸಿಯವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ ಕೆಪಿಸಿ ಅಧಿಕಾರಿಗಳು ಸಹ ನಾವು ಮೊದಲೇ ತಿಳಿಸಿ ಬರಬೇಕಿತ್ತು. ಮುಂದಿನ ದಿನದಲ್ಲಿ ಬರುವಾಗ ತಿಳಿಸಿ ಬರುತ್ತೇವೆ ಎಂದರು. ಆದರೆ ಇದಕ್ಕೆ ಜನರು ವಿರೋಧಿಸುತ್ತಾ ಈ ಯೋಜನೆಯನ್ನು ಕೈಬಿಡಿ ಎಂದು ಅಹವಾಲು ಸಭೆಯಲ್ಲಿಯೇ ಹೇಳಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ, ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ, ಉಪಾಧ್ಯಕ್ಷ ಮಂಜುನಾಥ್ ನಾಯ್ಕ ಸೇರಿದಂತೆ ಸ್ಥಳೀಯ ಜನರಿದ್ದರು.