ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ:ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನ್‌ಲೈನ್ ಕಾರ್ಯಭಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅನೇಕ ಆಡಳಿತಾತ್ಮಕ ಹಾಗೂ ತಾಂತ್ರಿಕ ಕೆಲಸಗಳನ್ನು ತಮ್ಮ ವೈಯಕ್ತಿಕ ಮೊಬೈಲ್‌ಗಳ ಮೂಲಕ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಶಿಕ್ಷಕರು ಕ್ಯಾಮಸ್ (ಕರ್ನಾಟಕ ಅಡ್ವಾನ್ಸ್ಡ್ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) ಮೂಲಕ ಹಾಜರಾತಿ ದಾಖಲಿಸುವುದರಿಂದ ಹಿಡಿದು ಎಲ್‌ಬಿಎ (ಪಾಠ-ಆಧಾರಿತ ಮೌಲ್ಯಮಾಪನ), ಸೇತುಬಂಧ ಪರೀಕ್ಷೆಗಳ ಗ್ರೇಡ್ ನಮೂದು ಸೇರಿದಂತೆ ವಿವಿಧ ಮೌಲ್ಯಾಂಕನದ ಮಾಹಿತಿ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಪಠ್ಯಪುಸ್ತಕ, ಸಮವಸ್ತ್ರ, ಶೂ ವಿತರಣೆ ಮಾಹಿತಿ, ಬಿಸಿಯೂಟ ಯೋಜನೆ ವರದಿ, SATS ದಾಖಲಾತಿ, ಬಿಎಲ್‌ಒ ಚುನಾವಣಾ ಕಾರ್ಯ, ಅಂಗವಿಕಲ ಮಕ್ಕಳ ಮಾಹಿತಿ, ಇನ್‌ಸ್ಪೈರ್ ಅವಾರ್ಡ್ ಮಾನಕ್, ಶಿಕ್ಷಣ ಸಹಪೈಲಟ್, ಇಕೋ ಕ್ಲಬ್, ಆಧಾರ್ ಐಡಿ ಸೇರಿದಂತೆ ಹಲವು ಆನ್‌ಲೈನ್ ಪೋರ್ಟಲ್‌ಗಳಲ್ಲಿ ನಿರಂತರ ಮಾಹಿತಿ ನಮೂದಿಸಬೇಕಾಗಿದೆ.ಇದರೊಂದಿಗೆ ಇಲಾಖೆಯಿಂದ ಕೇಳಲಾಗುವ ವಿವಿಧ ಸ್ಪ್ರೆಡ್‌ಶೀಟ್ ಮಾಹಿತಿ, ಕಾರ್ಯಕ್ರಮಗಳ ವರದಿಗಳ ಸಾಫ್ಟ್ ಕಾಪಿ ಸಲ್ಲಿಕೆ ಹಾಗೂ ಇತರ ಆನ್‌ಲೈನ್ ವರದಿ ಕಾರ್ಯಗಳು ಶಿಕ್ಷಕರ ಮೇಲಿನ ಒತ್ತಡ ಹೆಚ್ಚಿಸಿವೆ. ಈ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಬಹುತೇಕ ಶಾಲೆಗಳಲ್ಲಿ ಸಮರ್ಪಕ ಕಂಪ್ಯೂಟರ್ ವ್ಯವಸ್ಥೆ, ಶಾಶ್ವತ ಇಂಟರ್ನೆಟ್ ಸೌಲಭ್ಯಗಳಿಲ್ಲ. ಪರಿಣಾಮವಾಗಿ ಶಿಕ್ಷಕರು ತಮ್ಮ ಸ್ವಂತ ಮೊಬೈಲ್, ಡೇಟಾ ಹಾಗೂ ಇಂಟರ್‌ನೆಟ್ ಸಂಪರ್ಕ ಬಳಸಿಕೊಂಡೇ ಇಲಾಖೆಯ ಅಧಿಕೃತ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಆರೋಗ್ಯ ಸಮಸ್ಯೆ:
ಶಿಕ್ಷಕರ ಪ್ರಕಾರ ಪ್ರತಿದಿನ ಮಕ್ಕಳಿಗೆ ಪಾಠದೊಂದಿಗೆ ಹಲವು ಗಂಟೆಗಳ ಕಾಲ ಮೊಬೈಲ್ ಬಳಸುವುದರಿಂದ ಕಣ್ಣಿನ ತೊಂದರೆ, ತಲೆನೋವು, ಕುತ್ತಿಗೆ ಹಾಗೂ ಬೆನ್ನು ನೋವು ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಜತೆಗೆ ನಿರಂತರ ಡೇಟಾ ನಮೂದು ಕಾರ್ಯಗಳಿಂದ ಬೋಧನಾ ಸಮಯಕ್ಕೂ ಧಕ್ಕೆಯಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೂ ಹೆಚ್ಚಾಗಿ ಆನ್‌ಲೈನ್ ಕಾರ್ಯಭಾರಕ್ಕೆ ಹೆಚ್ಚಿನ ಸಮಯ ಕಳೆಯುತ್ತಿದ್ದು, ಇದು ಗುಣಮಟ್ಟದ ಶಿಕ್ಷಣದ ಹಿನ್ನಡೆಗೆ ಕಾರಣವಾಗಿ ಪರಿಣಮಿಸಿದೆ.ಶಿಕ್ಷಕರ ಸಂಘಟನೆಯಿಂದ ಮನವಿ:
ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ 1.65 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಶಾಲೆಗೆ ಕನಿಷ್ಠ ಒಂದು ಕಂಪ್ಯೂಟರ್ ಹಾಗೂ ಶಾಶ್ವತ ಇಂಟರ್‌ನೆಟ್ ಸಂಪರ್ಕ ಒದಗಿಸಬೇಕು ಅಥವಾ ಶಿಕ್ಷಕರಿಗೆ ಉಚಿತ ಟ್ಯಾಬ್ ಮತ್ತು ಇಂಟರ್‌ನೆಟ್ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ ಶಾಲೆಗೊಬ್ಬ ಕಂಪ್ಯೂಟರ್ ಆಪರೇಟರ್ ನೇಮಕ ಮಾಡುವುದು ಅಥವಾ ಆನ್‌ಲೈನ್ ಡೇಟಾ ನಿರ್ವಹಣೆಗೆ ಪ್ರತ್ಯೇಕ ತಾಂತ್ರಿಕ ಸಹಾಯ ವ್ಯವಸ್ಥೆ ರೂಪಿಸಬೇಕಿದೆ. ಈ ಕುರಿತು ಕಳೆದ 4-5 ವರ್ಷಗಳಿಂದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯಿಂದ ಶಿಕ್ಷಣ ಸಚಿವರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದಾರೆ. ಆದರೆ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಸರ್ಕಾರ ಇದನ್ನು ಗಂಭೀರವಾಗಿ ಚಿಂತಿಸಿ ಸೂಕ್ತ ಪರಿಹಾರ ಕಂಡುಕೊಂಡು ಶಿಕ್ಷಕರಿಗೆ ಆಗುತ್ತಿರುವ ಆನ್‌ಲೈನ್ ಕಾರ್ಯಭಾರ ಕಡಿಮೆ ಮಾಡಬೇಕಿದೆ.---------
ಕೋಟ್...ಆನ್‌ಲೈನ್ ಕಾರ್ಯಭಾರದಿಂದಾಗಿ ಶಿಕ್ಷಕರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಶಿಕ್ಷಣ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
-ವಿ.ಎಫ್.ಚುಳಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ.