ಸಾರಾಂಶ
ಭದ್ರಾವತಿ: ಲೋಕಾಯುಕ್ತ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಅಧಿಕಾರಿಗಳು ನಿರ್ಲಕ್ಷ್ಯವಾಗಿ ಪರಿಗಣಿಸಬಾರದು. ಸಭೆಗೆ ಕಡ್ಡಾಯವಾಗಿ ಪಾಲ್ಗೊಂಡು ಸಮಸ್ಯೆ ಇತ್ಯರ್ಥಗೊಳಿಸಲು ಸಹಕರಿಸಬೇಕೆಂದು ಲೋಕಾಯುಕ್ತ ಪೊಲೀಸ್ ಜಿಲ್ಲಾ ನಿರೀಕ್ಷಕ ಎಚ್.ಎಸ್ ಸುರೇಶ್ ಹೇಳಿದರು. ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸಭೆಗೆ ಹಾಜರಾದ ಅಧಿಕಾರಿಗಳ ಮಾಹಿತಿ ಪಡೆದರು. ಶೇ.50ರಷ್ಟು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸಣ್ಣ ಆಮಿಷಗಳಿಗೆ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳದಿರಿ. ಜನತೆಯ ಕೆಲಸಗಳನ್ನು ಕೇವಲ ಸಬೂಬು ಹೇಳದೇ ಸಕಾಲಕ್ಕೆ ಪೂರ್ಣಗೊಳಿಸಬೇಕು. ಅಧಿಕಾರಿಗಳ ಹಂತದಲ್ಲಿ ಕೆಲಸಗಳು ಆಗದಿದ್ದಾಗ ಲೋಕಾಯುಕ್ತಕ್ಕೆ ದೂರುಗಳು ಬರುತ್ತವೆ. ಆದ್ದರಿಂದ ಇಂತಹ ದೂರುಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಅಧಿಕಾರಿಗಳು ಕುಂದುಕೊರತೆ ಸಭೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.ಸಾರ್ವಜನಿಕರ ದೂರುಗಳನ್ನು ಲಘುವಾಗಿ ಪರಿಗಣಿಸದಿರಿ. ಕೇವಲ ಅರ್ಜಿ ಪಡೆಯುವುದು ಮುಖ್ಯವಲ್ಲ. ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಭದ್ರಾವತಿಗೆ ಸಂಬಂಧಿಸಿದಂತೆ 5 ಅರ್ಜಿಗಳು ಬಂದಿವೆ. ಅಧಿಕಾರಿಗಳು ಹಾಜರಾಗದಿರುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತವೆ ಎಂದರು.
ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಸಮಸ್ಯೆಗಳನ್ನು ಸಾಧ್ಯವಾದಷ್ಟು ಆರಂಭಿಕ ಹಂತದಲ್ಲಿಯೇ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಸಲಹೆ ವ್ಯಕ್ತಪಡಿಸಿದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತ ಎಚ್.ಎಂ. ಮನುಕುಮಾರ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ. ಅಶೋಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಉಪತಹಸೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಬಿ. ಶಿವಪ್ರಸಾದ್, ತಾಪಂ ಉಪೇಂದ್ರ ಬಾಬು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
- - - -ಡಿ21ಬಿಡಿವಿಟಿ1: ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ವತಿಯಿಂದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು.