ವಿವಿ ಸಾಗರ ಜಲಾಶಯ ಕೋಡಿ ಬೀಳಲು 3 ಅಡಿ ಮಾತ್ರ ಬಾಕಿ

| Published : Nov 01 2024, 12:31 AM IST

ವಿವಿ ಸಾಗರ ಜಲಾಶಯ ಕೋಡಿ ಬೀಳಲು 3 ಅಡಿ ಮಾತ್ರ ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಜೀವನಾಡಿ ಜಲಾಶಯವಾದ ವಿವಿ ಸಾಗರ ಜಲಾಶಯ ಕೋಡಿ ಬೀಳಲು ಇನ್ನು 3 ಅಡಿ ಮಾತ್ರ ಬಾಕಿ. ಗುರುವಾರದ ಹೊತ್ತಿಗೆ 127 ಅಡಿ ದಾಟಿರುವ ನೀರಿನ ಮಟ್ಟ ಮತ್ತೊಮ್ಮೆ ಕೋಡಿ ಬೀಳುವ ಸಂಭ್ರಮವನ್ನು ಜಿಲ್ಲೆಯ ಜನರಿಗೆ ಒದಗಿಸುವ ಆಶಾಭಾವನೆ ಮೂಡಿಸಿದೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಜಿಲ್ಲೆಯ ಜೀವನಾಡಿ ಜಲಾಶಯವಾದ ವಿವಿ ಸಾಗರ ಜಲಾಶಯ ಕೋಡಿ ಬೀಳಲು ಇನ್ನು 3 ಅಡಿ ಮಾತ್ರ ಬಾಕಿ. ಗುರುವಾರದ ಹೊತ್ತಿಗೆ 127 ಅಡಿ ದಾಟಿರುವ ನೀರಿನ ಮಟ್ಟ ಮತ್ತೊಮ್ಮೆ ಕೋಡಿ ಬೀಳುವ ಸಂಭ್ರಮವನ್ನು ಜಿಲ್ಲೆಯ ಜನರಿಗೆ ಒದಗಿಸುವ ಆಶಾಭಾವನೆ ಮೂಡಿಸಿದೆ.

ಎತ್ತಿನಹೊಳೆ, ಭದ್ರಾ ನೀರು ನಿರಂತರವಾಗಿ ಬಂದರೆ ಇಲ್ಲವೇ ಜಲಾಶಯದ ಮೇಲ್ಬಾಗ ಮಳೆ ಸುರಿದರೆ ವಿವಿ ಸಾಗರ ಜಲಾಶಯದ ಕೋಡಿ ಬೀಳುವ ದಿನ ತುಂಬಾ ದೂರವೇನೂ ಉಳಿದಿಲ್ಲ. ಜುಲೈ ತಿಂಗಳ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ಅ.30 ರ ಹೊತ್ತಿಗೆ 127 ಅಡಿ ಮುಟ್ಟಿದೆ.

ಕೇವಲ ನಾಲ್ಕು ತಿಂಗಳಲ್ಲಿ ಸುಮಾರು 14 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಲಿದೆ. ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥoಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ.ಮೈಸೂರು ಮಹಾರಾಜರು ನಿರ್ಮಿಸಿದ ಜಲಾಶಯ: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907ರಲ್ಲಿ ಜಲಾಶಯ ನಿರ್ಮಿಸಿದರು. ಜಲಾಶಯದ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿಯವರ ಒಡವೆ ಅಡವಿಟ್ಟು ಹಣ ಹೊಂದಿಸಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎನ್ನಲಾಗಿದೆ. ಮೈಸೂರು ಅರಸರ ದೂರದೃಷ್ಟಿಯ ಆಲೋಚನೆಯಿಂದ ನೂರಾರು ವರ್ಷಗಳಿಂದ ಈ ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿ ಸಾವಿರಾರು ಎಕರೆ ನೀರಾವರಿ ಸೌಲಭ್ಯ ಪಡೆದಿವೆ.

ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದರೂ ನೀರುಣಿಸುತ್ತಲೇ ಇರುವ ಜಲಾಷಯವು 129 ಕಿಮೀ ಉದ್ದದ ಕಾಲುವೆ ಹೊಂದಿದೆ. ಜಲಾಶಯ ನಿರ್ಮಾಣವಾಗಿ ಶತಮಾನ ಕಳೆದರೂ ಇಂದಿಗೂ ಗಟ್ಟಿ ಮುಟ್ಟಾಗಿದ್ದು, ಇದರ ನಿರ್ಮಾಣಕ್ಕೆ ಕೇವಲ ಕಲ್ಲು ಮತ್ತು ಗಾರೆಯನ್ನು ಮಾತ್ರ ಬಳಸಲಾಗಿದೆ ಎಂಬುದು ಮತ್ತೊಂದು ವಿಶೇಷ.

ಎರಡೇ ವರ್ಷಕ್ಕೆ ಮತ್ತೆ ಕೋಡಿ : ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ 1933ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಆನಂತರ ಸತತವಾಗಿ 89 ವರ್ಷಗಳ ಕಾಲ ಜಲಾಷಯ ಕೋಡಿ ಬೀಳಲೇ ಇಲ್ಲ. 2022 ರ ಸೆಪ್ಟೆಂಬರ್ ತಿಂಗಳಲ್ಲಿ 89 ವರ್ಷದ ನಂತರ ಕೋಡಿ ಬಿದ್ದ ಜಲಾಶಯ ಈ ತಲೆಮಾರಿನ ಜನಕ್ಕೆ ಆಶ್ಚರ್ಯ ಮತ್ತು ಅಪರೂಪದ ಚಿತ್ರಣ ಒದಗಿಸಿತ್ತು. ಇದೀಗ ಎರಡೇ ವರ್ಷಕ್ಕೆ ಮತ್ತೆ ಅಂತಹುದೊಂದು ಸುವರ್ಣ ಘಳಿಗೆಗೆ ತಾಲೂಕು ಮತ್ತು ಜಿಲ್ಲೆ ಸಾಕ್ಷಿಯಾಗುವ ಕ್ಷಣಗಳು ಹತ್ತಿರ ಬರುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಅವತಿ ನದಿ ಜೊತೆ ಸೇರಿ ವೇದಾವತಿ ನದಿಯಾಗಿ ಹರಿದು ವಿವಿ ಸಾಗರದ ಒಡಲು ಸೇರುತ್ತದೆ. 117 ವರ್ಷಗಳ ಇತಿಹಾಸವಿರುವ ಜಲಾಶಯದ ಎತ್ತರ 135.25 ಅಡಿ ಇದ್ದು, ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. 1933ರಲ್ಲಿ 135 ಅಡಿ, 1934ರಲ್ಲಿ 130 ಅಡಿ, 1957ರಲ್ಲಿ 125 ಅಡಿ, 1958 ರಲ್ಲಿ 124 ಅಡಿ ನೀರು ಸಂಗ್ರಹ ಕಂಡಿತ್ತು. ಆನಂತರ 2021ರಲ್ಲಿ 125 ಅಡಿ ತಲುಪಿ 2022ರಲ್ಲಿ ಕೋಡಿ ಬೀಳುವ ಮೂಲಕ 89 ವರ್ಷಗಳ ನಂತರ ಇತಿಹಾಸ ಸೃಷ್ಟಿಸಿತ್ತು.

30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯಕ್ಕೆ ಇನ್ನು ಒಂದೆರಡು ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಸೈಕ್ಲೋನ್ ಮತ್ತು ಅಕಾಲಿಕ ಮಳೆಯಿಂದಲೇ ಸಾಕಷ್ಟು ನೀರು ಹರಿದು ಬಂದಿದೆ. ಇದೀಗ ಕೋಡಿ ಬೀಳುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ತುದಿಗಾಲಲ್ಲಿ ನಿಂತಿದ್ದು ಆದಷ್ಟು ಬೇಗ ರೈತರ ಆ ಕನಸು ಈಡೇರಲಿ.