ಜೂನ್‌ 18 ರಂದು ಹಾಸನದಲ್ಲಿ ಲಂಬಾಣಿ ಕಥೆ ಹೇಳುವ ‘ಗೋರ್ ಮಾಟಿ’ ಪ್ರದರ್ಶನ

| Published : Jun 19 2024, 01:10 AM IST

ಜೂನ್‌ 18 ರಂದು ಹಾಸನದಲ್ಲಿ ಲಂಬಾಣಿ ಕಥೆ ಹೇಳುವ ‘ಗೋರ್ ಮಾಟಿ’ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್‌ 19 ನೇ ತಾರೀಖು ಹಾಸನದ ಕಲಾಭವನದಲ್ಲಿ ರಂಗಾಯಣ ‘ಗೋರ್ ಮಾಟಿ’ ಎಂಬ ನಾಟಕ ಪ್ರದರ್ದಶನ ಮಾಡುತ್ತಿದೆ. ಹಾಸನದ ಉಲಿವಾಲ ಸ್ಕೂಲ್ ಆಫ್ ಡ್ರಾಮ ಈ ನಾಟಕವನ್ನು ಆಯೋಜನೆ ಮಾಡುತ್ತಿದೆ

ಬಂಜಾರ ಸಮುದಾಯ ಕಥನ । ನಾಟಕದ ಬಗ್ಗೆ ಶಿಕ್ಷಕ ಸೋಮನಾಯಕ್‌ ಮಾಹಿತಿ । ಹಾಸನದ ಉಲಿವಾಲ ಸ್ಕೂಲ್ ಆಫ್ ಡ್ರಾಮ ಆಯೋಜನೆ

ಕನ್ನಡಪ್ರಭ ವಾರ್ತೆ ಹಾಸನ

‘ನೋಡಲು ಚಂದವಿರುವ ಕಾರಣಕ್ಕೆ ನಮ್ಮನ್ನು ‘ಗೋರ್’ ಅಂತಾರೆ. ನಮ್ಮ ಸಮುದಾಯದ ಜನ ಎತ್ತರಕ್ಕೆ, ಎಣ್ಣೆಗಂಪು ಬಣ್ಣದ ಸುಂದರ ಜನಗಳು. ಮರಾಠಿ ಭಾಷೆಯಲ್ಲಿ ಸುಂದರವಾಗಿರುವ ಜನರನ್ನು ಗೋರ್ ಮಾಟಿ ಅಂತಾರೆ. ಹಾಗಾಗಿ ನಮ್ಮ ಸಮುದಾಯ ಮಹಾರಾಷ್ಟ್ರದಲ್ಲಿ ಗೋರ್ ಮಾಟಿ. ಇಲ್ಲಿ ಲಂಬಾಣಿ ಎನ್ನುತ್ತಾರೆ, ದೇಶದ ಹದಿನಾರು ರಾಜ್ಯಗಳಲ್ಲಿ ಹದಿನಾರು ಹೆಸರಿನಿಂದ ನಮ್ಮನ್ನು ಕರೆಯುತ್ತಾರೆ’ ಎಂದು ಶಿಕ್ಷಕ ಸೋಮನಾಯಕ್ ವಿವರಿಸುವಾಗ ಕಣ್ಣಿನಲ್ಲಿ ಹೊಳಪು ಮೂಡುತ್ತಿತ್ತು.

ನಗರದಲ್ಲಿ ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸೇವಾಲಾಲ್‌ ಕುಟುಂಬದ ಸೋಮನಾಯಕ್‌, ಜೂ.19 ನೇ ತಾರೀಖು ಹಾಸನದ ಕಲಾಭವನದಲ್ಲಿ ರಂಗಾಯಣ ‘ಗೋರ್ ಮಾಟಿ’ ಎಂಬ ನಾಟಕ ಪ್ರದರ್ದಶನ ಮಾಡುತ್ತಿದೆ. ಹಾಸನದ ಉಲಿವಾಲ ಸ್ಕೂಲ್ ಆಫ್ ಡ್ರಾಮ ಈ ನಾಟಕವನ್ನು ಆಯೋಜನೆ ಮಾಡುತ್ತಿದೆ ಎಂದು ಹೇಳಿದರು.

‘ಬಂಜಾರ ಎಂಬುದು ಎಲ್ಲೆಡೆ ಇರುವ ಹೆಸರು. ಈ ಬಂಜಾರ ಸಮುದಾಯದ ಜನ ಸೌಂದರ್ಯವಂತರು ಮಾತ್ರವಲ್ಲ, ಬಹಳ ಶ್ರಮಜೀವಿಗಳು. ಶ್ರಮಜೀವಿಗಳು ಮಾತ್ರವಲ್ಲ, ಕುಟಿಲತೆಯಂದ ಕುಶಲಮತಿಗಳು. ದೇಶವನ್ನು ಕಟ್ಟಿದವರ ಬಗ್ಗೆ ದೊಡ್ಡ ದೊಡ್ಡ ಪುಸ್ತಕಗಳಿವೆ, ಆದರೆ ಸ್ವಾತಂತ್ರ್ಯಕ್ಕೆ ಮುನ್ನ ಮತ್ತು ಸ್ವಾತಂತ್ರ್ಯ ನಂತರ ಈ ದೇಶದಲ್ಲಿ ಕಟ್ಟಿದ ದೊಡ್ಡ ಸೇತುವೆಗಳು, ಅಣೆಕಟ್ಟುಗಳು ಎಲ್ಲವನ್ನು ಕಟ್ಟುವುದಲ್ಲಿ ಬಂಜಾರ ಸಮುದಾಯ ಮೊದಲು ನಿಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.

