ಸಾರಾಂಶ
ಚನ್ನಪಟ್ಟಣ: ಹಾಲು ಉತ್ಪಾದಕರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 2 ರು. ಕಡಿತ ಹಾಗೂ ಬೆಂಗಳೂರು ಹಾಲು ಒಕ್ಕೂಟದ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ತಾಲೂಕಿನ ಬಮೂಲ್ ಶಿಬಿರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬುಧವಾರ ಬಮೂಲ್ ಶಿಬಿರ ಕಚೇರಿ ಮುಂದೆ ಜಮಾಯಿಸಿದ ರೈತರು, ಹಾಲು ಒಕ್ಕೂಟ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಒಂದು ಕಡೆ 3 ರು. ಕೊಟ್ಟು ಇನ್ನೊಂದು ಕಡೆ 2 ರು. ಕಿತ್ತುಕೊಳ್ಳವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ರಾಸುಗಳ ಮೇವಿನ ಅಭಾವ ಉಂಟಾಗಿದ್ದರೆ, ಇನ್ನೊಂದು ಕಡೆ ಪಶು ಆಹಾರದ ಬೆಲೆ ಏರಿಕೆಯಿಂದ ರೈತರು ತತ್ತರಿಸಿದ್ದಾರೆ. ಇಂತಹ ಸಮಯದಲ್ಲಿ ಬಮೂಲ್ ಹಾಲಿಗೆ 2 ರು. ಕಡಿತ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕೂಡಲೇ ಬಮೂಲ್ ಆದೇಶ ಹಿಂಪಡೆದು ಹಾಲಿನ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬರಗಾಲ, ಹವಾಮಾನ ವೈಪರೀತ್ಯ ಹಾಗೂ ವಾತಾವರಣದಲ್ಲಿನ ಉಷ್ಣಾಂಶದ ಹೆಚ್ಚಳದಿಂದ ಪಶುಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಬೆಲೆ ಏರಿಕೆಯಿಂದ ಹಾಲು ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಆದರೆ, ಇದನ್ನು ಪರಿಗಣಿಸದ ಒಕ್ಕೂಟ ಏಕಾಏಕಿ ಹಾಲಿನ ಬೆಲೆಯನ್ನು 2 ರು. ಕಡಿತಗೊಳಿಸುವ ಮೂಲಕ ಹೈನೋದ್ಯಮಿಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರೈತರಿಗೆ ಅನ್ಯಾಯ:
ಕೆಎಂಎಫ್, ಎನ್‌ಡಿಡಿಬಿ ಸೇರಿದಂತೆ ಎಲ್ಲ ಹಾಲು ಒಕ್ಕೂಟಗಳು ಹಾಗೂ ಪಶು ಸಂಗೋಪನಾ ಇಲಾಖೆ ರೈತರು ಪೂರೈಸುವ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿವೆ. ರಾಸುಗಳ ನಿರ್ವಹಣೆ, ಹಾಲು ಉತ್ಪಾದನಾ ವೆಚ್ಚ ಎಲ್ಲವನ್ನು ಗಣನೆಗೆ ತೆಗೆದುಕೊಂಡು ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದಿದ್ದರೆ, ಇಂದು ರೈತರು ಪ್ರತಿಭಟನೆ ನಡೆಸುವ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ತಿಳಿಸಿದರು.ಅವಶ್ಯಕತೆಗಿಂತ ಅಧಿಕ ವೆಚ್ಚ:
ಬಮೂಲ್ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ, ಅಲ್ಲಿರುವ ಅನಗತ್ಯ ಆಡಳಿತ್ಮಾಕ ವೆಚ್ಚ, ಅಗತ್ಯಕ್ಕೂ ಮೀರಿದ ಸಿಬ್ಬಂದಿ, ಅವರಿಗೆ ನೀಡುವ ಸೌಲಭ್ಯಗಳ ವೆಚ್ಚ, ಪಾರದರ್ಶಕತೆ ಇಲ್ಲದ ಖರೀದಿ ನೀತಿಯಿಂದಾಗಿ ಖರ್ಚು ದುಬಾರಿಯಾಗುತ್ತಿದೆ. ಒಕ್ಕೂಟದ ಅಧಿಕಾರಿಗಳಿಗೆ ಜೀವನ ನಿರ್ವಹಣೆ ಸೂಚ್ಯಂಕ ಆಧಾರಿತವಾಗಿ ಸಂಬಳ ಹಾಗೂ ಭತ್ಯೆಗಳು ದೊರೆಯುತ್ತವೆ. ಆದರೆ ಹಾಲು ಪೂರೈಸುವ ರೈತರಿಗೆ ಯಾವುದೇ ಸೂಚ್ಯಂಕವಿಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.ಇನ್ನಾದರೂ ಹಾಲು ಒಕ್ಕೂಟ ತನ್ನ ರೈತ ವಿರೋಧಿ ಧೋರಣೆಯನ್ನು ಬದಲಿಸಿಕೊಳ್ಳಬೇಕು. ರೈತರು ಪೂರೈಕೆ ಮಾಡುವ ಹಾಲಿನ ದರವನ್ನು ಹೆಚ್ಚಿಸುವ ಜತೆಗೆ ನಮ್ಮ ವಿವಿಧ 17 ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ.
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ, ರೈತ ಮುಖಂಡರಾದ ಮಲ್ಲಿಜಾರ್ಜುನ ಗೌಡ, ಮಂಜುನಾಥ, ಸಿದ್ದಪ್ಪ, ನರಸಿಂಹೇಗೌಡ, ದೇವರಾಜು, ಮಲ್ಲಿಕಾರ್ಜುನ್, ಶೋಭಾ ಇತರರು ಉಪಸ್ಥಿತರಿದ್ದರು.ಕೋಟ್............
ರೈತರು ಬರಗಾಲದಿಂದ ಕಂಗೆಟ್ಟಿರುವ ಹೊತ್ತಿನಲ್ಲಿ ಬಮೂಲ್ ರೈತರು ಪೂರೈಸುವ ಹಾಲಿಗೆ 2 ರು. ಕಡಿತ ಮಾಡಿರುವುದು ಅವೈಜ್ಞಾನಿಕ ಕ್ರಮ. ರೈತ ಸಂಕಷ್ಟ ಪರಿಗಣಿಸದೇ ಒಕ್ಕೂಟ ತೆಗೆದುಕೊಳ್ಳುತ್ತಿರುವ ನಿರ್ಧಾರ ನೋಡಿದರೆ, ಬಮೂಲ್ ಅನ್ನು ಖಾಸಗೀಕರಣಗೊಳಿಸುವ ಹುನ್ನಾರದಂತೆ ಭಾಸವಾಗುತ್ತಿದೆ. ಕೂಡಲೇ ಹಾಲಿನ ಬೆಲೆಯನ್ನು ಹೆಚ್ಚಿಸದಿದ್ದಲ್ಲಿ ಎಲ್ಲ 17 ಒಕ್ಕೂಟಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ.-ಸಿ.ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡಪೊಟೋ೨೨ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದ ಬಳಿ ಬಮೂಲ್ ಶಿಬಿರ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.