ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಹಾಸ್ಟೆಲ್ ಮಕ್ಕಳ ಸಮಸ್ಯೆ ಕೊನೆಗೊಳ್ಳಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಿಂಗಳಿಗೆ ಒಂದು ಬಾರಿಯಾದರೂ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಲಹೆ ನೀಡಿದೆ.ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಭಾಗೀದಾರ ಇಲಾಖೆಗಳ ಸಭೆಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮತ್ತು ಸದಸ್ಯರು, ಹಾಸ್ಟೆಲ್‌ಗಳಲ್ಲಿನ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಹಾಸ್ಟೆಲ್ ಕಟ್ಟಡದ ಮೇಲೆ ಸೋಲಾರ್ ಫಲಕ ಕಾಣಿಸುತ್ತವೆ. ಆದರೆ, ಬೆಳಗ್ಗೆ ಸ್ನಾನಕ್ಕೆ ಬಿಸಿ ನೀರು ಸಿಗಲ್ಲ. ಸ್ನಾನ ಮಾಡದ ಕಾರಣಕ್ಕೆ ಎಷ್ಟೋ ಮಕ್ಕಳಲ್ಲಿ ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕೆಲ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ಮಕ್ಕಳಿಗೆ ಪ್ರವೇಶ ಕೊಡಲಾಗುತ್ತದೆ. ಈ ಮಕ್ಕಳು ಹಾಸ್ಟೆಲ್‌ನಲ್ಲಿ ಊಟ, ತಿಂಡಿ ಮಾಡುತ್ತಾರೆ. ಆದರೆ, ವಾಸ್ತವ್ಯಕ್ಕೆ ಮನೆಗೆ ಮರಳುತ್ತಾರೆ. ಹಾಸ್ಟೆಲ್‌ನಲ್ಲಿ ಹಾಜರಾತಿ, ಮನೆಯಲ್ಲಿ ವಸತಿ ಎಂಬಂತಾಗಿದೆ. ಇದರಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ ಎಂದರು.
ಅಧಿಕಾರಿಗಳ ಗೈರು, ಅಸಮಾಧಾನ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಕಾಯ್ದೆಗಳ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕಡಕ್ ಎಚ್ಚರಿಕೆ ನೀಡಿದೆ.ಆರ್‌ಟಿಇ, ಫೋಕ್ಸೊ, ಬಾಲ ನ್ಯಾಯ ಕಾಯ್ದೆ ಅನುಷ್ಠಾನ ಕುರಿತಾದ ಸಭೆಯಲ್ಲಿ ಶಿಕ್ಷಣ, ಪೊಲೀಸ್, ಕಾರ್ಮಿಕ, ಸಮಾಜ ಕಲ್ಯಾಣ, ಆರ್‌ಟಿಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ, ಕಾರ್ಯಕ್ರಮಗಳ ಅನುಷ್ಠಾನ ಕುರಿತು ಸಮಾಧಾನಕರ ಮಾಹಿತಿ ನೀಡಲಿಲ್ಲ. ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಸಭೆಗೆ ಬಂದವರಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ. ಅಪೂರ್ಣ ಮಾಹಿತಿಗೆ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಬೇಸರ ವ್ಯಕ್ತಪಡಿಸಿದರು.
ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಮಕ್ಕಳನ್ನು ಕೋಚಿಂಗ್ ಕೇಂದ್ರದಲ್ಲಿ ಇರಿಸಲು ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸೂಚಿಸಿದರು.ಪಾಲಕರಿಂದ ನಿರ್ಲಕ್ಷ್ಯ ಎಂಬ ನೆಪ ಬೇಡ: ಮಕ್ಕಳ ವಿಷಯದಲ್ಲಿ ಪಾಲಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ನೆಪ ಹೇಳುವಂತಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆ ನಿಮ್ಮ ಜವಾಬ್ದಾರಿ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಧಿಕಾರಿಗಳಿಗೆ ಹೇಳಿದರು.
ನಾಪತ್ತೆಯಾಗಿರುವ ಮಕ್ಕಳ ಪತ್ತೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಆಯೋಗದ ಸದಸ್ಯ ಶಶಿಧರ ಕೊಸಂಬೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಈ ವರ್ಷ 37 ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿವೆ. ಇದರಲ್ಲಿ 9 ಮಕ್ಕಳನ್ನಷ್ಟೇ ಪತ್ತೆ ಹಚ್ಚಲಾಗಿದೆ. ಉಳಿದ 28 ಮಕ್ಕಳು ಏನಾದರು? ಹೇಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು.
ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆಯ ಪ್ರಕರಣ ‘ಸೊನ್ನೆ’ ಆಗಿರುವುದು ಕಳವಳಕಾರಿ ಸಂಗತಿ. ತನಿಖಾ ವ್ಯವಸ್ಥೆ ಸರಿ ಇಲ್ಲ ಎಂದು ಸಾರ್ವಜನಿಕರು ಅನುಮಾನಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಶ್ರಮಿಸಬೇಕು ಎಂದು ಹೇಳಿದರು.