ವೈಜ್ಞಾನಿಕ ಕಸ ವಿಲೇವಾರಿ: ತರೀಕೆರೆ ಪುರಸಭೆ ಸವಾರಿ

| Published : Jun 19 2024, 01:09 AM IST

ವೈಜ್ಞಾನಿಕ ಕಸ ವಿಲೇವಾರಿ: ತರೀಕೆರೆ ಪುರಸಭೆ ಸವಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲೇ ಅಪರೂಪವೆನಿಸಿದ ಕಪ್ಪು ಸೈನಿಕ ಹುಳುವಿನಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಾರಾಟಕ್ಕೆ ಸಿದ್ಧತೆ. ಶೀಘ್ರದಲ್ಲೇ ಪಟ್ಟಣದ 10 ಸಾವಿರ ಮನೆಗಳಿಗೆ ಡಸ್ಟ್ ಬಿನ್ - ಕಸ ಸಂಗ್ರಹಿಸುವ ಮತ್ತೆರಡು ಹೊಸ ಟಿಪ್ಪರ್ ಸೇರ್ಪಡೆ

ಅನಂತ ನಾಡಿಗ್

ಕನ್ನಡಪ್ರಭ ವಾರ್ತೆ ತರೀಕೆರೆ

ಕಸಮುಕ್ತ ಪಟ್ಟಣವಾಗಿಸುವಲ್ಲಿ ಶ್ರಮಿಸಿ ಇತ್ತೀಚೆಗಷ್ಟೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿರಿ ಮಿರಿ ಮಿಂಚಿದ್ದ ತರೀಕೆರೆ ಪುರಸಭೆ, ಇದೀಗ ಈ ಹಾದಿಯಲ್ಲಿ ಇನ್ನಷ್ಟು ಮುಂದೆ ಸಾಗಲು, ಸಾರ್ವಜನಿಕರ ಆರೋಗ್ಯ, ಪಟ್ಟಣದ ಸೌಂದರ್ಯ, ಸ್ವಚ್ಛತೆ, ಒಳ್ಳೆ ಪರಿಸರ ಕಾಪಾಡುವ ಕಾರ್ಯಗಳಿಗೆ ಸಾಣೆ ಹಿಡಿಯವ ಕಾರ್ಯಕ್ಕೆ ಸದ್ದುಗದ್ದವಿಲ್ಲದೆ ಸಿದ್ಧಗೊಂಡಿದೆ.

ಯಾವುದೇ ಪುರಸಭೆ, ನಗರಸಭೆಗಳಿಗೆ ಕಸ ವಿಲೇವಾರಿ ಬಹು ದೊಡ್ಡ ಕೆಲಸ, ಜವಾಬ್ದಾರಿ, ಕ್ಲಿಷ್ಟವಾದ ಕಾರ್ಯ. ಪಟ್ಟಣ ವ್ಯಾಪ್ತಿಯಲ್ಲಿ ದಿನ ನಿತ್ಯ ತೆಗೆದಷ್ಟೂ ಕಸ ರಕ್ತ ಬೀಜಾಸುರನಂತೆ ಮತ್ತೆ ಮತ್ತೆ ಜೀವ ಪಡೆದುಕೊಳ್ಳತ್ತಲೇ ಇರುತ್ತದೆ. ತರೀಕೆರೆ ಪುರಸಭೆ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಒಣ ಕಸ, ಹಸಿ ಕಸ, ಉದ್ಯಾನವನಗಳ ಮರಗಳ ಎಲೆಗಳು ಹೀಗೆ ಒಂದೇ ಎರಡೇ ಕಸದ ನಾನಾ ರೂಪಗಳನ್ನು ದಿನ ಬೆಳೆಗಾಗುವುದರೊಳಗೆ ಶುಚಿಗೊಳಿಸಲೇಬೇಕು. ನಿಜಕ್ಕೂ ಇದು ಸವಾಲಿನ ಕೆಲಸವೇ ಹೌದು.

ತರೀಕೆರೆ ಪುರಸಭೆ ಈ ಸವಾಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಕಸ ಸಂಗ್ರಹಣೆ, ಸಮರ್ಪಕ ವಿಲೇವಾರಿ ಹಾಗೂ ಕಸವನ್ನು ಆರ್ಥಿಕವಾಗಿ ಮರುಬಳಕೆ ಮಾಡಿಕೊಳ್ಳುವ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ದಿಟ್ಟ ಹೆಜ್ಜೆ ಇಟ್ಟು ಜನಮೆಚ್ಚುವಂತೆ ಯಶ ಸಂಪಾದಿಸಿದೆ.16 ಟನ್ ಕಸ:

ಪುರಸಭೆ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲ 23 ವಾರ್ಡ್‌ಗಳ ಪ್ರತಿ ಮನೆ ಬಾಗಿಲಿಗೆ ತೆರಳಿ ಟಿಪ್ಪರ್, ಟ್ರ್ಯಾಕ್ಟರ್ ಮೂಲಕ ವಿವಿಧ ಬಗೆ ಕಸ ಸಂಗ್ರಹಣೆ ಕಾರ್ಯ ನಿರ್ವಹಿಸುತ್ತಿದೆ. ನಿತ್ಯ ಬೆಳಗ್ಗೆ ಒಂದು ಬಾರಿ ಜನವಸತಿಗೆ, ದಿನಕ್ಕೆರಡು ಬಾರಿ ಇತರೆಡೆ ಕಸ ಸಂಗ್ರಹಿಸುತ್ತಿದ್ದು, ಪ್ರತಿನಿತ್ಯ ಸುಮಾರು 16 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಸಂಗ್ರಹಣೆ ಎಷ್ಟು ಮುಖ್ಯವೋ ವಿಲೇವಾರಿಯೂ ಕೂಡ ಅಷ್ಟೇ ಪ್ರಮುಖವಾಗಿದೆ.

ಈ ರೀತಿ ಕಾರ್ಯ ಸ್ಥಳೀಯ ಪುರಸಭೆ ತನ್ನ ಆದ್ಯ ಕರ್ತವ್ಯವೆಂದೇ ಪರಿಗಣಿಸಿ ಕಸ ಸಂಗ್ರಹಣೆ ಮತ್ತು ಅದರ ವಿಲೇವಾರಿಯಲ್ಲಿ ಶಿಸ್ತನ್ನು ಕಾಪಾಡಿಕೊಂಡು ಅಚ್ಚುಕಟ್ಟಾಗಿನಿರ್ವಹಿಸಿ, ಕಸವನ್ನು ವೈಜ್ಞಾನಿಕವಾಗಿ ಉತ್ಕೃಷ್ಟ ಗೊಬ್ಬರವನ್ನಾಗಿ ಮಾರ್ಪಡಿಸಿ, ಪುರಸಭೆ ಖಜಾನೆಗೆ ಲಾಭದಾಯಕವಾಗಿ ಆದಾಯ ಬರುವಂತೆ ಕಸವನ್ನು ನವೀಕರಿಸುತ್ತಿರುವುದೇ ಅಚ್ಚರಿಮೂಡಿಸುವ ವಿಶೇಷ ಸಂಗತಿಯಾಗಿದೆ.11 ಎಕರೆ ವಿಶಾಲವಾದ ಕಾಂಪೋಸ್ಟ್ ಯಾರ್ಡ್:

ಪಟ್ಟಣ ಸಮೀಪ ಹೊರವಲಯದಲ್ಲಿ ಪುರಸಭೆ ಕಸ ಸಂಗ್ರಹಣೆಗಾಗಿ, ಕಸ ವಿಲೇವಾರಿಗೆ ಮತ್ತು ತ್ಯಾಜ್ಯ ಪದಾರ್ಥಗಳಿಂದ ಗೊಬ್ಬರ ತಯಾರಿಸಲು ಹಾಗೂ ಸ್ಥಳದಲ್ಲಿಯೇ ಮಾರಾಟ ಮಾಡಲು ಪುರಸಭೆಯು 11 ಎಕರೆಯಷ್ಟು ವಿಶಾಲವಾದ ಸ್ಥಳ ಹೊಂದಿದೆ. ದಿನ ನಿತ್ಯ ಪಟ್ಟಣದಲ್ಲಿ ಸಂಗ್ರಹವಾದ ವಿವಿಧ ಬಗೆ ಕಸ ವಿಂಗಡಿಸಲಾಗುತ್ತದೆ, ಕಾಂಪೋಸ್ಟ್ ಯಾರ್ಡನಲ್ಲಿ ವೈಜ್ಞಾನಿಕವಾಗಿ ಕಸ ಮರು ಬಳಕೆ ಮಾಡಲು ದೊಡ್ಡ ದೊಡ್ಡ ಬೆಲೆ ಬಾಳುವ ಯಂತ್ರ ಅಳವಡಿಸಲಾಗಿದೆ. ದಿನವಿಡೀ ಶ್ರಮ ಪಟ್ಟು ಪೌರಕಾರ್ಮಿಕರು ಇಲ್ಲಿ ಕಸ ಬೇರ್ಪಡಿಸುತ್ತಾರೆ.ಉತ್ಕೃಷ್ಟ ಗುಣಮಟ್ಟದ ಗೊಬ್ಬರ:

ದೇಶದಲ್ಲೇ ಬಹು ಅಪರೂಪ ಎನ್ನಲಾದ ದೇಶೀ ಮಾದರಿ ಕಪ್ಪು ಸೈನಿಕ ಹುಳು ಮೊಟ್ಟೆ ಉತ್ಪಾದಕ ಘಟಕ ಇಲ್ಲಿ ಸ್ಥಾಪಿಸಲಾಗಿದೆ. ವಿವಿಧ ಬಗೆ ಕಸ ಸಂಸ್ಕರಿಸಿ, ಪ್ರಕೃತಿದತ್ತವಾಗಿ ಕಪ್ಪು ಸೈನಿಕ ಹುಳುಗಳನ್ನು ಆಕರ್ಷಿಸಿ ಎರೆ ಹುಳು ಗೊಬ್ಬರ ತಯಾರಿಸುವ ಮಾದರಿಯಲ್ಲಿ ಕೇವಲ 25 ದಿನಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ. ಹೀಗೆ ತಯಾರಿಸಲಾದ ಗೊಬ್ಬರದ ಮಾದರಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆಯಲಾಗಿದೆ. ಸ್ವಚ್ಛ ಸರ್ವೇಕ್ಷಣ್ ಯೋಜನೆ ನೆರವಿನಿಂದ ಕಾಂಪೋಸ್ಟ್ ಯಾರ್ಡ್‌ನಲ್ಲಿ ಸ್ಥಾಪಿಸಿರುವ ಅತ್ಯಾಧುನಿಕವಾದ ಯಂತ್ರಗಳ ಸಹಕಾರದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಉಪಯುಕ್ತವಾದ ಗೊಬ್ಬರ ತಯಾರಿಕಾ ಘಟಕವನ್ನು ಆರಂಭಿಸಲಿದ್ದು, ಶೀಘ್ರದಲ್ಲೇ ಪುರಸಭೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ. ಈ ಅಪರೂಪದ ಯಂತ್ರವನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಮತ್ತಿತರ ಹಿರಿಯ ಅಧಿಕಾರಿಗಳ ತಂಡ ಕೂಡ ಘಟಕಕ್ಕೆ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ "ಕನ್ನಡಪ್ರಭ " ಕ್ಕೆ ತಿಳಿಸಿದ್ದಾರೆ.ಯಾರ್ಡ್‌ನಲ್ಲೆ ಪ್ರಯೋಗ:

ಪೌರಕಾರ್ಮಿಕರು ದಿನವಿಡೀ ಬಹಳ ಶ್ರಮಪಟ್ಟು ಕಸ ಸಂಸ್ಕರಿಸಿ ಸಿದ್ಧಗೊಳಿಸುವ ಉತ್ಕೃಷ್ಟವಾದ ಗೊಬ್ಬರದ ಗುಣಮಟ್ಟ ಪರೀಕ್ಷಿಸಲೆಂದೇ ಸ್ವತಃ ಯಾರ್ಡ್‌ನಲ್ಲೇ ವಿವಿಧ ಬಗೆ ಹಣ್ಣಿನ ಗಿಡಗಳನ್ನು ಪ್ರಾಯೋಗಾತ್ಮಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತರೀಕೆರೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಕಾಯಿಲೆಗಳು ಪಟ್ಟಣ ಪ್ರವೇಶಿಸದಂತೆ ತಡೆಗಟ್ಟಿ, ಸಾರ್ವಜಿನಿಕರ ಆರೋಗ್ಯ ಕಾಪಾಡುವ ಹಿನ್ನೆಲೆ ಪುರಸಭೆ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ, ಟಿಪ್ಪರ್ ಚಾಲಕರು, ಟ್ರ್ಯಾಕ್ಟರ್ ಚಾಲಕರು, ಪುರಸಭೆ ದಫೇದಾರ್, ಸಿಬ್ಬಂದಿ ಪರಿಶ್ರಮ ಶ್ಲಾಘನೀಯವಾಗಿದ್ದು ಪುರಸಭೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ತಿಳಿಸಿದ್ದು, ಶೀಘ್ರದಲ್ಲಿಯೇ ಪಟ್ಟಣದ ಸುಮಾರು 10 ಸಾವಿರ ಮನೆಗಳಿಗೆ ಡಸ್ಟ್ ಬಿನ್ ವಿತರಿಸಲಾಗುವುದು. ಅಲ್ಲದೆ ಕಸ ಸಂಗ್ರಹಣೆಗಾಗಿ ಎರಡು ಟಿಪ್ಪರ್ ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ನಗರ ಹಸಿರೀಕರಣ:

ಪಟ್ಟಣದಲ್ಲಿ ಸ್ಥಳಾವಕಾಶವಿರುವ ಆಯ್ದ ಉದ್ಯಾನವನಗಳು ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅರಣ್ಯ ಇಲಾಖೆ ನೆರವಿನಿಂದ ಸುಮಾರು ಐನೂರಕ್ಕೂ

ಹೆಚ್ಚು ವಿವಿಧ ಬಗೆ ಸಸಿ ನೆಟ್ಟು ಪೋಷಿಸಲಾಗಿದ್ದು ತನ್ಮೂಲಕ ಪಟ್ಟಣ ಹಸಿರೀಕರಣಗೊಳಿಸುವತ್ತ ಪುರಸಭೆ ಪಣ ತೊಟ್ಟಿದೆ.