ಗೆರಿಲ್ಲಾ ಯುದ್ದದಲ್ಲಿ ಪಳಗಿದ ಬಂಜಾರ ಸಮುದಾಯ ಬ್ರಿಟಿಷರಿಗೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿತ್ತು. ಅದೇ ಕಾರಣಕ್ಕೆ ಅಂದಿನ ಬ್ರಿಟಿಷ್ ಸರ್ಕಾರ ಈ ಸಮುದಾಯವನ್ನು ಇಂತಹ ಶ್ರಮಜೀವಿಗಳ ಸಮುದಾಯವನ್ನು ಕ್ರಿಮಿನಲ್ ಆಕ್ಟ್ ಮೂಲಕ ಕೆಟ್ಟವರನ್ನಾಗಿಸಿತು‌. ಬ್ರಿಟಿಷರು ತೊಲಗಿದ ನಂತರವೂ ಈ ಸಮುದಾಯಕ್ಕೆ ಅಂಟಿದ ಕಳಂಕ ಸುಲಭಕ್ಕೆ ತೊಳೆದು ಹೋಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ದೇಶದ ಅಥವಾ ಈ ಪ್ರಪಂಚದ ಯಾವುದೇ ಬುಡಕಟ್ಟು ಜನಾಂಗ ದೇಶದ್ರೋಹದ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಹಾಗೆ ನೋಡಿದರೆ ತಮ್ಮ ಅಸ್ತಿತ್ವ ಕೂಡ ಒಂದು ಸ್ವಾತಂತ್ರ್ಯ ಅಂತ ಹೇಳಿಕೊಟ್ಟವರೇ ಇಂತಹ ಸಮುದಾಯವರು. ಆದರೆ ಇಂತಹ ಸಮುದಾಯಗಳನ್ನು ಕೆಟ್ಟವು ಅಂತ ಮಾಡಿ ಅಳಿವಿನಂಚಿಗೆ ತರಲಾಯಿತು ಎಂದು ತಿಳಿಸಿದರು.

‘ಅವರ ಚಂದದ ವಸ್ತ್ರ ವಿನ್ಯಾಸ ಎಂತಹವರ ಮನಸಿನಲ್ಲಿಯೂ ಉಲ್ಲಾಸದ ಭಾವನೆ ಮೂಡಿಸುವಂತದು. ಅವರ ನೃತ್ಯ ಶೈಲಿ, ಹಾಡುಗಳು, ಅವರದೇ ಆದ ಭಾಷೆ ಬಂಜಾರ ಸಮಾಜದ ಸದೃಢತೆಗೆ ಹಿಡಿದ ಕನ್ನಡಿ. ಹದಿನೇಳನೇ ಶತಮಾನದಲ್ಲಿ ಸೇವಾಲಾಲ್ ಎಂಬ ಶ್ರೀಮಂತ ಕುಟುಂಬದ ಕುಡಿಯೊಂದು ಸಮುದಾಯದ ಚೈತನ್ಯವಾಗಿ ಬಂದ ನಂತರ ಒಂದಷ್ಟು ಜಾಗೃತಿ ಬಂಜಾರ ಸಮುದಾಯಕ್ಕೆ ದಕ್ಕಿತಾದರೂ ಸ್ವಾತಂತ್ರ್ಯ ಪೂರ್ವ ಹಾಗೂ ನಂತರವೂ ಶಾಪಗ್ರಸ್ತರಾಗಿಯೇ ಉಳಿದು ಹೋಗಿರುವ ಈ ಬಂಜಾರರ ಬಗ್ಗೆ ನಮ್ಮ ಅರಿವು ವಿಸ್ತರಿಸಲೇ ಇಲ್ಲ’ ಎಂದು ವಿಷಾದಿಸಿದರು.

ರಂಗಾಯಣದ ನಿರ್ಮಲಾ ಹಿರೇಮಠ ಅವರು ನಾಟಕ ಪ್ರದರ್ಶನ ಮಾಡುವ ಅವಕಾಶವಿದೆ ಎಂದು ಹೇಳಿದರು. ಸಿ. ಬಸವಲಿಂಗಯ್ಯ ನಿರ್ದೇಶನದ ಒಂದು ನಾಟಕವನ್ನು ಹಾಸನದವರು ನೋಡದಿದ್ದರೆ, ಬಂಜಾರ, ಲಂಬಾಣಿ ಅಂತೆಲ್ಲಾ ಕರೆಸಿಕೊಳ್ಳುವ ಈ ಗೋರ್ ಮಾಟಿ ಸಮುದಾಯದ ಪರಿಚಯ ಶಕ್ತವಾಗಿ ಪರಿಚಯಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.